ಚಂದ್ರಶೇಖರನ್‌ ಪ್ರಕರಣ ಸಿಬಿಐ ತನಿಖೆಯಾಗಲಿ: ಪ್ರಣಾವನಂದ ಸ್ವಾಮೀಜಿ

KannadaprabhaNewsNetwork |  
Published : Jun 02, 2024, 01:45 AM ISTUpdated : Jun 02, 2024, 01:46 AM IST
ಪೋಟೊ: 01ಎಸ್‌ಎಂಜಿಕೆಪಿ05ಶಿವಮೊಗ್ಗದ ವಿನೋಬನಗರದಲ್ಲಿರುವ ಮೃತ ನೌಕರರ ಚಂದ್ರಶೇಖರನ್‌ ಅವರ ನಿವಾಸಕ್ಕೆ ಪ್ರಣಾವನಂದ ಸ್ವಾಮೀಜಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. | Kannada Prabha

ಸಾರಾಂಶ

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಸುಮಾರು 187 ಕೋಟಿ ರು. ಹಗರಣ ನಡೆದಿದೆ. ನಿಗಮದ ಹಣವನ್ನು ಬೇರೆ ರಾಜ್ಯಗಳಿಗೆ ಕಳಿಸುವುದು ಎಂದರೆ ಏನರ್ಥ? ಇದು ಇಲಾಖೆಯ ಎಂಡಿಗೆ ಗೊತ್ತಿರಲಿಲ್ಲವೇ? ಅಥವಾ ಸಚಿವರಿಗೆ ಗೊತ್ತಿಲ್ಲದೇ ಹೇಗೆ ನಡೆಯಲು ಸಾಧ್ಯ? ಎಲ್ಲರೂ ಸೇರಿ ಭ್ರಷ್ಟಾಚಾರ ನಡೆಸಿದ್ದಾರೆ. ಇವರ ಭ್ರಷ್ಟಾಚಾರಕ್ಕೆ ಚಂದ್ರಶೇಖರ್ ನಂತಹ ಪ್ರಾಮಾಣಿಕ ಅಧಿಕಾರಿಗಳು ಬಲಿಯಾಗಬೇಕಾಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಭ್ರಷ್ಟಾಚಾರ ಬಹಿರಂಗಪಡಿಸಿ ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರನ್‌ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸುವ ಜೊತೆಗೆ ಕುಟುಂಬಕ್ಕೆ ಒಂದು ಕೋಟಿ ರು. ಪರಿಹಾರ ಹಾಗೂ ಅವರ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ಕೊಡಬೇಕು ಎಂದು ಈಡಿಗ ಮಹಾಮಂಡಳದ ಅಧ್ಯಕ್ಷ ಪ್ರಣಾವನಂದ ಸ್ವಾಮೀಜಿ ಒತ್ತಾಯಿಸಿದರು.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಸುಮಾರು 187 ಕೋಟಿ ರು. ಹಗರಣ ನಡೆದಿದೆ. ನಿಗಮದ ಹಣವನ್ನು ಬೇರೆ ರಾಜ್ಯಗಳಿಗೆ ಕಳಿಸುವುದು ಎಂದರೆ ಏನರ್ಥ? ಇದು ಇಲಾಖೆಯ ಎಂಡಿಗೆ ಗೊತ್ತಿರಲಿಲ್ಲವೇ? ಅಥವಾ ಸಚಿವರಿಗೆ ಗೊತ್ತಿಲ್ಲದೇ ಹೇಗೆ ನಡೆಯಲು ಸಾಧ್ಯ? ಎಲ್ಲರೂ ಸೇರಿ ಭ್ರಷ್ಟಾಚಾರ ನಡೆಸಿದ್ದಾರೆ. ಇವರ ಭ್ರಷ್ಟಾಚಾರಕ್ಕೆ ಚಂದ್ರಶೇಖರ್ ನಂತಹ ಪ್ರಾಮಾಣಿಕ ಅಧಿಕಾರಿಗಳು ಬಲಿಯಾಗಬೇಕಾಯಿತು ಎಂದರು.

