ರಂಗಭೂಮಿ ಕಲಾವಿದ ಶೇಖರಗೌಡ ಪೊಲೀಸ್ ಪಾಟೀಲ್ ಹೇಳಿಕೆ
ಕನ್ನಡಪ್ರಭ ವಾರ್ತೆ ಕುಕನೂರುಸಾಮಾಜಿಕ ನಾಟಕಗಳಿಂದ ಬದಲಾವಣೆ ಸಾಧ್ಯ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ರಂಗಭೂಮಿ ಕಲಾವಿದ ಶೇಖರಗೌಡ ಪೊಲೀಸ್ ಪಾಟೀಲ್ ಹೇಳಿದರು.
ತಾಲೂಕಿನ ಚಂಡಿನಾಳ ಗ್ರಾಮದಲ್ಲಿ ಶ್ರೀ ದ್ಯಾಮಾಂಬಿಕಾದೇವಿ ಹಾಗೂ ಶ್ರೀ ಕರಿಯಮ್ಮದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀ ಮಾರುತೇಶ್ವರ ತರುಣ ನಾಟ್ಯ ಸಂಘ ಚಂಡಿನಾಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಚಂಡಿನಾಳ ಗ್ರಾಮದಲ್ಲಿ ಕಿತ್ತೂರಿನ ಹುಲಿ ಅರ್ಥಾತ್ ರೊಚ್ಚಿಗೆದ್ದ ರಾಯಣ್ಣ ಎಂಬ ಸುಂದರ ಸಾಮಾಜಿಕ ನಾಟಕವನ್ನು ಗ್ರಾಮದ ಕಲಾವಿದರು ಮಾಡುತ್ತಿದ್ದಾರೆ. ಈ ನಾಟಕ ಮನರಂಜನೆಯೊಂದಿಗೆ ಬದುಕಿಗೆ ಒಳ್ಳೆಯ ಸಂದೇಶ ನೀಡುತ್ತದೆ. ಹಬ್ಬದ ದಿನ, ಜಾತ್ರೆ ಸಂದರ್ಭದಲ್ಲಿ ಪೂರ್ವಜರ ಕಾಲದಿಂದಲೂ ಗ್ರಾಮೀಣ ಪ್ರದೇಶದಲ್ಲಿ ಸಾಮಾಜಿಕ, ಪೌರಾಣಿಕ, ಐತಿಹಾಸಿಕ ನಾಟಕಗಳು ಸಮಾಜದ ಪರಿವರ್ತನೆಗೆ ಕೊಡುಗೆ ನೀಡಿವೆ. ನಾಟಕಗಳು ಮನರಂಜನೆಯ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತವೆ ಎಂದರು.ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷ ಶಂಕ್ರಪ್ಪ ಲಿಂಗದಳ್ಳಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ನಾಟಕಗಳು
ಮಾಯವಾಗಿದ್ದು, ಕೆಲ ಯುವಕರು ನಾಟಕ ಪ್ರದರ್ಶನ ಮಾಡುತ್ತಿದ್ದಾರೆ. ನಾಟಕದ ಉಳಿವಿಗೆ ಎಲ್ಲರೂ ಸಹಕರಿಸಬೇಕು ಎಂದರು.ವಿಜಯಮಹಾಂತ ಸ್ವಾಮೀಜಿ ಮಾತನಾಡಿ, ನಾಟಕದಲ್ಲಿ ಬರುವ ಪಾತ್ರದ ಸನ್ನಿವೇಶಗಳಲ್ಲಿ ಒಳ್ಳೆಯದನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ, ಕೆಟ್ಟ ಸನ್ನಿವೇಶಗಳನ್ನು ಇಲ್ಲೆ ಮರೆತು ಹೋಗಬೇಕು. ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ಕೊಡುವುದರ ಜೊತೆಗೆ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯುವವರೆಗೂ ತಂದೆ-ತಾಯಿ ಪಾತ್ರ ಮುಖ್ಯ ಎಂದರು.
ಧನಲಕ್ಷ್ಮೀ ಪೌಲ್ಟ್ರಿ ಫಾರ್ಮ ವ್ಯವಸ್ಥಾಪಕ ತ್ರೀನಾಥ ರೆಡ್ಡಿ, ಕುದರಿಮೋತಿ ಗ್ರಾಪಂ ಪಿಡಿಒ ಹನುಮಂತಪ್ಪ ನಾಯಕ, ಗ್ರಾಮ ಮುಖಂಡರಾದ ಗವಿಸಿದ್ದಗೌಡ ಪೊ.ಪಾಟೀಲ್, ನಾಗಪ್ಪ ಹೊಸಮನಿ, ದೇವಪ್ಪ ಹಟ್ಟಿ, ಫಕೀರಪ್ಪ ಲಿಂಗದಳ್ಳಿ, ಶಂಕರಗೌಡ ಪೊ.ಪಾಟೀಲ್, ಸಣ್ಣ ಹನುಮಂತಪ್ಪ ಹೊಸಮನಿ, ಶಿವಕುಮಾರ ಎಮ್ಮಿ ಇತರರು ಇದ್ದರು.