ಕನ್ನಡಪ್ರಭ ವಾರ್ತೆ ಬೆಂಗಳೂರು
ಬಾಳೆ ದಿಂಡಿನ ಶಾಂಪೂ, ಜೆಲ್ಲಿ, ಸಾಬೂನು, ಫೇಸ್‌ಕ್ರೀಂ ಮುಂತಾದ ಸೌಂದರ್ಯ ವರ್ಧಕಗಳು, ಮಾವಿನ ಖಾದ್ಯಗಳು, ಉಪ್ಪಿನಕಾಯಿ, ಆಪ್ಪೆಮಿಡಿ ಉಪ್ಪಿನಕಾಯಿ, ಮಾವಿನ ರಸ, ಹಲಸಿನಹಣ್ಣಿನ ಚಿಪ್ಸ್, ಪಕೋಡ, ಹೋಳಿಗೆ, ಜ್ಯೂಸ್ ಇತ್ಯಾದಿಗಳು ಜನರಿಗೆ ಇಷ್ಟವಾದವು.
ಒಂದೇ ಸೂರಿನಡಿಯಲ್ಲಿ 300ಕ್ಕೂ ಹೆಚ್ಚು ತರೇವಾರಿ ಮಾವಿನ ಹಣ್ಣಿನ ತಳಿಗಳು, ಶಂಕರ ಸಿದ್ದು, ಚಂದ್ರ ಹಲಸು ಸೇರಿದಂತೆ 100ಕ್ಕೂ ಹೆಚ್ಚು ಹಲಸಿನ ತಳಿಗಳು ಹಾಗೂ ನೂರು ಬಾಳೆ ಹಣ್ಣಿನ ತಳಿಗಳು ರೈತರನ್ನು ಕಣ್ಣರಳಿಸುವಂತೆ ಮಾಡಿದ್ದವು. ಮಾವು, ಹಲಸು ಮತ್ತು ಬಾಳೆ ಹಣ್ಣಿನಿಂದ ತಯಾರಿಸಿದ ವಿವಿಧ ಬಗೆಯ ತಿಂಡಿ, ತಿನಿಸುಗಳು ಖಾದ್ಯ ಪ್ರಿಯರನ್ನು ಸೆಳೆದವು. ಈ ಹಣ್ಣುಗಳಿಂದ ತಯಾರಿಸಿದ ಸೌಂದರ್ಯ ವರ್ಧಕ ಉತ್ಪನ್ನಗಳನ್ನು ಮಹಿಳೆಯರು ಸಂಭ್ರಮದಿಂದಲೇ ವೀಕ್ಷಿಸಿ, ಖರೀದಿಸಿದರು.ಮೇಳದಲ್ಲಿ ಭೌಗೋಳಿಕ ಮಾನ್ಯತೆ ಹೊಂದಿರುವ (ಜಿಐ ಟ್ಯಾಗ್) ನಂಜನಗೂಡಿನ ರಸಬಾಳೆ, ಕಮಲಾಪುರದ ಕೆಂಪುಬಾಳೆ, ಕನ್ಯಾಕುಮಾರಿಯ ಮಟ್ಟಿ ಸಿರುಮಲೈ, ತಮಿಳುನಾಡಿನ ವಿರೂಪಾಕ್ಷಿ ಬಾಳೆ, ಗೋವಾದ ಮೈನಡೋಲಿ, ಕೇರಳದ ತ್ರಿಶೂರನ ಚಂಗಲಿಕೊಡನ್ ಬಾಳೆ, ಮಹಾರಾಷ್ಟ್ರದ ಜಲಗಾಂವ್ ಜಿಐ ಟ್ಯಾಗ್ ಪಡೆದ ಬಾಳೆ ಹಣ್ಣುಗಳ ದರ್ಬಾರ ಜೋರಾಗಿದೆ. 100ಕ್ಕೂ ಹೆಚ್ಚಿನ ಬಾಳೆ ಹಣ್ಣುಗಳ ಪ್ರದರ್ಶನ ನೋಡಗರ ಗಮನ ಸೆಳೆಯಿತು. ಮಹಾರಾಷ್ಟ್ರದ ಅಲ್ಫಾನ್ಸೊ, ಅಂಕೋಲಾದ ಕರಿ ಇಶಾದ್, ರತ್ನಗಿರಿ ಸೇರಿದಂತೆ 10ಕ್ಕೂ ಹೆಚ್ಚು ಬಗೆಯ ಜಿಐ ಟ್ಯಾಗ್ ಪಡೆದಿರುವ ಮಾವಿನ ಹಣ್ಣುಗಳಿವೆ.
ಅಳಿವಿನ ಅಂಚಿನಲ್ಲಿರುವ ಮಲೆನಾಡು, ಉತ್ತರ ಕನ್ನಡದ ಪ್ರಮುಖ ಮಾವಿನ ತಳಿಗಳಲ್ಲಿ ಒಂದಾದ ಅಪ್ಪೆಮಿಡಿಯ ಹತ್ತಾರು ತಳಿಗಳು ಮೇಳದಲ್ಲಿ ಲಭ್ಯವಿದ್ದವು. ಬಾಳೆಕೊಪ್ಪ, ಸುಡೂರು ಅಪ್ಪೆಮಿಡಿ, ಮಾವಿನಕಟ್ಟೆ ಅಪ್ಪೆ, ಸಿರಿಅಪ್ಪೆ, ಪುರಪ್ಪೆ, ತುಡುಗುಣ ಅಪ್ಪೆ, ಮಾಳಂಜಿ ಅಪ್ಪದೆ, ನಂದಗಾರು ಅಪ್ಪೆ, ಜೀರಿಗೆ ಅಪ್ಪೆ, ನಾಡಿಮುಡಿ ಅಪ್ಪೆ ಹೀಗೆ ಸುಮಾರು 30ಕ್ಕೂ ಹೆಚ್ಚು ಅಪ್ಪೆಮಿಡಿ ತಳಿಗಳು ಇಲ್ಲಿದ್ದವು. ಮುಖ್ಯವಾಗಿ ಐಐಎಚ್‌ಆರ್ ಅಭಿವೃದ್ಧಿಪಡಿಸಿರುವ ಅಪ್ಪೆಮಿಡಿಗಳ ತಳಿಗಳನ್ನು ಪ್ರದರ್ಶನದ ವಿಶೇಷವಾಗಿದೆ.
ತ್ರಿಫಲ ಅಡುಗೆ ಸ್ಪರ್ಧೆ