ಹೆಸರು ಬದಲಿಸಿ ಜತೆಗೆ ಲಾಭದತ್ತ ತೆಗೆದುಕೊಂಡು ಹೋಗಿ!

KannadaprabhaNewsNetwork |  
Published : Jun 19, 2025, 12:35 AM IST
ಕೆಎಸ್‌ಆರ್‌ಟಿಸಿ | Kannada Prabha

ಸಾರಾಂಶ

ಈ ಭಾಗದ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಚೆನ್ನಮ್ಮನ ಹೆಸರಿಡಬೇಕೆಂದು ಯೋಚಿಸಿರುವುದು ಅತ್ಯಂತ ಸೂಕ್ತ. ಆದರೆ, ಹೆಸರು ಬದಲಿಸಲು ನಿರ್ಧರಿಸಿದಂತೆ ಸಂಸ್ಥೆಗೆ ಸರ್ಕಾರದಿಂದ ಬರಬೇಕಾದ ಬಾಕಿ, ನೌಕರರ ಹಿಂಬಾಕಿ ಬಗ್ಗೆ ನಿರ್ದೇಶಕ ಮಂಡಳಿ ಗಟ್ಟಿ ನಿರ್ಧಾರ ಕೈಗೊಳ್ಳುವುದಿಲ್ಲ ಎಂಬ ಪ್ರಶ್ನೆ ನೌಕರ ವರ್ಗದ್ದು.

ಶಿವಾನಂದ ಗೊಂಬಿ

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹೆಸರನ್ನು "ರಾಣಿ ಕಿತ್ತೂರು ಚೆನ್ನಮ್ಮ ಸಾರಿಗೆ ಸಂಸ್ಥೆ " ಎಂದು ಬದಲಿಸಲು ಪ್ರಸ್ತಾವನೆಯನ್ನು ಕಳುಹಿಸಿರುವುದು ಸರಿಯಷ್ಟೇ. ಆದರೆ, ಇದರೊಂದಿಗೆ ನಷ್ಟದಲ್ಲಿರುವ ಸಂಸ್ಥೆಯನ್ನು ಲಾಭದತ್ತ ಕೊಂಡೊಯ್ಯಿರಿ.. ಸಂಸ್ಥೆಗೆ, ಸಿಬ್ಬಂದಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯ ಕಲ್ಪಿಸಿ ಪುಣ್ಯಕಟ್ಕೊಳ್ಳಿ..!

ಇದು ಸಾರಿಗೆ ಸಂಸ್ಥೆಯ ಸಿಬ್ಬಂದಿ ಆಗ್ರಹಿಸುತ್ತಿರುವ ಪರಿ.

ಇದಕ್ಕೆ ಕಾರಣವೂ ಇಲ್ಲದಿಲ್ಲ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಎಂಬ ಹೆಸರನ್ನು ಬದಲಿಸಿ, ರಾಣಿ ಕಿತ್ತೂರು ಚೆನ್ನಮ್ಮ ಸಾರಿಗೆ ಸಂಸ್ಥೆ ಎಂದು ಮರುನಾಮಕರಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದೆ. 94ನೇ ನಿರ್ದೇಶಕ ಮಂಡಳಿ ಸಭೆಯಲ್ಲಿ ಈ ರೀತಿ ಹೆಸರಿಟ್ಟರೆ ಸೂಕ್ತ ಎಂದು ನಿರ್ಧರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಸಭೆಯಲ್ಲಿ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರಂತೆ.

ಇದು ಒಳ್ಳೆಯ ವಿಚಾರವೇ. ಈ ಭಾಗದ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಚೆನ್ನಮ್ಮನ ಹೆಸರಿಡಬೇಕೆಂದು ಯೋಚಿಸಿರುವುದು ಅತ್ಯಂತ ಸೂಕ್ತ. ಆದರೆ, ಹೆಸರು ಬದಲಿಸಲು ನಿರ್ಧರಿಸಿದಂತೆ ಸಂಸ್ಥೆಗೆ ಸರ್ಕಾರದಿಂದ ಬರಬೇಕಾದ ಬಾಕಿ, ನೌಕರರ ಹಿಂಬಾಕಿ ಬಗ್ಗೆ ನಿರ್ದೇಶಕ ಮಂಡಳಿ ಗಟ್ಟಿ ನಿರ್ಧಾರ ಕೈಗೊಳ್ಳುವುದಿಲ್ಲ ಎಂಬ ಪ್ರಶ್ನೆ ನೌಕರ ವರ್ಗದ್ದು.

