ಚನ್ನಗಿರಿ ಕೋಟೆ, ಪುಟ್ಟಬಸಪ್ಪನ ಕೆರೆ ಒತ್ತುವರಿ ತೆರವುಗೊಳಿಸಿ

KannadaprabhaNewsNetwork |  
Published : Jun 25, 2025, 11:47 PM IST
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತೀರುವ ವಿಶ್ವ ಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನದ ತಾಲೂಕು ಅಧ್ಯಕ್ಷ ಚಿಕ್ಕೂಲಿಕೆರೆ ಸಿ.ಆರ್.ನಾಗೇಂದ್ರಪ್ಪ | Kannada Prabha

ಸಾರಾಂಶ

ಕೆಳದಿ ರಾಣಿ ಚನ್ನಮ್ಮಾ ಆಳಿದ, ಪ್ರಾಚ್ಯವಸ್ತು ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವ ಚನ್ನಗಿರಿ ಕೋಟೆಯ ಜಾಗ ಒತ್ತುವರಿ ಮತ್ತು ಇಲ್ಲಿಯ ಪುಟ್ಟಬಸಪ್ಪನ ಕೆರೆ ಜಾಗ ಒತ್ತುವರಿ ಆಗುತ್ತಿದೆ. ಸರ್ಕಾರ ಕೂಡಲೇ ಈ ಐತಿಹಾಸಿಕ ಪ್ರದೇಶಗಳ ಒತ್ತುವರಿ ತೆರವುಗೊಳಿಸಿ, ಸರ್ಕಾರಿ ಆಸ್ತಿಗಳನ್ನು ಸಂರಕ್ಷಿಸಬೇಕು ಎಂದು ವಿಶ್ವ ಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನ ತಾಲೂಕು ಅಧ್ಯಕ್ಷ ಚಿಕ್ಕೂಲಿಕೆರೆಯ ಸಿ.ಆರ್. ನಾಗೇಂದ್ರಪ್ಪ ಒತ್ತಾಯಿಸಿದ್ದಾರೆ.

- ವಿಶ್ವಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನ ಅಧ್ಯಕ್ಷ ನಾಗೇಂದ್ರಪ್ಪ ಒತ್ತಾಯ

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ಕೆಳದಿ ರಾಣಿ ಚನ್ನಮ್ಮಾ ಆಳಿದ, ಪ್ರಾಚ್ಯವಸ್ತು ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವ ಚನ್ನಗಿರಿ ಕೋಟೆಯ ಜಾಗ ಒತ್ತುವರಿ ಮತ್ತು ಇಲ್ಲಿಯ ಪುಟ್ಟಬಸಪ್ಪನ ಕೆರೆ ಜಾಗ ಒತ್ತುವರಿ ಆಗುತ್ತಿದೆ. ಸರ್ಕಾರ ಕೂಡಲೇ ಈ ಐತಿಹಾಸಿಕ ಪ್ರದೇಶಗಳ ಒತ್ತುವರಿ ತೆರವುಗೊಳಿಸಿ, ಸರ್ಕಾರಿ ಆಸ್ತಿಗಳನ್ನು ಸಂರಕ್ಷಿಸಬೇಕು ಎಂದು ವಿಶ್ವ ಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನ ತಾಲೂಕು ಅಧ್ಯಕ್ಷ ಚಿಕ್ಕೂಲಿಕೆರೆಯ ಸಿ.ಆರ್. ನಾಗೇಂದ್ರಪ್ಪ ಒತ್ತಾಯಿಸಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕೋಟೆ ಪ್ರದೇಶದಲ್ಲಿ ಶ್ರೀ ಭೇಟೆ ರಂಗನಾಥ ಸ್ವಾಮಿ ದೇವಾಲಯ, ಕಲ್ಲಿನ ಬುರುಜುಗಳು, ಬತ್ತೇರಿಗಳು, ನೀರಿನ ಹೊಂಡ ಹೊಂದಿದೆ. ಇದು 2 ಸುತ್ತಿನ ಕೋಟೆ. ಇತಿಹಾಸದ ಮಹತ್ವ ಸಾರುವ ಕೋಟೆಯ ಪ್ರದೇಶವು ಸರ್ವೆ ನಂಬರ್ 19ರಲ್ಲಿ 10 ಎಕರೆ 11 ಗುಂಟೆ ಪ್ರದೇಶದಲ್ಲಿದೆ ಎಂದು ಹೇಳಿದರು.

