ಬಳ್ಳಾರಿ: ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆ ಪಡೆಯಬಾರದು ಎಂದು ಆಗ್ರಹಿಸಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು, ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ಅಭಿಮಾನಿಗಳು ನಗರದಲ್ಲಿ ಬೃಹತ್ ಪಾದಯಾತ್ರೆ ನಡೆಸಿದರು.
ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಯಾವುದೇ ಹಸ್ತಕ್ಷೇಪವಿಲ್ಲದಿದ್ದರೂ ಬಿಜೆಪಿಯವರು ರಾಜೀನಾಮೆ ಕೇಳುತ್ತಿರುವುದು ಅತ್ಯಂತ ನಾಚಿಕೆಗೇಡು. ಪ್ರತಿಪಕ್ಷದ ನಾಯಕರು ರಾಜಕೀಯ ಉದ್ದೇಶಕ್ಕಾಗಿ ಇಲಾಖೆಯ ಸಚಿವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದು ಪ್ರಕರಣ ತನಿಖಾ ಹಂತದಲ್ಲಿರುವಾಗಲೇ ರಾಜೀನಾಮೆಗೆ ಒತ್ತಾಯಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ಸಚಿವ ನಾಗೇಂದ್ರ ವಾಲ್ಮೀಕಿ ಸಮುದಾಯದ ಪ್ರಗತಿಗೆ ಸಾಕಷ್ಟು ಶ್ರಮಿಸುತ್ತಿದ್ದಾರೆ. ಸಚಿವರ ವೈಯಕ್ತಿಕ ವರ್ಚಸ್ಸಿಗೆ ಧಕ್ಕೆ ತರಲು ವಿನಾಕಾರಣದ ಆರೋಪಗಳನ್ನು ಮಾಡಲಾಗುತ್ತಿದೆ. ಇದ್ಯಾವುದನ್ನು ಮುಖ್ಯಮಂತ್ರಿ ಪರಿಗಣಿಸದೆ, ನಾಗೇಂದ್ರ ಸಚಿವರಾಗಿಯೇ ಮುಂದುವರಿಯುವಂತೆ ಸೂಚಿಸಬೇಕು ಎಂದು ಆಗ್ರಹಿಸಿದರು.ಮೇಯರ್ ಶ್ವೇತಾ, ಪಕ್ಷದ ಮುಖಂಡರಾದ ಎ.ಮಾನಯ್ಯ, ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡ್ರಗಿ ನಾಗರಾಜ್, ಎಲ್.ಮಾರೆಣ್ಣ, ವೆಂಕಟೇಶ್ ಹೆಗಡೆ, ಜಗನ್, ಚಾನಾಳ್ ಶೇಖರ್, ಬಗರ್ ಹುಕುಂ ಸಮಿತಿಯ ಅಧ್ಯಕ್ಷ ತಿಮ್ಮನಗೌಡ, ಬುಡಾ ಅಧ್ಯಕ್ಷ ಜೆ.ಎಸ್.ಆಂಜಿನೇಯಲು, ಬಿ.ರಾಂ ಪ್ರಸಾದ್, ಯತೀಂದ್ರ ಗೌಡ, ಬೆಣಕಲ್ ಬಸವರಾಜಗೌಡ, ಜಾನೆಕುಂಟೆ ಬಸವರಾಜ್, ಗೋನಾಳ್ ನಾಗಭೂಷಣಗೌಡ, ಪಾಲಿಕೆ ಸದಸ್ಯರಾದ ವಿಕ್ರಮ್ (ವಿಕ್ಕಿ), ಮುಲ್ಲಂಗಿ ನಂದೀಶ್, ಪ್ರಭಂಜನ್, ಶೋಭಾ ಕಾಳಿಂಗ ಸೇರಿದಂತೆ ಪಕ್ಷದ ನೂರಾರು ಕಾರ್ಯಕರ್ತರು ಹಾಗೂ ಸಚಿವ ನಾಗೇಂದ್ರ ಅವರ ಅಭಿಮಾನಿಗಳು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಇಲ್ಲಿನ ಶ್ರೀಕನಕ ದುರ್ಗಮ್ಮ ದೇವಸ್ಥಾನದಿಂದ ಶುರುಗೊಂಡ ಪಾದಯಾತ್ರೆ ಡಬಲ್ ರಸ್ತೆ, ರಾಯಲ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿತು. ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಪಕ್ಷದ ಮುಖಂಡರು ಜಿಲ್ಲಾಡಳಿತಕ್ಕೆ ಸಲ್ಲಿಸಿದರು. ಪಾದಯಾತ್ರೆ ಶುರುವಿಗೆ ಮುನ್ನ ಶ್ರೀಕನಕ ದುರ್ಗಮ್ಮದೇವಿಗೆ ಪೂಜೆ ಸಲ್ಲಿಸಿದ ಪಕ್ಷದ ಕಾರ್ಯಕರ್ತರು 101 ತೆಂಗಿನಕಾಯಿ ಸಮರ್ಪಿಸಿದರು.