ಶಿರಸಿ: ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಪ್ರಜಾಪ್ರಭುತ್ವದ ಮೇಲೆ ತುರ್ತು ಪರಿಸ್ಥಿತಿ ಘೋಷಿಸಿದ್ದರು. ಆದರೆ, ರಾಜ್ಯದ ಈಗಿನ ಕಾಂಗ್ರೆಸ್ ಸರ್ಕಾರದ ಆಡಳಿತ ಅದಕ್ಕಿಂತ ಭಿನ್ನವಾಗಿಲ್ಲ. ಹಿಂದೂ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಆರೋಪಿಸಿದರು.
೧೯೭೫ರ ತುರ್ತು ಪರಿಸ್ಥಿತಿ ಹೇರಿಕೆ ಭಾರತೀಯ ಪ್ರಜಾಪ್ರಭುತ್ವದಲ್ಲಿ ಒಂದು ಕಪ್ಪು ಚುಕ್ಕೆ. ಅಂದು ತುರ್ತು ಪರಿಸ್ಥಿತಿ ಘೋಷಿಸುವ ಯಾವುದೇ ಸ್ಥಿತಿ ಇರಲಿಲ್ಲ. ಚೀನಾ, ಪಾಕಿಸ್ತಾನದ ವಿರುದ್ಧ ಯುದ್ಧ ನಡೆದಾಗ ಸಹ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿತ್ತು. ಆದರೆ ೧೯೭೫ರಲ್ಲಿ ಅಂತಹ ಯಾವುದೇ ಸ್ಥಿತಿ ಇರದೇ ಇಂದಿರಾಗಾಂಧಿ ತಮ್ಮ ಅಧಿಕಾರವನ್ನು ಇಟ್ಟುಕೊಳ್ಳುವ ಸಲುವಾಗಿ ತುರ್ತು ಪರಿಸ್ಥಿತಿಯ ದುಸ್ಸಾಹಸ ಮಾಡಿದ್ದರು ಎಂದರು.
ಇಂದಿರಾಗಾಂಧಿ ದಿಟ್ಟ ಮಹಿಳೆ, ದೇಶದ ಘನತೆ ಎತ್ತಿ ಹಿಡಿದ ಮಹಿಳೆ ಎಂದು ಅಟಲ್ ಬಿಹಾರಿ ವಾಜಪೇಯಿ ಹೊಗಳಿದ್ದರು. ಆದರೆ, ಬಾಂಗ್ಲಾದೇಶದ ಪರವಾಗಿ ಪಾಕಿಸ್ತಾನದ ವಿರುದ್ಧ ಗೆದ್ದ ಅಹಂನಲ್ಲಿ ಇಂದಿರಾಗಾಂಧಿ ಇದ್ದರು. ಆ ಬಳಿಕ ದೇಶದ ಒಳಗಡೆ ತಮ್ಮದೇ ಆದ ನಿರ್ಧಾರ ಹೇರುತ್ತಿದ್ದರು. ಇದರ ಪರಿಣಾಮ ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿದಾಗ ಇಂದಿರಾಗಾಂಧಿ ವಿರುದ್ಧ ಕಾಂಗ್ರೆಸ್ ಪಕ್ಷದೊಳಗೇ ಆಕ್ರೋಶ ಇತ್ತು. ಅವರನ್ನು ಪ್ರಧಾನಿ ಹುದ್ದೆಯಿಂದ ಇಳಿಸುವ ಕಸರತ್ತು ಪಕ್ಷದೊಳಗೇ ನಡೆದಿದ್ದರಿಂದ ಅವರೂ ಕಂಗಾಲಾಗಿದ್ದರು. ಇಂತಹ ಸಂದರ್ಭವನ್ನು ಎದುರಿಸಲು ತನ್ನ ಶಕ್ತಿ ಪ್ರದರ್ಶಿಸಿ, ವಿರೋಧಿಗಳನ್ನು ಹತ್ತಿಕ್ಕುವ ಸಲುವಾಗಿ ತುರ್ತು ಪರಿಸ್ಥಿಸಿ ಘೋಷಿಸಿದ್ದರು. ಜೂ.