ಕನ್ನಡಪ್ರಭ ವಾರ್ತೆ ಮೈಸೂರು
ರಾಜ್ಯದಲ್ಲಿ ವಕ್ಫ್ ಆಸ್ತಿ ವಿಚಾರದಲ್ಲಿ ರೈತರು ಮತ್ತು ಮುಸ್ಲೀಮರ ನಡುವೆ ಉಂಟಾಗಿರುವ ಆತಂಕವನ್ನು ಸೌಹಾರ್ದತೆಯಿಂದ ತಿಳಿಗೊಳಿಸುವ ಬದಲು ಇದಕ್ಕೆ ಬಿಜೆಪಿ ಕೋಮು ಬಣ್ಣ ಹಚ್ಚಿ ರಾಜಕೀಯಗೊಳಿಸಿದೆ ಎಂದು ಚಿಂತಕ ಶಿವಸುಂದರ್ ಖಂಡಿಸಿದರು.ನಗರದ ನಳಪಾಡ್ ಹೋಟೆಲ್ ನಲ್ಲಿ ಅಬ್ದುಲ್ ಖಾದರ್ ಶಾಹೀದ್ ಗೆಳಯರ ಬಳಗವು ಸೋಮವಾರ ಆಯೋಜಿಸಿದ್ದ ವಕ್ಫ್ ಮಂಡಳಿ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಒಮ್ಮೆ ವಕ್ಫ್ ಆಸ್ತಿಯೆಂದು ಘೋಷಿತವಾದ ಆಸ್ತಿಗಳು ಶಾಶ್ವತವಾಗಿ ವಕ್ಫ್ ಆಸ್ತಿಯಾಗಿಯೇ ಉಳಿಯುತ್ತವೆ ಎಂದರು.
ವಕ್ಫ್ ಎಂಬುವುದು ಮುಸ್ಲಿಂ ಕಾನೂನಿನಲ್ಲಿ ಯಾವುದನ್ನು ಪವಿತ್ರ ಧಾರ್ಮಿಕ ಅಥವಾ ದಾನ ಅಥವಾ ಪರೋಪಕಾರಿ ಉದ್ದೇಶಗಳೆಂದು ಪರಿಗಣಿಸುತ್ತಾರೋ ಅದಕ್ಕಾಗಿ ಶಾಶ್ವತವಾಗಿ ಕೊಟ್ಟಿರುವ ಆಸ್ತಿಯ ದತ್ತಿಯಾಗಿದೆ. ಒಮ್ಮೆ ವಕ್ಫ್ ಆಸ್ತಿ ಎಂದು ಪರಿಗಣಿತವಾದ ಆಸ್ತಿಗಳು ಶಾಶ್ವತವಾಗಿ ತಮ್ಮ ವಕ್ಫ್ ಸ್ವರೂಪವನ್ನು ಉಳಿಸಿಕೊಂಡಿರುತ್ತವೆ ಎಂದು ಅವರು ಹೇಳಿದರು.ಇನಾಮ್ ಕಾಯಿದೆಯಡಿ ಫಲಾನುಭವಿಗಳ ಪರವಾಗಿ ಪಟ್ಟಾ ಕೊಟ್ಟಿದ್ದರೂ ಈ ಹಿಂದೆ ಅದನ್ನು ವಕ್ಫ್‌ಗಾಗಿ ನೀಡಲಾಗಿದ್ದ ದತ್ತಿ ಅರ್ಥಾತ್ ವಕ್ಫ್ ಆಸ್ತಿ ಎಂಬುದನ್ನು ಇಲ್ಲವಾಗಿಸುವುದಿಲ್ಲ. ಒಮ್ಮೆ ಅದನ್ನು ವಕ್ಫ್ ಆಗಿ ನೀಡಿದ ಮೇಲೆ ಅದು ಎಂದೆಂದೆಂದಿಗೂ ವಕ್ಫ್ ಆಗಿಯೇ ಉಳಿಯುತ್ತದೆ ಮತ್ತು ಫಲಾನುಭವಿಗಳ ಹೆಸರಿನಲ್ಲಿ ಪಟ್ಟಾ ಕೊಟ್ಟ ಮಾತ್ರಕ್ಕೆ ಅದು ಆ ಆಸ್ತಿಯ ಮೂಲ ವಕ್ಫ್ ಸ್ವರೂಪವನ್ನು ಪ್ರಭಾವಿಸುವುದಿಲ್ಲ. ಇದನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ ಎಂದು ಅವರು ತಿಳಿಸಿದರು.
ಆದರೆ, ವಕ್ಫ್ ಆಸ್ತಿಯನ್ನು ಕಳೆದ 3- 4 ತಲೆಮಾರುಗಳಿಂದ ರೈತರು ಅನುಭವಿಸಿಕೊಂಡು ಉಳುಮೆ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಅವರು ಪರಿಸ್ಥಿತಿಯ ಬಗ್ಗೆಯೂ ಸರ್ಕಾರ ಚಿಂತನೆ ಮಾಡಬೇಕಿದೆ. ರೈತರು ಉಳುಮೆ ಮಾಡುತ್ತಿರುವ ಕೃಷಿ ಜಮೀನನ್ನು ಕಾಯ್ದೆ ಪ್ರಕಾರ ವಕ್ಫ್ ಆಸ್ತಿಯಾಗಿಯೇ ಉಳಿಸಿಕೊಂಡು, ಶಾಶ್ವತವಾಗಿ ರೈತರಿಗೆ ಗೇಣಿಗೆ ಕೊಟ್ಟರೆ ಇಬ್ಬರ ಆತಂಕವೂ ದೂರಾಗುತ್ತದೆ ಎಂದು ಅವರು ಸಲಹೆ ನೀಡಿದರು.ರೈತರ ಸಮಸ್ಯೆಯನ್ನು ಮುಸ್ಲೀಮರೂ ಮತ್ತು ಮುಸ್ಲೀಮರ ಸಮಸ್ಯೆಗಳನ್ನು ರೈತರೂ ಅರ್ಥ ಮಾಡಿಕೊಂಡು ಈ ಸಮಸ್ಯೆಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಸೌಹಾರ್ದತೆಯಿಂದ ಬಗೆಹರಿಸಿಕೊಳ್ಳಬೇಕು. ವಕ್ಫ್ ಆಸ್ತಿಯನ್ನು ಕೇವಲ ರೈತರು ಮಾತ್ರ ಒತ್ತುವರಿ ಮಾಡಿಕೊಂಡಿಲ್ಲ. ಹೆಚ್ಚಿನ ಪಾಲು ಮುಸ್ಲಿಮರೂ ಒತ್ತುವರಿ ಮಾಡಿಕೊಂಡಿದ್ದು, ಅದನ್ನು ಸಹ ಸಮುದಾಯದ ಮುಖಂಡರು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಅವರು ಹೇಳಿದರು.
ನಿವೃತ್ತ ಪ್ರಾಧ್ಯಾಪಕ ಪ್ರೊ. ಶಬ್ಬೀರ್ ಮುಸ್ತಾಫ, ರೈತ ಮುಖಂಡ ಮಂಜು ಕಿರಣ್, ಆಯೋಜಕ ಅಬ್ದುಲ್ ಖಾದರ್ ಶಾಹಿದ್, ಅಜೀಮುದ್ದಿನ್ ಶಾ ಇದ್ದರು.