ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಎಪಿಎಂಸಿ ಆವರಣದಲ್ಲಿ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ಮಂಡಳಿಯಿಂದ ಆಯೋಜಿಸಿದ್ದ ರಾಗಿ ಖರೀದಿ ಕೇಂದ್ರದ ಉದ್ಘಾಟಿಸಿ ಮಾತನಾಡಿದರು.
ನಮ್ಮ ಮಂಡ್ಯ ಜಿಲ್ಲೆಯ ಭಾಗದಲ್ಲಿ ಅದರಲ್ಲಿಯೂ ಕೆ.ಆರ್.ಪೇಟೆ ತಾಲೂಕಿನಲ್ಲಿ ಉತ್ತಮ ಗುಣಮಟ್ಟದ ರಾಗಿಯನ್ನು ಬೆಳೆಯಲಾಗುತ್ತದೆ. ನಮ್ಮ ರಾಗಿಯನ್ನು ಖರೀದಿ ಮಾಡಿ ನಮ್ಮ ಜನರಿಗೆ ವಿತರಿಸಿ. ಅದನ್ನು ಬಿಟ್ಟು ನಮ್ಮ ರಾಗಿಯನ್ನು ಬೇರೆ ಜಿಲ್ಲೆಗೆ ಕಳುಹಿಸಿ ಇತರ ಕಡೆಯಿಂದ ಕಳಪೆ ಗುಣಮಟ್ಟದ ರಾಗಿಯನ್ನು ತಂದು ನಮ್ಮ ಜನರಿಗೆ ನೀಡುವುದು ಸರಿಯಲ್ಲ. ಆಯಾ ಭಾಗದಲ್ಲಿ ಖರೀದಿಸಿದ ರಾಗಿಯನ್ನು ಆಯಾ ಭಾಗದಲ್ಲಿನ ಪಡಿತರ ಗ್ರಾಹಕರಿಗೆ ವಿತರಿಸಿದರೆ ಸರ್ಕಾರಕ್ಕೆ ಸಾಗಾಣಿಕೆ ವೆಚ್ಚ ಸೇರಿದಂತೆ ಇತರೆ ಹೊರೆಗಳು ಕಡಿಮೆಯಾಗಲಿವೆ ಎಂದು ಶಾಸಕ ಎಚ್.ಟಿ.ಮಂಜು ಅಭಿಪ್ರಾಯಪಟ್ಟರು.ರೈತರು ಮೋಸಗಾರರಲ್ಲ. ಅವರು ಬೆಳೆದ ರಾಗಿಯನ್ನು ಗುಣಮಟ್ಟವನ್ನು ಕಾಪಾಡಿಯೆ ಸರ್ಕಾರದ ಬೆಂಬಲ ಬೆಲೆಯಡಿಯಲ್ಲಿ ಮಾರಾಟವನ್ನು ಮಾಡುತ್ತಾರೆ. ಆದರೆ, ಮಧ್ಯವರ್ತಿಗಳು ಬೇರೆ ಭಾಗಗಳಿಂದ ರಾಗಿಯನ್ನು ಕಡಿಮೆ ಬೆಲೆಗೆ ಖರೀದಿಸಿ ನಮ್ಮದೆ ರೈತರ ಆರ್‌ಟಿಸಿಗಳನ್ನು ದುರುಪಯೋಪಡಿಸಿಕೊಂಡು ಸರ್ಕಾರಕ್ಕೆ ಮಾರಾಟ ಮಾಡುತ್ತಾರೆ. ಇದರ ಬಗೆಗೆ ಅಧಿಕಾರಿಗಳು ಏಕೆ ಕ್ರಮವಹಿಸುತ್ತಿಲ್ಲ.?, ಒಂದು ಎಕರೆಗೆ ಎಷ್ಟು ರಾಗಿಯನ್ನು ಬೆಳೆಯಲಾಗುತ್ತದೆ ಎಂದು ಯೋಚಿಸಿ ಹೇಳಬೇಕಾಗಿಲ್ಲ. ಸಾಮಾನ್ಯ ಪ್ರಜ್ಞೆಯಿದ್ದರೆ ಸಾಕು. ಆದರೂ ಕೂಡಾ ಆರ್‌ಟಿಸಿ ಇದೆ ಎಂದು ಹೇಳಿಕೊಂಡು ಬರುವ ದಳ್ಳಾಳಿಗಳಿಂದ ರಾಗಿ ಖರೀದಿಸಿ ಅರ್ಹ ರೈತರಿಗೆ ವಂಚನೆ ಮಾಡುವುದಾದರೂ ಏಕೆ ಎಂದು ಕಿಡಿಕಾರಿದ ಶಾಸಕ ಎಚ್.ಟಿ.ಮಂಜು ದಳ್ಳಾಳಿಗಳಿಂದ ರಾಗಿ ಖರೀದಿ ನಿಲ್ಲಿಸಿ ನೈಜ ರೈತರಿಂದ ರಾಗಿ ಖರೀದಿಸಿ ಎಂದು ಖರೀದಿ ಕೇಂದ್ರದ ಸಿಬ್ಬಂದಿಗೆ ಸೂಚಿಸಿದರು.