ಈ ಪ್ರಕರಣದಲ್ಲಿ ರಾಜ್ಯದ ಹಣ ಬೇರೆ ರಾಜ್ಯಕ್ಕೆ ಹೋಗಿರುವುದರಿಂದ ಸರ್ಕಾರ ಎಸ್‌ಐಟಿ ತನಿಖೆ ನೀಡಿರುವುದು ಸರಿಯಲ್ಲ. ಈ ಕೂಡಲೇ ಪ್ರಕರಣದಲ್ಲಿ ಸಿಬಿಐಗೆ ವಹಿಸಬೇಕು. ಸಚಿವ ನಾಗೇಂದ್ರರ ರಾಜೀನಾಮೆ ಪಡೆಯಬೇಕು. ಸಂಬಂಧಿಸಿದ ಅಧಿಕಾರಿಗಳ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ಹಿಂದಿನ‌ ಬಿಜೆಪಿ ಸರ್ಕಾರದಲ್ಲಿ ಕೆ.ಎಸ್.ಈಶ್ವರಪ್ಪನವರ‌ ರಾಜೀನಾಮೆ ಪಡೆಯಲಾಗಿತ್ತು. ಅದೇ ಮಾದರಿಯಲ್ಲಿ ಇಲ್ಲಿಯೂ ಶಿಕ್ಷೆಯಾಗಬೇಕು. ಹಿಂದುಳಿದ ವರ್ಗದವರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು. ಉಳಿದ ನಿಗಮಗಳಿಗೆ ಬಿಡುಗಡೆ ಮಾಡಿರುವ ಹಣದ ಮೇಲೆ ನಿಗಾ ಇಡಬೇಕು. ಯಾವುದೇ ನಿಗಮ ದಲ್ಲಿಯೂ ಇಂತಹ ಅವ್ಯವಹಾರ ನಡೆಯದಂತೆ ಎಚ್ಚರ ವಹಿಸುವಂತೆ ಆಗ್ರಹಿಸಿದರು.

ಈಡಿಗ ಸಮುದಾಯಕ್ಕೆ ಅನ್ಯಾಯವಾಗಿದೆ. ಸಂಪುಟ ಪುನರ್ ರಚನೆಯಲ್ಲಿ ಇನ್ನೊಂದು ಮಂತ್ರಿ ಸ್ಥಾನ ನೀಡಬೇಕು. ಪ್ರಜ್ವಲ್ ಪ್ರಕರಣದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಭಾವ ಚಿತ್ರಗಳಿಗೆ ಹೊಡೆಯುವ ಕೆಲಸ ಯಾರು ಮಾಡಬಾರದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ವೆಂಕಟೇಶ್ ಮೂರ್ತಿ, ಆರ್. ಪ್ರತಾಪ್, ಶಿವಾಜಿ, ನೂತನ್ ಇದ್ದರು.

ಕುಟುಂಬಸ್ಥರಿಗೆ ಸಾಂತ್ವನ

ಆತ್ಮಹತ್ಯೆ ಮಾಡಿಕೊಂಡ ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರ್ ನಿವಾಸಕ್ಕೆ ಪ್ರಣಾವನಂದ ಸ್ವಾಮೀಜಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ನಿಮ್ಮ ಪತಿಯ ಸಾವಿಗೆ ನ್ಯಾಯ ಸಿಗಬೇಕು. ನಿಮ್ಮ ಜೊತೆ ನಾವು ಇರುತ್ತೇವೆ. ಸೂಕ್ತ ಪರಿಹಾರಕ್ಕೆ ಸರ್ಕಾರದ ಮೇಲೆ ಒತ್ತಡ ತರುತ್ತೇವೆ ಎಂದು ಚಂದ್ರಶೇಖರ್ ಪತ್ನಿ ಕವಿತಾ ಹಾಗೂ ಅವರ ಮಕ್ಕಳಿಗೆ ಸಾಂತ್ವನ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!