ಛತ್ರಪತಿ ಶಿವಾಜಿ ಅರ್ಬನ್ ಸೊಸೈಟಿಗೆ ₹ ೧.೧೪ ಕೋಟಿ ನಿವ್ವಳ ಲಾಭ

KannadaprabhaNewsNetwork | Published : Apr 18, 2024 2:15 AM

ಸಾರಾಂಶ

ಅಳ್ನಾವರದ ಛತ್ರಪತಿ ಶಿವಾಜಿ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸೈಟಿ ಕಳೆದ ಆರ್ಥಿಕ ವರ್ಷದಲ್ಲಿ ₹೧.೧೪ ಕೋಟಿ ಲಾಭ ಗಳಿಸಿದೆ. ಕಳೆದ ಆರ್ಥಿಕ ವರ್ಷದಲ್ಲಿ ಒಟ್ಟಾರೆಯಾಗಿ ₹೨೩೯ ಕೋಟಿ ವ್ಯವಹಾರ ಮಾಡಿದೆ.

ಅಳ್ನಾವರ: ಇಲ್ಲಿನ ಛತ್ರಪತಿ ಶಿವಾಜಿ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸೈಟಿ ಲಿ. ಕಳೆದ ಆರ್ಥಿಕ ವರ್ಷದಲ್ಲಿ ₹೧.೧೪ ಕೋಟಿ ಲಾಭ ಗಳಿಸುವ ಮೂಲಕ ಗಣನೀಯವಾದ ಸಾಧನೆ ಮಾಡಿ ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದೆ ಎಂದು ಬ್ಯಾಂಕಿನ ಅಧ್ಯಕ್ಷ ಬಳಿರಾಮ ಅಳವಣಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಥಿಕ ವ್ಯವಹಾರದ ಬಗ್ಗೆ ವಿವರಿಸಿ ಕಳೆದ ಆರ್ಥಿಕ ವರ್ಷದ ಕೊನೆಗೆ ಬ್ಯಾಂಕು ₹೧.೧೧ ಕೋಟಿ ಶೇರು ಬಂಡವಾಳ ಹೊಂದಿದೆ. ₹೩೨.೧೩ ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, ₹೨೯.೯೦ ಕೋಟಿ ಸಾಲ ವಿತರಿಸಿ, ₹೨೬.೧೨ ಕೋಟಿ ಠೇವಣಿ ಸಂಗ್ರಹಿಸಲಾಗಿದೆ. ₹೪.೯೦ ಕೋಟಿ ನಿಧಿಗಳನ್ನು ಮೀಸಲಿಡಲಾಗಿದೆ. ನಿಗದಿತ ಅವಧಿಯಲ್ಲಿ ಸಾಲ ವಸೂಲಿ ಮಾಡುವ ಮೂಲಕ ಕಳೆದ ಸಾಲಿನಲ್ಲಿ ಎನ್.ಪಿ.ಎ. ಪ್ರಮಾಣ ತಗ್ಗಿಸಲಾಗಿದೆ. ಇದಕ್ಕೆ ಗ್ರಾಹಕರ ಸಹಕಾರವು ಬಹು ಮುಖ್ಯವಾಗಿದೆ ಎಂದರು.

ಹಣಕಾಸಿನ ವ್ಯವಹಾರ ಸಂಪೂರ್ಣ ಗಣಕೀಕರಣ ಮಾಡಿರುವುದರಿಂದ ಗ್ರಾಹಕರಿಗೆ ಉತ್ತಮ ಸೇವೆ ದೊರೆಯುವಂತೆ ಮಾಡಿದೆ. ಆರ್ಥಿಕ ಚಟುವಟಿಕೆ ಪಾರದರ್ಶಕವಾಗಿ ನಡೆಯುತ್ತಿದೆ. ವಿವಿದ ಬ್ಯಾಂಕುಗಳಲ್ಲಿ ಹಣ ಠೇವಣಿ ಇಡುವ ಮೂಲಕ ಗ್ರಾಹಕರ ಹಣಕ್ಕೆ ಭದ್ರತೆ ಒದಗಿಸಲಾಗಿದೆ ಎಂದು ತಿಳಿಸಿದ ಅಳವಣಿ ಅವರು, ಸೊಸೈಟಿ ಸದಸ್ಯರಿಗೆ ಯಶಸ್ವಿನಿ ಹಾಗೂ ಮತ್ತಿತರ ಸರ್ಕಾರದ ಯೋಜನೆಗಳನ್ನು ತಲುಪಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು. ಕಳೆದ ಆರ್ಥಿಕ ವರ್ಷದಲ್ಲಿ ಒಟ್ಟಾರೆಯಾಗಿ ₹೨೩೯ ಕೋಟಿ ವ್ಯವಹಾರ ಮಾಡಿದೆ. ಸದಸ್ಯರು ಮತ್ತು ಗ್ರಾಹಕರಿಗೆ ಇನ್ನು ಹೆಚ್ಚಿನ ಸೇವೆ ಒದಗಿಸಲು ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವ ಚಿಂತನೆ ಇದೆ ಎಂದು ಬಳಿರಾಮ ಅಳವಣಿ ತಿಳಿಸಿದರು.

ಈ ಸಮಯದಲ್ಲಿ ಸಂಸ್ಥಾಪಕರಾದ ಕೃಷ್ಣ ಅಷ್ಟೇಕರ, ಉಪಾಧ್ಯಕ್ಷ ಶಿವಾಜಿ ದುಲಬಾಜಿ, ನಿಂಗಪ್ಪ ಬೇಕ್ವಾಡಕರ, ಪರಶುರಾಮ ಶಿಂಧೆ, ಪರಶುರಾಮ ಬೇಕನೆಕರ, ಪರಶುರಾಮ ಕಾಕತಕರ, ವಿಷ್ಣು ಕೇಸರೇಕರ, ಚಂದ್ರಕಾಂತ ಕುಂದೇಕರ, ಶಂಕರ ಕಿರ್ಲೋಸ್ಕರ, ಫಕ್ಕಿರಪ್ಪ ಭಜಂತ್ರಿ, ರುಕ್ಮಣ್ಣ ಮಡಿವಾಳರ, ನಿಂಗರಾಜ ಮುನವಳ್ಳಿ, ಜಯಶ್ರೀ ಮೋರೆ, ಗೀತಾ ಅಷ್ಟೇಕರ, ಸುಶೀಲಾ ಪರಸನ್ನವರ, ಮುಖ್ಯ ಕಾರ್ಯನಿರ್ವಾಹಕ ಮಂಜುನಾಥ ನಂದ್ಯಾಳಕರ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.ಸಣ್ಣ, ಮಧ್ಯಮ ವ್ಯಾಪಾರಸ್ಥರಿಗಾಗಿ ಕಿರು ಸಾಲ ಯೋಜನೆ ರೂಪಿಸಿಕೊಂಡಿದ್ದು, ಜಾಮೀನು ಸಾಲ, ವಾಹನ ಸಾಲಗಳನ್ನು ಅನುಕೂಲಕರ ಬಡ್ಡಿ ದರಗಳಲ್ಲಿ ನೀಡಲಾಗುತ್ತಿದೆ ಎಂದು ಅಧ್ಯಕ್ಷ ಬಳಿರಾಮ ಅಳವಣಿ ಹೇಳಿದರು.

Share this article