ನಾಳೆ ಈಶಾನ್ಯ ಪದವೀಧರರ ಕ್ಷೇತ್ರ ಚುನಾವಣೆ

KannadaprabhaNewsNetwork | Published : Jun 2, 2024 1:45 AM

ಸಾರಾಂಶ

ಮತದಾನ, ಮತ ಎಣಿಕೆ ಪ್ರಕ್ರಿಯೆಗೆ ಜಿಲ್ಲಾಡಳಿತ ಸಜ್ಜು: ಜಿಲ್ಲಾಧಿಕಾರಿ ಡಾ‌. ಸುಶೀಲಾ

ಕನ್ನಡಪ್ರಭ ವಾರ್ತೆ ಯಾದಗಿರಿ

ಜೂ.3ರಂದು ನಡೆಯುವ ಕರ್ನಾಟಕ ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆ ಹಾಗೂ ಜೂ. 4ರಂದು ನಡೆಯುವ ಸುರಪುರ (ಶೋರಾಪುರ) ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಗೆ ಯಾದಗಿರಿ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜಾಗಿದೆ ಎಂದು ಜಿಲ್ಲಾಧಿಕಾರಿಯೂ ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಡಾ.ಸುಶೀಲಾ ತಿಳಿಸಿದರು.

ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಚುನಾವಣೆಯ ಮತದಾನ ಮತ್ತು ಶೋರಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆ ಸಂಬಂಧ, ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.

ಶೋರಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆಗೆ ಯಾದಗಿರಿ ನಗರದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ವ್ಯವಸ್ಥೆ ಕೈಗೊಳ್ಳಲಾಗಿದೆ. ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಪ್ರಾರಂಭವಾಗುತ್ತದೆ. ಸದರಿ ಮತ ಎಣಿಕೆ ಕೇಂದ್ರಕ್ಕೆ ಭದ್ರತೆ ಒದಗಿಸಲು ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿವೆ. ಭದ್ರತೆಗಾಗಿ ಪೊಲೀಸ್ ಅಧಿಕಾರಿ, ಸಿಬ್ಬಂದಿ, ಅರೆಸೇನಾ ಪಡೆಯನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮತಗಟ್ಟೆಗಳು ಹಾಗೂ ಮತದಾರರು: ಸರಕಾರಿ ಪದವಿ ಪೂರ್ವ ಕಾಲೇಜು ಕಕ್ಕೇರಾ ಮತಗಟ್ಟೆಯಲ್ಲಿ 393 ಮತದಾರರು, ಸರಕಾರಿ ಪದವಿ ಪೂರ್ವ ಕಾಲೇಜು ಕೆಂಭಾವಿಯಲ್ಲಿ 863, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೊಲೀಸ್ ಕಾಲೋನಿ ಶೋರಾಪುರದ ಎಡಭಾಗದಲ್ಲಿ 1,155 ಹಾಗೂ ಬಲಭಾಗದಲ್ಲಿ 1,155 ಮತದಾರರು, ಸರಕಾರಿ ಬಾಲಕೀಯರ ಪದವಿ ಪೂರ್ವ ಕಾಲೇಜು ಶಹಾಪುರದ ಎಡಭಾಗದಲ್ಲಿ 1,250 ಹಾಗೂ ಬಲಭಾಗದಲ್ಲಿ 1,116 ಮತದಾರರು, ಸರಕಾರಿ ಪದವಿ ಪೂರ್ವ ಕಾಲೇಜು ಗೋಗಿ ಕೆ 906, ಸರಕಾರಿ ಮಾದರಿ ಪ್ರಾಥಮಿಕ ಶಾಲೆ ದೋರನಹಳ್ಳಿಯಲ್ಲಿ 538, ಸರಕಾರಿ ಪದವಿ ಪೂರ್ವ ಕಾಲೇಜು 1,331, ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಬಲಭಾಗದಲ್ಲಿ 1,153 ಹಾಗೂ ಎಡಭಾಗದಲ್ಲಿ 1,134 ಮತದಾರರು, ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಗುರುಮಿಠಕಲ್ ಎಡಭಾಗದಲ್ಲಿ 793 ಹಾಗೂ ಬಲಭಾಗದಲ್ಲಿ 793 ಮತದಾರರು, ಸರಕಾರಿ ಪ್ರೌಢಶಾಲಾ ವಡಗೇರಾದಲ್ಲಿ 762, ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಯುಕೆಪಿ ಕ್ಯಾಂಪ್ ಹುಣಸಗಿಯಲ್ಲಿ 998, ಸರಕಾರಿ ಬಾಲಕೀಯರ ಪ್ರೌಢಶಾಲೆ ಕೊಡೆಕಲ್ ನಲ್ಲಿ 502 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮತದಾರರ ಗುರುತಿಗೆ ಬಳಸುವ ದಾಖಲೆಗಳು: ಮತದಾರರ ಗುರುತಿಗಾಗಿ ಆಧಾರ್‌ ಕಾರ್ಡ್, ವಾಹನ ಚಾಲನಾ ಪರವಾನಿಗೆ, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ಗುರುತಿನ ಚೀಟಿ (ರಾಜ್ಯ ಮತ್ತು ಕೇಂದ್ರ ಸರ್ಕಾರ /ಸಾರ್ವಜನಿಕ ಉದ್ದಿಮೆ/ಸ್ಥಳೀಯ ಸಂಸ್ಥೆಗಳು ಅಥವಾ ಖಾಸಗಿ ಕೈಗಾರಿಕಾ ಸಂಸ್ಥೆಗಳು), ಕಛೇರಿ ಗುರುತಿನ ಚೀಟಿ (ಲೋಕಸಭಾ ಸದಸ್ಯ/ವಿಧಾನಸಭಾ ಸದಸ್ಯ/ವಿಧಾನ ಪರಿಷತ್ ಸದಸ್ಯರು), ಪದವೀಧರ ಕ್ಷೇತ್ರದ ನೌಕರರಿಗೆ ಶಿಕ್ಷಣ ಇಲಾಖೆ ನೀಡಿದ ಸೇವಾ ಗುರುತಿನ ಚೀಟಿ, ವಿಶ್ವವಿದ್ಯಾಲಯದಿಂದ ನೀಡಲಾದ ಮೂಲ ಪದವಿ/ಡಿಪ್ಲೋಮಾ ಪ್ರಮಾಣ ಪತ್ರ, ಅಂಗವಿಕಲ ವ್ಯಕ್ತಿಗಳಿಗೆ ಅಧಿಕೃತ ಪ್ರಾಧಿಕಾರಿ ನೀಡಿದ ಮೂಲ ಪ್ರಮಾಣ ಪತ್ರ, ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯಿಂದ ಅಂಗವಿಕಲರಿಗೆ ನೀಡಲಾದ ವಿಶಿಷ್ಠ ಚೀಟಿಗಳನ್ನು ತೋರಿಸಿ ಪದವೀಧರ ಮತದಾರರು ಮತದಾನ ಮಾಡುಬಹುದು.

