- ಕ್ಷೇತ್ರ ಅಭಿವೃದ್ಧಿ ಬಿಟ್ಟು ವಿನಾಕಾರಣ ಓಲೈಕೆ ರಾಜಕಾರಣ: ಪಾಂಡೋಮಟ್ಟಿ ಲೋಕಣ್ಣ ಆರೋಪ
ಕನ್ನಡಪ್ರಭ ವಾರ್ತೆ ಚನ್ನಗಿರಿ
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಗಟ್ಟಿಯಾಗಿದೆ. ಪಕ್ಷಕ್ಕೆ ಯಾರೂ ಮುಜುಗರ ತರುವಂತಹ ಹೇಳಿಕೆ ನೀಡುವುದು ಸರಿಯಲ್ಲ. ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಿರಿಯ ನಾಯಕರು, ಮುಖಂಡರು ಇದ್ದಾರೆ. ಕ್ಷೇತ್ರದ ಶಾಸಕ ಬಸವರಾಜು ಶಿವಗಂಗಾ ಯಾರನ್ನೋ ಮೆಚ್ಚಿಸಲು ಅವರಿವರ ಹಿಂದೆ ದೆಹಲಿಗೆ ಸುತ್ತುವುದು ಸರಿಯಾದ ಕ್ರಮವಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಪಾಂಡೋಮಟ್ಟಿ ಲೋಕಣ್ಣ ಹೇಳಿದರು.ಬುಧವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಜಿಲ್ಲೆಯಲ್ಲಿ 6 ಜನ ಕಾಂಗ್ರೆಸ್ ಶಾಸಕರಿದ್ದಾರೆ. ಚನ್ನಗಿರಿ ಕ್ಷೇತ್ರವನ್ನು ಹೊರತುಪಡಿಸಿದರೆ ಇನ್ನುಳಿದ ಎಲ್ಲ ಕ್ಷೇತ್ರಗಳಲ್ಲಿಯೂ ಅನುಭವಿ ಮತ್ತು ಹಿರಿಯ ಶಾಸಕರು ಇದ್ದಾರೆ. ಅವರು ಯಾರು ಮುಖ್ಯಮಂತ್ರಿ ಆಗುವ ವಿಚಾರದ ಬಗ್ಗೆ ಮಾತನಾಡುತ್ತಿಲ್ಲ. ಅವರೆಲ್ಲರೂ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಗಮನಹರಿಸುತ್ತಿದ್ದಾರೆ ಎಂದರು.
ಆದರೆ, ಚನ್ನಗಿರಿ ಕ್ಷೇತ್ರ ಶಾಸಕರು ಮಾತ್ರ ಕ್ಷೇತ್ರ ಅಭಿವೃದ್ಧಿ ವಿಚಾರ ಬಿಟ್ಟು ವಿನಾಕಾರಣ ಇನ್ನೊಬ್ಬರ ಓಲೈಕೆಯಲ್ಲಿ ಕಾಲಹರಣ ಮಾಡುತ್ತ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಳವಣಿಗೆಗೆ ಮಾರಕ ಆಗುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಲಿ ಅಥವಾ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಗಳಾಗಲಿ ಅವರಿಬ್ಬರೂ ನಮ್ಮ ಕಾಂಗ್ರೆಸ್ ನಾಯಕರು. ಶಾಸಕರ ಈ ಓಲೈಕೆ ರಾಜಕಾರಣದಿಂದ ಪಕ್ಷಕ್ಕೆ ಮುಜುಗರವಾಗುತ್ತಿದೆ. ರಾಜಕಾರಣವನ್ನು ಹಿರಿಯರ ಮಾರ್ಗದರ್ಶನ ಪಡೆದು ಮಾಡಬೇಕು ಹುಡುಗರನ್ನು ಇಟ್ಟುಕೊಂಡು ರಾಜಕಾರಣ ಮಾಡಬಾರದು ಎಂದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೀರೇಶ್ ನಾಯ್ಕ್ ಮಾತನಾಡಿ, ಕ್ಷೇತ್ರದ ಶಾಸಕರ ರಾಜಕಾರಣವನ್ನು ಕಳೆದ ಎರಡೂವರೆ ವರ್ಷಗಳಿಂದ ನೋಡಿದ್ದೇವೆ. ಅವರ ಗೆಲುವಿಗೆ ಚನ್ನಗಿರಿ ಕ್ಷೇತ್ರದ ಎಲ್ಲ ಜಾತಿಗಳ ಮತದಾರರು ಮತ ನೀಡಿ ಗೆಲ್ಲಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಅಮಾನುಲ್ಲಾ, ಜಿಲ್ಲಾ ಕಾರ್ಯದರ್ಶಿ ಸಿ.ನಾಗರಾಜ್, ಸಂತೆಬೆನ್ನೂರು ಗ್ರಾಪಂ ಸದಸ್ಯ ಆಸೀಫ್ ಖಾನ್, ಬೋರ್ ವೆಲ್ ಪ್ರಕಾಶ್, ನಾಗರಾಜ್ ಉಪಸ್ಥಿತರಿದ್ದರು.
- - -(ಕೋಟ್) ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಾರ್ಯಕರ್ತರು, ಮುಖಂಡರು ಸಂಘಟಿಸುತ್ತಿದ್ದರೆ, ಶಾಸಕ ಬಸವರಾಜ ಶಿವಗಂಗಾ ಮಾತ್ರ ಈ ಸಂಘಟನೆಯನ್ನು ಒಡೆಯುವ ಕೆಲಸ ಮಾಡುತ್ತಿರುವುದು ಸರಿಯಲ್ಲ.
- ವೀರೇಶ್ ನಾಯ್ಕ್, ಜಿಲ್ಲಾ ಉಪಾಧ್ಯಕ್ಷ.- - -
-26ಕೆಸಿಎನ್ಜಿ3.ಜೆಪಿಜಿ:ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಪಾಂಡೋಮಟ್ಟಿ ಲೋಕಣ್ಣ ಮಾತನಾಡಿದರು.