ಪ್ರಾಚ್ಯ ವಸ್ತು ಇಲಾಖೆ ನಿಯಮದ ಪ್ರಕಾರವಾಗಿ ಕೋಟೆಯ ಸುತ್ತಲು 300 ಮೀಟರ್ ಸುತ್ತಳತೆ ರಕ್ಷಿಸಿಕೊಳ್ಳಬೇಕೆಂಬ ನಿಯಮಗಳಿವೆ. ಆದರೆ, ಇಂತಹ ನಿಯಮಗಳನ್ನೆಲ್ಲ ಗಾಳಿಗೆ ತೂರಲಾಗುತ್ತಿದೆ. ಕೋಟೆ ಆವರಣದ ಒಳಭಾಗದಲ್ಲಿ ಪಟ್ಟಣದ ಕೆಲವರು ತಮಗಿಷ್ಟ ಬಂದಂತೆ ಮನೆಗಳನ್ನು, ಗೋಡನ್ ಮತ್ತು ಇನ್ನಿತರೆ ಕಟ್ಟಡಗಳನ್ನು ಕಟ್ಟಿಕೊಂಡಿದ್ದಾರೆ. ಕೋಟೆ ಸುತ್ತಲೂ ಇರುವ ಮರ-ಗಿಡಗಳನ್ನು ಸಹ ಕಡಿದು, ಜಾಗ ಒತ್ತುವರಿ ಮಾಡಿದ್ದಾರೆ. ಪರಿಣಾಮ ಕೋಟೆಯ ಪರಿಸರ ಹಾಳಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಮಧ್ಯೆ ಚನ್ನಗಿರಿ ಪುರಸಭೆ ಅಧಿಕಾರಿಗಳು ಇಲ್ಲಿ ಅಕ್ರಮ ಕಟ್ಟಡಗಳನ್ನು ಕಟ್ಟಿಕೊಂಡವರಿಗೆ ಮೂಲ ಸೌಲಭ್ಯಗಳನ್ನೂ ಒದಗಿಸಿದ್ದಾರೆ. ಅಕ್ರಮ ಕಟ್ಟಡಗಳನ್ನು ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳು ತೆರವುಗೊಳಿಸಬೇಕು. ಪುಟ್ಟಬಸಪ್ಪನ ಕೆರೆ ಪ್ರದೇಶ ಸರ್ವೆ ನಂಬರ್ 147ರಲ್ಲಿ 11.30 ಎಕೆರೆ ಪ್ರದೇಶದಲ್ಲಿ ಕೆರೆ ಇದೆ. ಈ ಹಿಂದೆ ಕೆರೆ ಸುತ್ತಳತೆಯ ಸರ್ವೆ ಕಾರ್ಯ ನಡೆಸಿ, ಹದ್ದುಬಸ್ತಿನ ಕಲ್ಲನ್ನು ನೆಟ್ಟಿದ್ದರು. ಈ ಕಲ್ಲನ್ನು ಸಹ ಕಿತ್ತು ಹಾಕಿ ಕೆರೆಯ ಅರ್ಧ ಜಾಗವೇ ಒತ್ತುವರಿ ಮಾಡಿದ್ದಾರೆ ಎಂದರು.

ಕೆರೆ ಒತ್ತುವರಿ ಜಾಗ ತೆರವುಗೊಳಿಸಲು ಸ್ಥಳ ಪರಿಶೀಲಿಸಿ, ಕೆರೆಯ ಜಾಗವನ್ನು ಹದ್ದುಬಸ್ತು ಮಾಡುವಂತೆ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗಿತ್ತು. ಕೆರೆಯ ಜಾಗ ಪರಿಶೀಲನೆ ಸರ್ವೆ ಮಾಡಿಸಲು ಜೂ.20ರಂದು ದಿನಾಂಕ ಸಹ ನಿಗದಿಪಡಿಸಿದ್ದರು. ಆದರೆ, 20ನೇ ತಾರೀಖು ಸಹ ಮುಗಿದು ವಾರವಾಗುತ್ತಿದೆ. ಈ ಬಗ್ಗೆ ಕಂದಾಯ ಅಧಿಕಾರಿಗಳನ್ನು ವಿಚಾರಿಸಿದರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಅಧಿಕಾರಿಗಳು ಶೀಘ್ರ ಗಮನಹರಿಸಿ, ಕ್ರಮ ಕೈಗೊಳ್ಳದಿದ್ದರೆ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನ ಗೌರವ ಅಧ್ಯಕ್ಷ ಗೌ.ಹಾಲೇಶ್, ಕಾರ್ಯದರ್ಶಿ ಬಿ.ನಾಗರಾಜ್, ಪುರಸಭೆಯ ಮಾಜಿ ಸದಸ್ಯ ವಸಂತಕುಮಾರ್, ಸಿ.ಎಂ. ಗುರುಸಿದ್ದಯ್ಯ ಉಪಸ್ಥಿತರಿದ್ದರು.

- - -

-25ಕೆಸಿಎನ್‌ಜಿ1:

ವಿಶ್ವ ಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನದ ತಾಲೂಕು ಅಧ್ಯಕ್ಷ ಚಿಕ್ಕೂಲಿಕೆರೆ ಸಿ.ಆರ್.ನಾಗೇಂದ್ರಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?