ಮತದಾರರ ಅನುಕೂಲಕ್ಕಾಗಿ ವೋಟರ್ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ಜಿಲ್ಲಾಧಿಕಾರಿ ಕಚೇರಿ ದೂ.ಸಂ 08473-253950, ಯಾದಗಿರಿ ತಹಸೀಲ್ದಾರ ಕಚೇರಿ 08473-253611, ಶೋರಾಪುರ ತಹಸೀಲ್ದಾರ ಕಚೇರಿ 08443-256043, ಶಹಾಪುರ ತಹಸೀಲ್ದಾರ ಕಚೇರಿ 08479-243321, ಗುರುಮಠಕಲ್ ತಹಸೀಲ್ದಾರ ಕಚೇರಿ 8708417957, ವಡಗೇರಾ ತಹಸೀಲ್ದಾರ ಕಚೇರಿ 6360077481, ಹುಣಸಗಿ ತಹಸೀಲ್ದಾರ ಕಚೇರಿಯ 9019132429 ಸಂಖ್ಯೆಗೆ ಕರೆ ಮಾಡಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.ಈ ಸಂದರ್ಭದಲ್ಲಿ ಚುನಾವಣೆ ತಹಸೀಲ್ದಾರ ಸಂತೋಷರಾಣಿ, ಶಿರಸ್ತೆದಾರ ಶಬ್ಬೀರ ಪಟೇಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಚುನಾವಣೆಗೆ 16 ಮತಗಟ್ಟೆ ಸ್ಥಾಪನೆ: ಕರ್ನಾಟಕ ಈಶಾನ್ಯ ಪದವೀಧರರ ಕ್ಷೇತ್ರ ಚುನಾವಣೆಗೆ ಜಿಲ್ಲೆಯಲ್ಲಿ ಒಟ್ಟು 16 ಮತಗಟ್ಟೆ ಸ್ಥಾಪಿಸಲಾಗಿದ್ದು, ಪುರುಷ 10,192, ಮಹಿಳಾ 4,647, ಇತರೆ 03 ಸೇರಿ ಒಟ್ಟು 14,842 ಮತದಾರರಿದ್ದಾರೆ. ಮತದಾನವು ಜೂ.3 ರಂದು ಬೆಳಗ್ಗೆ 8 ಗಂಟೆಯಿಂದ ಸಾಯಂಕಾಲ 4ರವರೆಗೆ ನಡಯಲಿದೆ.

ಮತದಾನಕ್ಕೆ ನೇರಳೆ ಬಣ್ಣದ ಸ್ಕೆಚ್ ಪೆನ್ ಬಳಕೆ: ಈಶಾನ್ಯ ಪದವೀಧರರ ಕ್ಷೇತ್ರ ದೈವಾರ್ಷಿಕ ಚುನಾವಣೆಯಲ್ಲಿ ಮತದಾರರು ಅಭ್ಯರ್ಥಿಗಳಿಗೆ ಅನುಕ್ರಮವಾಗಿ ಆಯೋಗದಿಂದ ನೀಡಲಾಗಿರುವ ನೇರಳೆ ಬಣ್ಣದ (Violet sketch pen) ಪೆನ್ನಿನಿಂದ ಮಾತ್ರ ಪ್ರಾಶಸ್ತ್ರ ಮತ ಚಲಾಯಿಸತಕ್ಕದ್ದು. ಕ್ರಮ ಸಂಖ್ಯೆ ಕೈಬಿಟ್ಟು ಮತಚಲಾಯಿಸಲಾದ ನಂತರದ ಮತಗಳು ಅಮಾನ್ಯಗೊಳ್ಳಲಿವೆ. (Invalid votes) ಎಂದು ಜಿಲ್ಲಾಧಿಕಾರಿ ತಿಳಿಸಿದರು.

Share this article