ಗಂಧಾಭಿಷೇಕದೊಂದಿಗೆ ಚಾಂಗದೇವರ ಜಾತ್ರೆ ಆರಂಭ

KannadaprabhaNewsNetwork |  
Published : Mar 19, 2025, 12:34 AM IST
ನವಲಗುಂದ ತಾಲೂಕಿನ ಯಮನೂರ ಗ್ರಾಮದ ರಾಜಾ ಬಾಗಸವಾರ ಚಾಂಗದೇವರ ಗಂಧಾಭೀಷೇಕದ ಮೂರ್ತಿ ಮೆರವಣಿಗೆ ನಡೆಯಿತು. | Kannada Prabha

ಸಾರಾಂಶ

ಭಾವೈಕ್ಯದ ಸಂಕೇತ ಸಾರಿದ ಚಾಂಗದೇವ ಪುಣ್ಯಸ್ಥಳ ಯಮನೂರಿನಲ್ಲಿ ಮಂಗಳವಾರ ಗಂಧಾಭಿಷೇಕದೊಂದಿಗೆ ಲಕ್ಷಾಂತರ ಭಕ್ತರ ನಡುವೆ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು

ನವಲಗುಂದ: ಭಾವೈಕ್ಯದ ಸಂಕೇತ ಸಾರಿದ ಚಾಂಗದೇವ ಪುಣ್ಯಸ್ಥಳ ಯಮನೂರಿನಲ್ಲಿ ಮಂಗಳವಾರ ಗಂಧಾಭಿಷೇಕದೊಂದಿಗೆ ಲಕ್ಷಾಂತರ ಭಕ್ತರ ನಡುವೆ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.

ಚಾಂಗದೇವರ ಗಂಧಾಭಿಷೇಕದ ಮೂರ್ತಿಯನ್ನು ಹೊತ್ತ ಅಭಿಷೇಕ ಬರ್ಗೆ ಹಾಗೂ ಓಂಕಾರ ಬರ್ಗೆ, ಮೊಹಿತೆಯರ ಕುಟುಂಬದಿಂದ ಪೂಜೆ ಹಾಗೂ ಮುಸ್ಲಿಂ ಧರ್ಮಗುರು ಬಾಬಾಜಾನ್ ಮಕಾಂದರ ಅವರಿಂದ ಫಾತಿಹಾ (ಓದಿಕೆ) ಏಕಕಾಲಕ್ಕೆ ನಡೆಯಿತು.

ಗಂಧಾಭಿಷೇಕಕ್ಕೆ ಸಂಬಂಧಿಸಿದಂತೆ ಬರ್ಗೆ ಮನೆತನ ಸಂತರು ಚಾಂಗದೇವನಿಗೆ ದೀಪ ಹಚ್ಚಲು ಬೆಣ್ಣಿ ಹಳ್ಳದ ನೀರು ತಂದು ಹಳ್ಳದ ನೀರಿನಿಂದ ಗರ್ಭಗುಡಿಯಲ್ಲಿ ದೀಪ ಹಚ್ಚುತ್ತಿದಂತೆ ಭಕ್ತರು ರೋಮಾಂಚನಗೊಂಡರು. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ರಸ್ತೆಯುದ್ದಕ್ಕೂ ರಾಷ್ಟ್ರೀಯ ಹೆದ್ದಾರಿ ಬೆಣ್ಣಿ ಹಳ್ಳದವರೆಗೆ ರಸ್ತೆ ಹಾಗೂ ಸೇತುವೆ ಮೇಲೆ ನಿಂತು ಮೆರವಣಿಗೆ ದರ್ಶನ ಪಡೆಯುವುದರೊಂದಿಗೆ ಪೂಜೆ ಸಲ್ಲಿಸಿದರು.