೨೪ರ ರಾತ್ರಿ ಅಂದಿನ ರಾಷ್ಟ್ರಪತಿಯಾಗಿದ್ದ ಫಕ್ರುದ್ದೀನ್ ಅವರನ್ನು ಭೇಟಿಯಾಗಿ ಏಕಾ ಏಕಿ ತುರ್ತು ಪರಿಸ್ಥಿತಿ ಹೇರಿದ್ದರು ಎಂದರು.ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಕರ್ಕಿ ಮಾತನಾಡಿ, ಕರ್ನಾಟಕದಲ್ಲಿ ಕಳೆದ ಎರಡು ವರ್ಷಗಳಿಂದ ಕರಾಳ ಸ್ಥಿತಿಯ ಮಾದರಿಯ ಆಡಳಿತವಿದೆ. ಅಭಿವೃದ್ಧಿಗೆ ಹಣ ಇಲ್ಲ, ಭ್ರಷ್ಟಾಚಾರ ಮಿತಿ ಮೀರಿದೆ. ಸಚಿವರ ಮೇಲೆ ಸಚಿವರ ಮೇಲೆ ಆರೋಪ ಜಾಸ್ತಿ ಆಗುತ್ತಿವೆ. ರಾಜ್ಯ ಸರ್ಕಾರದ ಎರಡು ವರ್ಷಗಳ ವೈಫಲ್ಯವನ್ನು ಖಂಡಿಸಿ ಪ್ರತಿ ಗ್ರಾಪಂ ಎದುರು ಪ್ರತಿಭಟನೆ ನಡೆಸಲಿದ್ದೇವೆ ಎಂದರು.
ಜಿಲ್ಲಾ ಉಪಾಧ್ಯಕ್ಷ ಸುಬ್ರಾಯ ವಾಳ್ಕೆ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ರಮೇಶ ನಾಯ್ಕ, ಪ್ರಮುಖರಾದ ಗುರುಪ್ರಸಾದ ಹೆಗಡೆ ಹರ್ತೆಬೈಲ್, ಉಷಾ ಹೆಗಡೆ, ರೇಖಾ ಹೆಗಡೆ, ಆರ್.ಡಿ.ಹೆಗಡೆ, ಸಂತೋಷ ತಳವಾರ, ವಿನಾಯಕ ಇದ್ದರು.ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಆಶಯಕ್ಕೆ ಸದಾ ವಿರುದ್ಧವಾಗಿ ನಡೆದುಕೊಂಡು ಬಂದಿದೆ. ಇದುವರೆಗೆ ೧೧೦ ಬಾರಿ ಸಂವಿಧಾನ ಬದಲಾವಣೆ ಮಾಡಿಲಾಗಿದ್ದರೂ ಕಾಂಗ್ರೆಸ್ ಪಕ್ಷವೇ ೮೦ಕ್ಕೂ ಅಧಿಕ ಬಾರಿ ತನಗೆ ಬೇಕಾದಂತೆ ಬದಲಾವಣೆ ಮಾಡಿದೆ. ಬಿಜೆಪಿ ದೇಶಕ್ಕೆ ಪೂರಕವಾಗಿ ಬದಲಾವಣೆ ಮಾಡಿದೆ. ಅನಂತಕುಮಾರ ಹೆಗಡೆ ಒಂದು ಹೇಳಿಕೆಯನ್ನೇ ಕಾಂಗ್ರೆಸ್ ಅಸ್ತ್ರವಾಗಿ ಬಳಿಸಿಕೊಂಡಿದೆ ಎಂದು ಲಿಂಗರಾಜ ಪಾಟೀಲ ಆರೋಪಿಸಿದರು.