ಈ ಬಾರಿ ಮಳೆಯೂ ಕೂಡಾ ಅಂತಹ ಚೆನ್ನಾಗಿ ಬಂದಿಲ್ಲ. ಇದರಿಂದಾಗಿ ರಾಗಿಯು ಸ್ವಲ್ಪ ಸಣ್ಣದಾಗಿರುತ್ತದೆ. ಇದನ್ನು ಕೂಡಾ ತೆಗೆದುಕೊಳ್ಳಿ. ಆದರೆ, ಗುಣಮಟ್ಟದಲ್ಲಿ ಮಾತ್ರ ರಾಜಿಯಾಗಬೇಡಿ. ರೈತರು ಕೂಡಾ ಇಂತಹ ವಿಷಯಗಳಿಗೆಲ್ಲಾ ಶಾಸಕರ ಬಳಿಗೆ ಬರಬೇಡಿ. ಗುಣಮಟ್ಟಕ್ಕೆ ಆದ್ಯತೆ ನೀಡಿ. ಇಲ್ಲದಿದ್ದರೆ ಸಂಘಟನೆಗಳಿಗೆ ಪ್ರತಿಭಟಿಸಲು ದಾರಿಮಾಡಿಕೊಟ್ಟಂತಾಗುತ್ತದೆ. ಮೇಲಧಿಕಾರಿಗಳಿಗೂ ಮುಜುಗರವಾಗುತ್ತದೆ. ನಮ್ಮ ತಾಲೂಕು ವ್ಯಾಪ್ತಿಯಲ್ಲಿ ಕೆ.ಆರ್.ಪೇಟೆ ಖರೀದಿ ಕೇಂದ್ರದಲ್ಲಿ 3563 ರೈತರು ರಾಗಿ ಖರೀದಿ ನೋಂದಾಯಿಸಿಕೊಂಡಿದ್ದು ಬಲ್ಲೇನಹಳ್ಳಿ ಖರೀದಿ ಕೇಂದ್ರದಲ್ಲಿ 1043 ರೈತರು ನೋಂದಾಯಿಸಿಕೊಂಡಿದ್ದಾರೆ. ಒಟ್ಟಾರೆ ನಮ್ಮ ತಾಲೂಕಿನಲ್ಲಿ 4606 ನೋಂದಾಯಿತ ರೈತರಿಂದ 1,07,670 ಕ್ವಿಂಟಾಲ್ ರಾಗಿಯನ್ನು ಸರ್ಕಾರ ಖರೀದಿಸಲಿದೆ. ಇನ್ನು ಕೂಡಾ ಸಮಯವಿದ್ದು ರೈತರು ಯಾವುದೇ ಗೊಂದಲಕ್ಕೊಳಗಾಗದೆ ಗುಣಮಟ್ದ ರಾಗಿಯನ್ನು ಮಾರಾಟಮಾಡಿ ಎಂದು ಕಿವಿಮಾತು ಹೇಳಿದರು.