ಕನ್ನಡಪ್ರಭ ವಾರ್ತೆ, ದಾವಣಗೆರೆ
ಚನ್ನಗಿರಿ ಪೊಲೀಸ್ ಠಾಣೆ, ವಾಹನಗಳ ಮೇಲೆ ಕಲ್ಲು ತೂರಾಟ, ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣದ ಹಿಂದೆ ದೇಶದ್ರೋಹಿಗಳ ಕೈವಾಡದ ಶಂಕೆ ಇದ್ದು, ಭಯದ ವಾತಾವರಣ ಹುಟ್ಟು ಹಾಕಿರುವ ಘಟನೆಯನ್ನು ರಾಷ್ಟ್ರೀಯ ಭದ್ರತಾ ಏಜೆನ್ಸಿ ತನಿಖೆಗೆ ಒಪ್ಪಿಸುವಂತೆ ವಿಶ್ವ ಹಿಂದೂ ಪರಿಷತ್-ಬಜರಂಗ ದಳ ಜಿಲ್ಲಾ ಸಮಿತಿಗಳು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿವೆ.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಹಿಂಪ ಜಿಲ್ಲಾ ಕಾರ್ಯದರ್ಶಿ ಸಿ.ಎಸ್.ರಾಜು, ಡಿಜೆ ಹಳ್ಳಿ, ಕೆಜೆ ಹಳ್ಳಿಯ, ಬೆಂಗಳೂರು, ಹುಬ್ಬಳ್ಳಿ, ಶಿವಮೊಗ್ಗದಲ್ಲಿ ಆದಂತೆ ಭಯೋತ್ಪಾದನಾ ಕೃತ್ಯಗಳನ್ನೇ ಚನ್ನಗಿರಿ ಠಾಣೆ, ಸಿಬ್ಬಂದಿ ಮೇಲಿನ ದಾಳಿ, ಕಲ್ಲು ತೂರಾಟದ ಪ್ರಕರಣ ಹೋಲುತ್ತಿದ್ದು, ಅಂದು ಠಾಣೆ, ವಾಹನಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಸಹ ದುಷ್ಕರ್ಮಿಗಳು ಮುಂದಾಗಿದ್ದು, ಹೆಚ್ಚಿನ ಪೊಲೀಸ್ ಪಡೆ ಬಂದಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದೆ ಎಂದರು.
ಪ್ರತಿಭಟನೆ ಹೆಸರಿನಲ್ಲಿ ಕೆಲ ಮುಸ್ಲಿಂ ಗೂಂಡಾಗಳು ಠಾಣೆಯನ್ನೇ ಗುರಿಯಾಗಿಸಿಕೊಂಡು, ದಾಳಿ ಮಾಡಿದ್ದಾರೆ. ಜನ ಸಾಮಾನ್ಯರು, ಕಾನೂನು, ಸುವ್ಯವಸ್ಥೆ ಕಾಪಾಡುವ ಪೊಲೀಸ್ ಠಾಣೆ, ಸಿಬ್ಬಂದಿ ಮೇಲೆಯೇ ದಾಳಿ ಮಾಡುವ ಮೂಲಕ ಸಮಾಜದಲ್ಲಿ, ಜನರಲ್ಲಿ ಭಯ ವಾತಾವರಣ ನಿರ್ಮಿಸುವ ಷಡ್ಯಂತ್ರ ಇದಾಗಿದೆ. ರಾಜ್ಯ ಸರ್ಕಾರವು ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳದೇ, ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸುವ ಮೂಲಕ ತನ್ನ ಮತ ಬ್ಯಾಂಕ್‌ನ್ನು ಸಂತೃಪ್ತಿಪಡಿಸಲು ಹೊರಟಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಠಾಣೆ ಮೇಲೆ ಕಲ್ಲು ತೂರಾಟ, ಸರ್ಕಾರಿ ಸ್ವತ್ತು ಧ್ವಂಸ, ಕಲ್ಲು, ಮಾರಕಾಸ್ತ್ರಗಳಿಂದ ಪೊಲೀಸರ ಮೇಲೆ ದಾಳಿ ಮಾಡಿದ್ದ ದುಷ್ಕರ್ಮಿಗಳನ್ನು ಮಟ್ಟ ಹಾಕಬೇಕಾದ ಸರ್ಕಾರವು ಪೊಲೀಸರನ್ನೇ ಅಮಾನತುಪಡಿಸುವ ಮೂಲಕ ಪೊಲೀಸರ ನೈತಿಕ ಸ್ಥೈರ್ಯವೇ ಕುಸಿಯುವಂತೆ ವರ್ತಿಸುತ್ತಿದೆ. ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದಲೇ ಇಂತಹದ್ದೊಂದು ಘಟನೆ ಆಗಿದೆ. ಸಾವಿರಾರು ಜನ ಪ್ರತಿಭಟನೆ ಹೆಸರಲ್ಲಿ ಠಾಣೆ ಬಳಿ ಜಮಾಯಿಸಿ, ಭಯದ ವಾತಾವರಣ ಸೃಷ್ಟಿಸಿದ್ದಾರೆ. ಸಂವಿಧಾನದಡಿ ತಪ್ಪಿತಸ್ಥರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿ. ಅಂತಹ ದುಷ್ಕರ್ಮಿಗಳನ್ನು ರಕ್ಷಿಸಿ, ಸಂವಿಧಾನಕ್ಕೆ ಅಪಚಾರ ಮಾಡುವ ಕೆಲಸ ಮಾಡಬೇಡಿ ಎಂದು ಸಿಎಂ, ಡಿಸಿಎಂ, ಗೃಹ ಸಚಿವರಿಗೆ ಅವರು ಕಿವಿಮಾತು ಹೇಳಿದರು.
ಇಡೀ ಚನ್ನಗಿರಿ ಪ್ರಕರಣವನ್ನು ಎನ್ಐಎಗೆ ತನಿಖೆಗೆ ಒಪ್ಪಿಸಬೇಕು. ಚನ್ನಗಿರಿ, ಹೊನ್ನೆಬಾಗಿ, ನಲ್ಲೂರು, ಕೆರೆಬಿಳಚಿ, ಆಗರಬನ್ನಿಹಟ್ಟಿ ಗ್ರಾಮಗಳಿಂದ ಬಂದಿದ್ದ ಕೆಲ ದೇಶದ್ರೋಹಿ ಮತಾಂಧರು ಅಂದಿನ ಘಟನೆಗೆ ಕಾರಣರಾಗಿದ್ದು, ಆ ಎಲ್ಲರನ್ನೂ ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಲು ಅವರು ಆಗ್ರಹಿಸಿದರು.ಇನ್ನು, ಚನ್ನಗಿರಿ ತಾಲೂಕಿನಲ್ಲಿ ಡ್ರಗ್ಸ್, ಮಟ್ಕಾ ಸೇರಿದಂತೆ ಜೂಜಾಟ ಯಾವುದೇ ಕಾನೂನು ಭಯವಿಲ್ಲದೇ ನಡೆಯುತ್ತಿದ್ದು, ಇದೇ ಮೊನ್ನೆಯ ಠಾಣೆ ಮೇಲಿನ ದಾಳಿ ಘಟನೆ, ಹಿಂಸಾತ್ಮಕ ಕೃತ್ಯಗಳಿಗೂ ಕಾರಣ ಎಂದು ಅವರು ಆರೋಪಿಸಿದರು.
ವಿಹಿಂಪ, ಬಜರಂಗ ದಳದ ಮುಖಂಡರಾದ ಜಿ.ಬಸವರಾಜ, ಕೆ.ಎಚ್.ಮಂಜುನಾಥ, ಕಲ್ಯಾಣಮ್ಮ, ಹರೀಶ ಪವಾರ್, ಸುರೇಶ, ಡಿ.ಟಿ.ಸುಧೀಂದ್ರ, ಕೃಷ್ಣಮೂರ್ತಿ, ಜಿ.ಮಂಜುನಾಥ, ಚನ್ನಗಿರಿ ಎನ್.ರವಿಚಂದ್ರ, ಚಂದ್ರಕಾಂತ ಇತರರು ಇದ್ದರು.