ಮಂಗಳವಾರ ಗಂಧಾಭಿಷೇಕ ಹಾಗೂ ಮಾ. 19ರಂದು ಉರೂಸ್ ಇರುವ ನಿಮಿತ್ತ ರಾಜ್ಯವಲ್ಲದೇ ಇತರೆ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಚಾಂಗದೇವರ ದರ್ಶಕ್ಕೆ ಆಗಮಿಸಿದ್ದರು. ಶಾಸಕ ಎನ್.ಎಚ್. ಕೋನರಡ್ಡಿ ದಂಪತಿ ಸಮೇತರಾಗಿ ಗಂಧಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚಾಂಗದೇವರಿಗೆ ಪೂಜೆ ಸಲ್ಲಿಸಿದರು. ಜತೆಗೆ ಕೆಪಿಸಿಸಿ ಸದಸ್ಯ ವಿನೋದ ಅಸೂಟಿ ಪಾಲ್ಗೊಂಡಿದ್ದರು. ಹೈದರಾಬಾದ್ ಕರ್ನಾಟಕ ಭಾಗದ ಭಕ್ತರು ಜಾತ್ರೆಯಲ್ಲಿ ಹೆಚ್ಚಾಗಿದ್ದರು. ಆಂಧ್ರದ ಗಡಿಭಾಗದ ಜಿಲ್ಲೆ ಹಾಗೂ ಮಹಾರಾಷ್ಟ್ರದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಕ್ಷೇತ್ರವ್ಯಾಪ್ತಿಯ ಯಮನೂರ ಸುಕ್ಷೇತ್ರಕ್ಕೆ ಬರುವ ಭಕ್ತರ ಪುಣ್ಯಸ್ನಾನಕ್ಕಾಗಿ ಬೆಣ್ಣಿ ಹಳ್ಳಕ್ಕೆ ಮೆಟ್ಟಿಲುಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಬಂದ ಭಕ್ತಾಧಿಗಳಿಗೆ ಸ್ನಾನ ಮಾಡಲು ಯಮನೂರ ಆರ್ತಿ ಎಂಬ ನಾಮಕರಣದಿಂದ ಮೊದಲನೆ ಹಂತದಲ್ಲಿ ₹12 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಕ್ರಮ ಕೈಗೊಂಡಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಶಾಸಕ ಎನ್.ಎಚ್. ಕೋನರಡ್ಡಿ "ಕನ್ನಡಪ್ರಭ "ಕ್ಕೆ ತಿಳಿಸಿದರು.ಪುಣ್ಯ ಪ್ರಾಪ್ತಿ

ಗಂಧಾಭಿಷೇಕಕ್ಕೆ ಸಂಬಂಧಿಸಿದಂತೆ ಬರ್ಗೆ ಮನೆತನ ಸಂತರು ಚಾಂಗದೇವನಿಗೆ ದೀಪ ಹಚ್ಚಲು ಬೆಣ್ಣಿ ಹಳ್ಳದ ನೀರು ತರಲು ಹೊರಡುವ ಸಮಯದಲ್ಲಿ ರಸ್ತೆಯ ಮೇಲೆ ಹಲವು ಭಕ್ತರು ಬೆನ್ನು ಮೇಲಾಗಿ ಮಲಗಿದರು. ಸಂತರ ಪಾದ ಸ್ಪರ್ಶದಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಭಕ್ತವೃಂದದಲ್ಲಿದೆ.

- ವಿಠ್ಠಲ ಕರಕರಡ್ಡಿ, ಕಾಂಗ್ರೆಸ್ ಮುಖಂಡರುತಿಂಗಳ ಕಾಲ ಜಾತ್ರೆ

ಯಮನೂರ ಚಾಂಗದೇವ ರಾಜಾ ಭಾಗಸವಾರ ಗಂಧಾಭಿಷೇಕದ ನಂತರ ಒಂದು ತಿಂಗಳು ನಡೆಯುವ ಈ ನಿರಂತರ ಜಾತ್ರೆಗೆ ವಿಶೇಷವಾಗಿ ಪ್ರತಿ ಗುರುವಾರ ರಾಜ್ಯವಲ್ಲದೇ ಹೊರ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರ, ತೆಲಂಗಾಣ, ಕೇರಳ ಮುಂತಾದ ರಾಜ್ಯಗಳಿಂದ ಭಕ್ತರು ಭಾಗವಹಿಸಿ ಚಾಂಗದೇವರ ದರ್ಶನ ಪಡೆಯುತ್ತಾರೆ.

- ಪ್ರಭಾಕರ ಮೋಹಿತೆ, ಎನ್.ಎಚ್. ಕೋನರಡ್ಡಿ ಅಭಿಮಾನಿ ಬಳಗದ ಅಧ್ಯಕ್ಷಬೆಣ್ಣಿಹಳ್ಳದಲ್ಲಿ ಸ್ನಾನ

ರಾಜ್ಯ ಹೊರರಾಜ್ಯ ಸೇರಿ ವಿವಿಧ ಕಡೆಗಳಿಂದ ಪಾದಯಾತ್ರೆ ಮೂಲಕ ಆಗಮಿಸುವ ಭಕ್ತರಿಗೆ ಈ ನೀರಿನಲ್ಲಿ ಸ್ನಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಮನೆಮಾಡಿದೆ. ಇಂದಿಗೂ ಭಕ್ತರು ದೇವಸ್ಥಾನಕ್ಕೆ ಬರುವ ಪೂರ್ವದಲ್ಲಿ ಎಲ್ಲರೂ ಬೆಣ್ಣಿಹಳ್ಳಕ್ಕೆ ತೆರಳಿ ಅಲ್ಲಿ ಸ್ನಾನ ಮಾಡಿದ ಬಳಿಕ ದೇವರ ದರ್ಶನ ಪಡೆಯುತ್ತಾರೆ.

- ಚನಬಸಪ್ಪ ಎನ್ ಪಡೆಸೂರ, ನವಲಗುಂದ ತಾಪಂ ಮಾಜಿ ಸದಸ್ಯ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