ನಾಳೆ ಕೊಪ್ಪಳದಲ್ಲಿ ಸೌಹಾರ್ದ ನಡಿಗೆ

KannadaprabhaNewsNetwork |  
Published : Jun 25, 2025, 11:47 PM IST

ಸಾರಾಂಶ

ದೇಶದೆಲ್ಲೆಡೆ ಕೋಮು-ದ್ವೇಷ ಹರಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಇತ್ತೀಚೆಗೆ ಕರ್ನಾಟಕದಲ್ಲೂ ಮಿತಿಮೀರಿದೆ. ಈ ವೇಳೆ ನಾಡಿನ ಭಾವೈಕ್ಯತೆಯ ಪರಂಪರೆ ಎತ್ತಿ ಹಿಡಿದು ಸೌಹಾರ್ದತೆಯ ಸಂದೇಶ ಸಾರಲು ಸೌಹಾರ್ದ ನಡಿಗೆ ನಡೆಸಲಾಗುತ್ತಿದೆ.

ಕೊಪ್ಪಳ:

ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ರಾಜ್ಯ ಸಮಿತಿ ಕರೆಯ ಮೇರೆಗೆ ಜೂ. 27ರಂದು ಬೆಳಗ್ಗೆ 10ಕ್ಕೆ ನಗರದ ಕೇಂದ್ರೀಯ ಬಸ್ ನಿಲ್ದಾಣ ಬಳಿಯ ಕನಕದಾಸ ವೃತ್ತದಿಂದ ಅಶೋಕ ವೃತ್ತದ ವರೆಗೆ ಸೌಹಾರ್ದ ನಡಿಗೆ ಕಾರ್ಯಕ್ರಮ ನಡೆಸಲು ವಿವಿಧ ಸಂಘಟನೆಗಳ ಮುಖಂಡರು ಪೂರ್ವಭಾವಿ ಸಭೆಯಲ್ಲಿ ತಿರ್ಮಾನಿಸಿದರು.

ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ಎಸ್‌ಎಸ್‌ಎಫ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಸಿರ್ ಸಖಾಫಿ ಮಾತನಾಡಿ, ದೇಶದೆಲ್ಲೆಡೆ ಕೋಮು-ದ್ವೇಷ ಹರಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಇತ್ತೀಚೆಗೆ ಕರ್ನಾಟಕದಲ್ಲೂ ಮಿತಿಮೀರಿದೆ. ಈ ವೇಳೆ ನಾಡಿನ ಭಾವೈಕ್ಯತೆಯ ಪರಂಪರೆ ಎತ್ತಿ ಹಿಡಿದು ಸೌಹಾರ್ದತೆಯ ಸಂದೇಶ ಸಾರಲು

ಫೆಡರೇಷನ್‌ ವತಿಯಿಂದ ರಾಜ್ಯದ 20 ನಗರದಲ್ಲಿ ಮನುಷ್ಯ ಮನಸ್ಸುಗಳನ್ನು ಪೋಣಿಸುವ ವಾಕ್ಯದೊಂದಿಗೆ ಹಿಂದೂ, ಮುಸ್ಲಿಂ, ಕ್ರೈಸ್ತ ಹಾಗೂ ಇನ್ನಿತರ ಜಾತಿ-ಧರ್ಮಗಳ ನಾಯಕರನ್ನು ಸೇರಿಸಿ ಸೌಹಾರ್ದ ನಡಿಗೆ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕೆಂದು ಕರೆ ನೀಡಿದರು.

ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ಮುಹಮ್ಮದ್ ಸಫ್ವಾನ್ ಮಾತನಾಡಿ, ಹಿಂದೂ ಕಂಡರೆ ಮುಸ್ಲಿಂರಿಗೆ, ಮುಸ್ಲಿಂ ಕಂಡರೆ ಹಿಂದೂಗಳಿಗೆ ಆಗದಂತೆ ಕೋಮುವಾದಿಗಳು ವಾತಾವರಣ ಸೃಷ್ಟಿಸಿದ್ದಾರೆ. ಹೀಗಾಗಿ ಎಲ್ಲರೂ ಒಂದಾಗಿ ಸೌಹಾರ್ದತೆಯಿಂದ ಬಾಳಲು ಈ ನಡಿಗೆ ಆಯೋಜಿಸಲಾಗಿದೆ ಎಂದರು.

ಭ್ರಾತೃತ್ವ ಸಮಿತಿಯ ಜಿಲ್ಲಾ ಸಂಚಾಲಕ ಎಸ್.ಎ. ಗಫಾರ ಮಾತನಾಡಿ, ಇಂತಹ ಕಾರ್ಯಕ್ರಮಗಳು ಇಂದು ಅಗತ್ಯವಾಗಿದ್ದು ಶುಕ್ರವಾರ ನಡೆಯುವ ಈ ಕಾರ್ಯಕ್ರಮದಲ್ಲಿ ಜಾತ್ಯತೀತ ಮನೋಭಾವನೆವುಳ್ಳವರು ಪಾಲ್ಗೊಂಡು ಬೆಂಬಲಿಸುತ್ತೇವೆ ಎಂದು ಹೇಳಿದರು.

ಫಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ ಮಾತನಾಡಿ, ನಮ್ಮಲ್ಲಿ ಯಾವುದೇ ಜಾತಿ-ಭೇದವಿಲ್ಲ. ಆದರೆ, ಕೆಲವರು ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಎಲ್ಲರೂ ಸೇರಿ ಸೌಹಾರ್ದ ನಡಿಗೆ ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.

ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ನಗರ ಘಟಕದ ಮಾಜಿ ಗೌರವ ಅಧ್ಯಕ್ಷ ಮೌಲಾನಾ ಖಾರಿ ಮೊಹಮ್ಮದ್ ಅಬುಲ್ ಹಸನ್ ಖಾಝಿ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಕರ್ನಾಟಕ ಮುಸ್ಲಿಮ್ ಜಮಾಅತ್ ಸಂಚಾಲಕ ಕರೀಮ್ ಗಚ್ಚಿನಮನಿ, ರಾಶೀದ್ ಖಾಝಿ, ಯುವ ಮುಖಂಡ ಸೈಯ್ಯದ್ ಅಬ್ದುಲ್ ಖಾದರ್ ಪೀರಝಾದೆ, ಖಾದರ್ ಬಾಷಾ ಮಾಸ್ತರ್, ಫಕೀರಸಾಬ್ ಗುರಿಕಾರ ಸೇರಿದಂತೆ ಇತರರು ಭಾಗವಹಿಸಿದ್ದರು.

PREV

Recommended Stories

ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿಗೆ ಅನುದಾನ: ಸಚಿವ
ಸಂಭ್ರಮದ ಮೌನೇಶ್ವರ ಜಾತ್ರಾ ಮಹೋತ್ಸವ