ಕನ್ನಡಪ್ರಭ ವಾರ್ತೆ ಅರಸೀಕೆರೆ
ಸಮಾಜದಲ್ಲಿ ಶಿಕ್ಷಣವನ್ನು ಎಲ್ಲ ವರ್ಗದವರೂ ಪಡೆಯಬೇಕು. ಶಿಕ್ಷಣವನ್ನು ಪಡೆದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ತರುವುದರ ಜೊತೆಗೆ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ನಗರಸಭೆ ಅಧ್ಯಕ್ಷ ಸಮೀವುಲ್ಲಾ ಹೇಳಿದರು.ನಗರದಲ್ಲಿ ನಗರಸಭೆ ವತಿಯಿಂದ ಇತ್ತೀಚೆಗೆ ಪ್ರತಿಭಾವಂತ ಬಡ ವಿದ್ಯಾರ್ಥಿಗಳನ್ನು ಗೌರವಿಸಿ ಪ್ರೋತ್ಸಾಹಧನದ ಚೆಕ್‌ನ್ನು ವಿತರಿಸಿ ಮಾತನಾಡಿದರು. ಸಮಾಜದಲ್ಲಿ ಶಿಕ್ಷಣ ಪಡೆಯಲು ಎಲ್ಲರಿಗೂ ಅವಕಾಶವಿದೆ. ಶಿಕ್ಷಣವೆಂಬುದು ಸಿರಿವಂತಿರ ಸ್ವತ್ತಲ್ಲ ಬಡವರು ಕೂಲಿಕಾರ್ಮಿಕರು ಸೇರಿದಂತೆ ಎಲ್ಲವರ್ಗದವರು ಪಡೆದು ತಂದೆತಾಯಿಗಳ ಆಶೋತ್ತರಗಳನ್ನು ಈಡೇರಿಸಬೇಕು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿದಾಗ ಅಂತಹ ವಿದ್ಯಾರ್ಥಿಗಳು ಮತ್ತಷ್ಟು ಸಾಧನೆ ಮಾಡಲು ಪ್ರೇರೇಪಿಸಿದಂತಾಗುತ್ತದೆ. ನಗರಸಭೆ ವತಿಯಿಂದ ಬಡವರು ಕೂಲಿಕಾರ್ಮಿಕರು ಹಾಗೂ ಇನ್ನಿತರ ವರ್ಗದವರ ವಿದ್ಯಾಭ್ಯಾಸಕ್ಕೆ ಸಹಕಾರ ನೀಡಲು ಬದ್ಧವಾಗಿದ್ದೇವೆ. ನಗರದಲ್ಲಿ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸಲು ಹಾಗೂ ಇನ್ನಿತರ ವಿದ್ಯಾರ್ಥಿಗಳನ್ನು ಶಿಕ್ಷಣಕ್ಕೆ ಅಣಿಯಾಗಿಸಲು ಇಂತಹ ಗೌರವ ಸನ್ಮಾನಗಳು ಸಹಕಾರಿಯಾಗಿವೆ ಎಂದು ಹೇಳಿದರು.
ನಗರಸಭಾ ಸದಸ್ಯೆ ಅನ್ನಪೂರ್ಣ ಮಾತನಾಡಿ, ಸಮಾಜದಲ್ಲಿ ಪ್ರತಿಯೊಬ್ಬರೂ ಉನ್ನತ ಮಟ್ಟದ ಶಿಕ್ಷಣ ಹೊಂದಲು ಅವಕಾಶವಿದೆ. ಬಡವರು ಹಾಗೂ ಮಧ್ಯಮ ವರ್ಗದವರ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸ ಪಡೆದು ಉನ್ನತ ಹುದ್ದೆಗೆ ಏರಿ ಜನರ ಸಮಸ್ಯೆಗಳನ್ನು ಬಗೆಹರಿಸುವಂತಾಗಬೇಕು. ಭಾರತ ಜಾತ್ಯತೀತ ರಾಷ್ಟ್ರವಾಗಿದ್ದು ಎಲ್ಲ ವರ್ಗದವರೂ ಶಿಕ್ಷಣ ಪಡೆಯುವಲ್ಲಿ ಮುಂದಾಗಬೇಕು ಎಂದು ಹೇಳಿದರು. ಈ ವೇಳೆ ಬಡವರು ಕೂಲಿಕಾರ್ಮಿಕರ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಗೌರವಿಸಿ ಸನ್ಮಾನಿಸಲಾಯಿತು.ನಗರಸಭಾ ಸದಸ್ಯರಾದ ಭಾಸ್ಕರ್, ವೆಂಕಟಮುನಿ ಸೇರಿದಂತೆ ನಗರಸಭಾ ಸಿಬ್ಬಂದಿ, ಪ್ರತಿಭಾವಂತ ವಿದ್ಯಾರ್ಥಿಗಳು ಪೋಷಕರು ಇದ್ದರು.
ಪೋಟೋ : ಅರಸೀಕೆರೆ ನಗರಸಭೆ ವತಿಯಿಂದ ಈಚೆಗೆ ಬಡಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿ ಪ್ರೋತ್ಸಾಹ ಧನಸಹಾಯದ ಚೆಕ್‌ನ್ನು ನಗರಸಭೆ ಅಧ್ಯಕ್ಷ ಸಮೀವುಲ್ಲಾ ವಿತರಿಸಿದರು.