ಬಿಜೆಪಿ ಸರ್ಕಾರವಿದ್ದಾಗ ವೇತನ ಪರಿಷ್ಕರಣೆಯನ್ನು ಬರೋಬ್ಬರಿ 38 ತಿಂಗಳು ವಿಳಂಬವಾಗಿ ಮಾಡಿತ್ತು. ಅದರ ಹಿಂಬಾಕಿಯೇ ₹338 ಕೋಟಿಗೂ ಅಧಿಕ ನೌಕರರಿಗೆ ಜಮೆಯಾಗಬೇಕಿದೆ. ಇನ್ನು 2024ರ ಜನವರಿ 1ಕ್ಕೆ ವೇತನ ಪರಿಷ್ಕರಣೆ ಮಾಡಬೇಕಿತ್ತು. ಆದರೆ, ಅವಧಿ ಮುಗಿದು ಒಂದುವರೆ ವರ್ಷಕ್ಕೂ ಅಧಿಕ ಕಾಲ ಸಂದಿದೆ. ಈ ಸರ್ಕಾರ ವೇತನ ಪರಿಷ್ಕರಣೆ ಮಾಡುವ ಗೋಜಿಗೆ ಹೋಗುತ್ತಿಲ್ಲ.

ಶಕ್ತಿ ಯೋಜನೆಯಡಿ ₹674 ಕೋಟಿಗೂ ಅಧಿಕ ಸಂಸ್ಥೆಗೆ ಬರಬೇಕಿದೆ. ಅದನ್ನು ಕೊಡುವ ಬಗ್ಗೆ ಸರ್ಕಾರ ಚಕಾರ ಎತ್ತುತ್ತಿಲ್ಲ. ಹಾಗಂತ ಶಕ್ತಿ ಯೋಜನೆಯ ದುಡ್ಡನ್ನು ಕೊಡುವುದೇ ಇಲ್ಲ ಅಂತೇನೂ ಇಲ್ಲ ಕೊಡುತ್ತದೆ. ಈವರೆಗೂ ಖರ್ಚು ಮಾಡಿದ ವೆಚ್ಚದಲ್ಲಿ ಶೇ. 74ರಷ್ಟು ಮಾತ್ರ ಪಾವತಿಸಿದೆ. ಹೀಗಾಗಿ ₹674 ಕೋಟಿ ಬಾಕಿಯುಳಿದಿದೆ. ಹೀಗೆ ಬಾಕಿ ಬೆಳೆಯುತ್ತಲೇ ಹೋಗುತ್ತಿದೆ. ಇನ್ನು ನಿವೃತ್ತರಿಗೆ ಪಿಂಚಣಿ, ಗ್ರ್ಯಾಚ್ಯುಟಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ಸಾಮರ್ಥ್ಯ ಸಂಸ್ಥೆಗಿಲ್ಲ ಎಂಬುದು ಅಷ್ಟೇ ಸ್ಪಷ್ಟ. ಸಂಸ್ಥೆಗೆ ಪುನಶ್ಚೇತನಗೊಳಿಸುವುದಕ್ಕಾಗಿ ಹಿಂದೆಯೇ ₹1100 ಕೋಟಿ ವಿಶೇಷ ಅನುದಾನ ನೀಡಿ ಎಂದು ಪತ್ರ ಬರೆದರೂ ಅದಕ್ಕೆ ಸ್ಪಂದಿಸಲಿಲ್ಲ ಸರ್ಕಾರ.

ಇನ್ನು ಕಲ್ಯಾಣ ಕರ್ನಾಟಕಕ್ಕೆ ಕಲ್ಯಾಣ ರಥ, ಕೆಎಸ್‌ಆರ್‌ಟಿಸಿಯಲ್ಲಿ ಅಂಬಾರಿ ಸೇರಿದಂತೆ ಬೇರೆಬೇರೆ ಹೆಸರುಗಳಲ್ಲಿ ಹೈಟೆಕ್‌ ಬಸ್‌ಗಳನ್ನು ಓಡಿಸಲಾಗುತ್ತಿದೆ. ಆದರೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಮಾತ್ರ ಡಕೋಟಾ ಎಕ್ಸ್‌ಪ್ರೆಸ್‌ ಬಸ್‌ಗಳೇ ಇವೆ.

