ಮೂರು ತಿಂಗಳಲ್ಲಿ ಪಕ್ಷ ಸಂಘಟಿಸದಿದ್ದರೆ ಅಭ್ಯರ್ಥಿ ಬದಲಾವಣೆ : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

KannadaprabhaNewsNetwork |  
Published : Mar 03, 2025, 01:48 AM ISTUpdated : Mar 03, 2025, 12:59 PM IST
ಗೌರವ | Kannada Prabha

ಸಾರಾಂಶ

ಉಡುಪಿ ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಪ್ರಥಮ ಬಾರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗಮಿಸಿದ್ದರು. ಅವರು ಅಲ್ಲಿ ಪಕ್ಷದ ನಾಯಕರ ಸಭೆ ನಡೆಸಿದರು.

 ಉಡುಪಿ :  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕನಿಷ್ಠ 9 ಮಂದಿ ಶಾಸಕರನ್ನು ಗೆಲ್ಲಿಸಬೇಕು, ಪಕ್ಷ ಸಂಘಟನೆಗೆ 3 ತಿಂಗಳು ಕೊಡುತ್ತೇನೆ, ಇಲ್ಲದಿದ್ದಲ್ಲಿ ಅಭ್ಯರ್ಥಿಗಳನ್ನು ಬದಲಾಯಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಉಡುಪಿಯಲ್ಲಿ ಕಾಂಗ್ರೆಸ್ ನಾಯಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. 

ಭಾನುವಾರ ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಪ್ರಥಮ ಬಾರಿಗೆ ಆಗಮಿಸಿದ್ದ ಅವರು ಪಕ್ಷದ ನಾಯಕರನ್ನು ಉದ್ದೇಶಿಸಿ ಮಾತನಾಡಿದರು.ಉಡುಪಿ ಜಿಲ್ಲೆಯ ಎಲ್ಲ 5 ಸೀಟುಗಳನ್ನು ಕಾಂಗ್ರೆಸ್ ಸೋಲುವುದಕ್ಕೆ ಕಾರಣವೇನು ಎಂದು ಪ್ರಶ್ನಿಸಿದ ಅವರು, ಡಿ.ಕೆ. ಶಿವಕುಮಾರ್ ಬಣ ಅಥವಾ ಇನ್ಯಾವುದೋ ನಾಯಕರ ಬಣ ಬೇಡ, ಎಲ್ಲರದ್ದೂ ಒಂದೇ ಬಣ ಅದು ಕಾಂಗ್ರೆಸ್ ಬಣ. ಜಿಲ್ಲಾ ಕಾಂಗ್ರೆಸ್ ಮುಂದಿನ ಮೂರು ತಿಂಗಳಲ್ಲಿ ಎಲ್ಲ ಸರಿ ಮಾಡಬೇಕು. ಪಕ್ಷ ಸಂಘಟನೆ ಮಾಡಬೇಕು, ಇಲ್ಲವಾದರೆ ಎಲ್ಲವನ್ನು ಬದಲಾವಣೆ ಮಾಡಬೇಕಾಗುತ್ತದೆ, ನಮಗೆ ವ್ಯಕ್ತಿ ಮುಖ್ಯವಲ್ಲ, ಗೆಲ್ಲುವುದು ಮುಖ್ಯ ಎಂದರು.

ಎಐಸಿಸಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಎಂಬ ಕಾರ್ಯಕ್ರಮ ನೀಡಿದೆ. ಇದನ್ನು ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿಯೂ ಮಾಡಿ. ಸರ್ಕಾರಕ್ಕೆ 2 ವರ್ಷಗಳಾಗುತ್ತಿರುವ ಸಂಭ್ರಮದಲ್ಲಿ ಉಡುಪಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಪ್ರತ್ಯೇಕ ಕಾರ್ಯಕ್ರಮ ನೀಡುತ್ತೇನೆ. 5-6 ಸಚಿವರ ಒಂದು ಕೋರ್‌ ಟೀಮ್‌ ಮಾಡುತ್ತಿದ್ದೇವೆ. ಅದು ಸರ್ಕಾರ ಮತ್ತು ಪಕ್ಷ ಜೊತೆಯಾಗಿ ಕೆಲಸ ಮಾಡುತ್ತದೆ, ಸರ್ಕಾರದ ಯೋಜನೆಗಳನ್ನು ಜನತೆಗೆ ಮುಟ್ಟಿಸುವ ಕೆಲಸ ಮಾಡುತ್ತದೆ ಎಂದು ಹೇಳಿದರು.

ಯೂಥ್ ಕಾಂಗ್ರೆಸ್ ಎಲೆಕ್ಷನ್ ಆಗಿದೆ, ಅದರಲ್ಲಿ ಕೆಲವರು ಗೆದ್ದಿದ್ದೀರಿ, ನೀವು ಗೆದ್ದಿರೋದು ಬಿಜೆಪಿ ಮೇಲೆ ಅಲ್ಲ ಕಾಂಗ್ರೆಸ್ ಪಕ್ಷದ ಒಳಗೆ ಸ್ಪರ್ಧಿಸಿ ಗೆದ್ದಿದ್ದೀರಿ. ಗೆದ್ದವರು ಸೋತವರನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕು. ಪಕ್ಷದೊಳಗೆ ಗುಂಪುಗಾರಿಕೆ ಬಿಟ್ಟು ಬಿಡಿ. ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಮಾಡಿದ ಹೀರೋಗಳು ಝೀರೋ ಆಗಿದ್ದಾರೆ. ಇದನ್ನು ತಲೆಯಲ್ಲಿಟ್ಟುಕೊಳ್ಳಿ ಎಂದವರು ಕಿವಿಮಾತು ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ವಿಧಾನ ಪರಿಷತ್‌ ಸದಸ್ಯ ಐವಾನ್ ಡಿಸೋಜ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಕೆಪಿಸಿಸಿ ಉಪಾಧ್ಯಕ್ಷ ಎಂ.ಎ.ಗಫೂರ್, ಪ್ರಧಾನ ಕಾರ್ಯದರ್ಶಿಗಳಾದ ಮಿಥುನ್ ರೈ, ಜಿಲ್ಲಾ ಅಧ್ಯಕ್ಷ ಅಶೋಕ್ ಕುಮಾರ್, ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು ಮುಂತಾದವರಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...