ಸಂವಿಧಾನ ಬದಲಿಸೋದು ಬಿಜೆಪಿ ಹಿಡನ್ ಅಜೆಂಡಾ: ಸಿಎಂ

KannadaprabhaNewsNetwork | Published : Mar 13, 2024 2:01 AM

ಸಾರಾಂಶ

ಸಂವಿಧಾನ ಬದಲಿಸೋದು ಬಿಜೆಪಿ ಹಿಡನ್ ಅಜೆಂಡಾ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ ಸಂವಿಧಾನ ಬದಲಿಸುವುದು ಬಿಜೆಪಿಯ ಹಿಡನ್ ಅಜೆಂಡಾ. ಸಂಸದ ಅನಂತ್‌ ಕುಮಾರ ಹೆಗಡೆ ಮೂಲಕ ಅದನ್ನು ಹೇಳಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಚಾಮರಾಜನಗರ ತಾಲೂಕಿನ ಹೆಗ್ಗವಾಡಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಅನಂತ್‌ ಹೆಗಡೆ ಆರ್ಡಿನರಿ ವ್ಯಕ್ತಿ ಅಲ್ಲ, 5 ಸಲ ಸಂಸದರು, ಸಚಿವರಾಗಿದ್ದವರು. ಸಂವಿಧಾನ ಬದಲಿನ ವಿಚಾರ ಹೇಳಬೇಕಾದರೆ ಪಕ್ಷದ ತೀರ್ಮಾನ ಆಗಿರದೇ ಹೇಳಲು ಆಗತ್ತಾ, ಅವರ ವಿರುದ್ಧ ಏನಾದರೂ ಕ್ರಮ ತೆಗೆದುಕೊಂಡರಾ?. ಮನುಸ್ಮೃತಿ ಮೇಲೆ ನಂಬಿಕೆ ಇಟ್ಟಿರುವ ಪಕ್ಷ ಅದಾಗಿದ್ದು, ಮನುವಾದದಲ್ಲಿ ನಂಬಿಕೆ ಇಟ್ಟವರು ಬಿಜೆಪಿಯವರು. ಸಂವಿಧಾನ ಜಾರಿಯಾದ ದಿನದಿಂದಲೂ ಅವರು ಸಂವಿಧಾನವನ್ನು ವಿರೋಧ ಮಾಡಿಕೊಂಡೇ ಬಂದಿದ್ದಾರೆ. ಈಗ ಅನಂತ್‌ ಹೆಗಡೆ ಮೂಲಕ ಹೇಳಿಸುತ್ತಿದ್ದಾರೆ. ಆದರೆ, ಕಾಂಗ್ರೆಸ್‌ ಸಂವಿಧಾನದ ಆಶಯಗಳಿಗೆ ತಕ್ಕಂತೆ ನಡೆಯುತ್ತಿದೆ. ಇವರಿಗೆ ಸಂವಿಧಾನ ಬದಲಾಯಿಸಲು ಅವಕಾಶ ಆಗದಂತೆ ಬಿಜೆಪಿಯನ್ನು ಹೀನಾಯವಾಗಿ ಸೋಲಿಸಿ. ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ನನಗೆ ಶಕ್ತಿ ತುಂಬಿ ಎಂದು ವಿನಂತಿಸಿದರು.

ಸಿಎಎಯನ್ನು ಚುನಾವಣಾ ಸಂದರ್ಭದಲ್ಲಿ ಏಕೆ ಜಾರಿ ಮಾಡಬೇಕಿತ್ತು?. ಧರ್ಮದ ಆಧಾರದ ಮೇಲೆ ಪೌರತ್ವ ಕೊಡಲು ನಮ್ಮ ವಿರೋಧವಿದೆ ಎಂದು ಸಿಎಎ ಜಾರಿಗೆ ಅಸಮಾಧಾನ ವ್ಯಕ್ತಪಡಿಸಿದರು.ಕದ್ದುಮುಚ್ಚಿ ತಮಿಳುನಾಡಿಗೆ ನೀರು ಬಿಡುತ್ತಿದ್ದಾರೆ ಎಂಬ ಆರ್.ಆಶೋಕ್ ಆರೋಪಕ್ಕೆ ಪ್ರತಿಕ್ರಿಯಿಸಿ, ಯಾರಾದರೂ ಕದ್ದು ಮುಚ್ಚಿ ನೀರು ಬಿಡುತ್ತಾರಾ?. ನೀರು ಇದ್ದರಲ್ಲವಾ ಬಿಡೋದು?. ಅವರು ಹೇಳುವುದು ಸುಳ್ಳು, ತಮಿಳುನಾಡಿಗೆ ತೊಟ್ಟು ನೀರೂ ಕೊಡುವುದಿಲ್ಲ ಎಂದರು.

ತಾನು ಎಂಪಿಯಾದರೆ ಸಿಎಂ ಕುರ್ಚಿ ಅಲುಗಾಡಲಿದೆ ಎಂಬ ಪ್ರತಾಪ್‌ ಸಿಂಹ ಹೇಳಿಕೆಗೆ ಟಾಂಗ್ ನೀಡಿ, ಎರಡು ಸರಿ ಎಂಪಿ ಆಗಿದ್ದಾರಲ್ಲ, ನನ್ನ ಕುರ್ಚಿ ಅಲುಗಾಡಲೇ ಇಲ್ಲಾ ಎಂದು ನಕ್ಕರು. ಪ್ರತಾಪ್‌ ಹೆಸರು ಕೆಡಿಸಿಕೊಂಡಿದ್ದಾರೆಂದು ಬಿಜೆಪಿಯವರು ಅಭ್ಯರ್ಥಿ ಬದಲಾವಣೆ ಮಾಡುತ್ತಿರಬಹುದು, ನನಗೆ ಗೊತ್ತಿಲ್ಲ. ಯದುವೀರ್‌ ಅಭ್ಯರ್ಥಿಯಾಗುವ ಬಗ್ಗೆಯೂ ಗೊತ್ತಿಲ್ಲ. ಮಾಧ್ಯಮದವರು ಸೃಷ್ಟಿ ಮಾಡಿಕೊಂಡು ಹೊಂದಾಣಿಕೆ ರಾಜಕೀಯ ಎಂದರೆ ಹೇಗೆ?. ಕ್ಯಾಂಡಿಡೇಟ್ ಯಾರಾದಾರೂ ಆಗಲಿ, ಮೈಸೂರಿನಲ್ಲಿ ನಾವು ಈ ಬಾರಿ ಬಿಜೆಪಿಯನ್ನು ಸೋಲಿಸುತ್ತೇವೆ ಎಂದರು.

Share this article