ವಾಣಿಜ್ಯನಗರಿ ಎಂದು ಹೆಸರು ಪಡೆದಿರುವ ಹುಬ್ಬಳ್ಳಿಯಿಂದ ಮತ್ತೊಂದು ವಾಣಿಜ್ಯನಗರಿ ಮುಂಬೈಗೆ ಒಂದೇ ಒಂದು ಸ್ಲೀಪರ್‌ ಆಗಲಿ, ವೋಲ್ವೋ ಬಸ್‌ಗಳನ್ನಾಗಿ ಓಡಿಸುತ್ತಿಲ್ಲ ಸಂಸ್ಥೆ. ಹೀಗಾಗಿ ಈ ನಗರಗಳಿಗೆ ಹೋಗಬೇಕಾದ ನಾಗರಿಕರು ಅನಿವಾರ್ಯವಾಗಿ ಖಾಸಗಿ ಬಸ್‌ಗಳನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಇದೆ.

ಸಂಸ್ಥೆಯ ಹೆಸರನ್ನು ಬದಲಾಯಿಸುತ್ತಾರಾ ಬದಲಾಯಿಸಲಿ. ಅದರಲ್ಲೂ ಕರುನಾಡಿನ ಹೆಮ್ಮೆಯಾಗಿರುವ ರಾಣಿ ಚೆನ್ನಮ್ಮ ಹೆಸರಿಡಲು ಪ್ರಸ್ತಾಪಿಸಿರುವುದು ಒಳ್ಳೆಯ ವಿಚಾರವೇ. ಆದರೆ, ಇದರೊಂದಿಗೆ ಸಂಸ್ಥೆ ಹಾಗೂ ನೌಕರರ ವರ್ಗ, ನಾಗರಿಕರಿಗೆ ಸೌಲಭ್ಯ ಕಲ್ಪಿಸುವಲ್ಲಿ ನಿರ್ದೇಶಕ ಮಂಡಳಿ, ಆಡಳಿತ ಮಂಡಳಿ, ಅಧ್ಯಕ್ಷರು ಗಮನಹರಿಸಬೇಕಿದೆ ಎಂಬುದು ಪ್ರಜ್ಞಾವಂತರ ಒಕ್ಕೊರಲಿನ ಆಗ್ರಹ.

ವಾಕರಸಾ ಸಂಸ್ಥೆಗೆ ರಾಣಿ ಕಿತ್ತೂರು ಚೆನ್ನಮ್ಮ ಸಾರಿಗೆ ಸಂಸ್ಥೆ ಎಂದು ನಾಮಕರಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ಯಾವುದೇ ವಿರೋಧ ವ್ಯಕ್ತವಾಗಿಲ್ಲ. ಹೀಗಾಗಿ, ರಾಣಿ ಕಿತ್ತೂರು ಚೆನ್ನಮ್ಮ ಸಾರಿಗೆ ಸಂಸ್ಥೆ ಎಂದು ನಾಮಕರಣವಾಗುವ ಸಾಧ್ಯತೆ ಇದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಭರಮಗೌಡ (ರಾಜು) ಕಾಗೆ ಹೇಳಿದರು. ವಾಯವ್ಯ ಸಾರಿಗೆ ಸಂಸ್ಥೆಯ ಹೆಸರನ್ನು ರಾಣಿ ಕಿತ್ತೂರು ಚೆನ್ನಮ್ಮ ಸಾರಿಗೆ ಸಂಸ್ಥೆ ಎಂದು ಹೆಸರಿಸಲು ಮುಂದಾಗಿರುವುದು ಒಳ್ಳೆಯ ವಿಚಾರ. ಇದನ್ನು ಸರ್ಕಾರ ಮಾಡಲಿ. ಕಲ್ಯಾಣ ಕರ್ನಾಟಕ, ಬಿಎಂಟಿಸಿ, ಕೆಎಸ್‌ಆರ್‌ಟಿಸಿಗಳಿಗೆ ನೀಡುವಂತಹ ಸೌಲಭ್ಯವನ್ನು ಇಲ್ಲಿಗೂ ನೀಡಲಿ. ಅಭಿವೃದ್ಧಿಗೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ಹೋರಾಟಗಾರ ಸಂಗಮೇಶ ಪಾಟೀಲ ಮನವಿ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