ಚನ್ನಗಿರಿ ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ಫಲಿತಾಂಶ ಪ್ರಕಟ

KannadaprabhaNewsNetwork | Published : Mar 20, 2025 1:21 AM

ಸಾರಾಂಶ

ಪಟ್ಟಣದ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಎಲ್‌ಡಿ) ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ಮತಗಳ ಎಣಿಕೆ ಬುಧವಾರ ಸಂಜೆ ಬ್ಯಾಂಕ್‌ ಆವರಣದಲ್ಲಿ ನಡೆಯಿತು.

- ಫೆ.2ರಂದು ನಡೆದಿದ್ದ ಮತದಾನ, ಕೋರ್ಟ್‌ ಆದೇಶದಂತೆ ಮಾ.19ರಂದು ಮತ ಎಣಿಕೆ - - - ಕನ್ನಡಪ್ರಭ ವಾರ್ತೆ ಚನ್ನಗಿರಿ

ಪಟ್ಟಣದ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಎಲ್‌ಡಿ) ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ಮತಗಳ ಎಣಿಕೆ ಬುಧವಾರ ಸಂಜೆ ಬ್ಯಾಂಕ್‌ ಆವರಣದಲ್ಲಿ ನಡೆಯಿತು. ನಿರ್ದೇಶಕರ ಚುನಾವಣೆಗೆ ಫೆ.2ರಂದು ಮತದಾನ ನಡೆದಿತ್ತು. ಕಾರಣಾಂತರಗಳಿಂದ ನ್ಯಾಯಾಲಯ ಆದೇಶದಂತೆ ಮತಗಳ ಎಣಿಕೆ ಕಾರ್ಯ ಮಾ.19ಕ್ಕೆ ನಿಗದಿಪಡಿಸಲಾಗಿತ್ತು. ಅದರಂತೆ ಬುಧವಾರ ಮಧ್ಯಾಹ್ನ 3 ಗಂಟೆಯಿಂದ ಮತಗಳ ಎಣಿಕೆ ನಡೆದು, ಸಂಜೆ ಫಲಿತಾಂಶ ಘೋಷಣೆ ಮಾಡಲಾಯಿತು.

ಸಾಮಾನ್ಯ ಕ್ಷೇತ್ರಗಳಾದ ಚನ್ನಗಿರಿಯಿಂದ ಎಸ್.ಮಂಜಪ್ಪ, ವಡ್ನಾಳಿನಿಂದ ಜಿ.ಎಸ್.ಯೋಗೀಶ್ವರಪ್ಪ, ಹೊದಿಗೆರೆಯಿಂದ ಎಂ.ಎಸ್.ಅಜ್ಜಪ್ಪ, ಬಸವಾಪಟ್ಟಣದಿಂದ ವೈ.ಪಿ. ಮಹದೇವಪ್ಪ, ಕಾರಿಗನೂರಿನಿಂದ ಪಿ.ದೊಡ್ಡಬಸಪ್ಪ, ನಲ್ಲೂರಿನಿಂದ ಜಿ.ಪಿ.ಸತೀಶ್, ಸಂತೆಬೆನ್ನೂರಿನಿಂದ ಕೆ.ಆರ್.ಶಿವಕುಮಾರ್ ಹಾಗೂ ಪಾಂಡೋಮಟ್ಟಿಯಿಂದ ಜಿ.ಆರ್.ಲೋಕೇಶಪ್ಪ ಆಯ್ಕೆಯಾಗಿದ್ದಾರೆ.

ದೇವರಹಳ್ಳಿ ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಟಿ.ಆರ್.ವಾಸುದೇವಪ್ಪ, ಉಬ್ರಾಣಿ ಕಸಬಾ ಹೋಬಳಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಜಿ.ಶಶಿಧರ್ ನಾಯ್ಕ್, ಬಸವಾಪಟ್ಟಣ- ಸಂತೆಬೆನ್ನೂರು ಹೋಬಳಿಯ ಮಹಿಳಾ ಮೀಸಲು ಕ್ಷೇತ್ರದಿಂದ ಬಿ.ಎನ್.ಶೋಭಾ ಆಯ್ಕೆಯಾಗಿದ್ದಾರೆ.

ಕೋಗಲೂರು ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಎಸ್.ಬಿ.ಶಿವಕುಮಾರ್, ನವೀಲೆಹಾಳ್ ಮಹಿಳಾ ಮೀಸಲು ಕ್ಷೇತ್ರದಿಂದ ಎಸ್.ಎಂ.ಉಷಾ, ಕಗತೂರು ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಆರ್.ಕುಬೇಂದ್ರಪ್ಪ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಎಸ್.ಮಂಜುಳಾ ಘೋಷಣೆ ಮಾಡಿದರು.

- - -

(ಬಾಕ್ಸ್‌) * ಚನ್ನಗಿರಿ ತಾಲೂಕಿನಲ್ಲಿ ಬಿಜೆಪಿ ಸದೃಢ: ಮಲ್ಲಿಕಾರ್ಜುನ್ ಚನ್ನಗಿರಿ: ತಾಲೂಕಿನಲ್ಲಿ ಬಿಜೆಪಿ ಸದೃಢವಾಗಿದೆ. ಸ್ಥಳೀಯ ಸಂಸ್ಥೆಗಳಿಂದ ಹಿಡಿದು ಸಹಕಾರ ಕ್ಷೇತ್ರದವರೆಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೇ ಜಯಗಳಿಸುತ್ತಿದ್ದಾರೆ. ಇದು ತಾಲೂಕಿನಲ್ಲಿ ಬಿಜೆಪಿ ಸದೃಢತೆ ತೋರುತ್ತಿದೆ ಎಂದು ತಾಲೂಕು ಮುಖಂಡ, ದಾವಣಗೆರೆ ವಿ.ವಿ.ಯ ಮಾಜಿ ಸಿಂಡಿಕೇಟ್ ಸದಸ್ಯ ಮಾಡಾಳು ಮಲ್ಲಿಕಾರ್ಜುನ್ ಹೇಳಿದರು.

ಬುಧುವಾರ ಪಟ್ಟಣದ ಪಿ.ಎಲ್.ಡಿ. ಬ್ಯಾಂಕ್ ನ ಚುನಾವಣೆಯಲ್ಲಿ ಜಯಗಳಿಸಿದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ತಾಲೂಕು ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ್ ಅವರಿಗೆ ಕೃತಜ್ಞತೆ ಸಲ್ಲಿಸುವ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಈ ಪಿ.ಎಲ್.ಡಿ ಬ್ಯಾಂಕ್‌ನಲ್ಲಿ ಒಟ್ಟು 14 ನಿರ್ದೇಶಕ ಸ್ಥಾನಗಳಿದ್ದು, ಇವುಗಳಲ್ಲಿ 9 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೇ ಜಯ ಗಳಿಸಿದ್ದಾರೆ. ಸತತವಾಗಿ 3ನೇ ಬಾರಿಗೆ ಬಿಜೆಪಿ ಬೆಂಬಲಿತರು ಅಧಿಕಾರ ನಡೆಸುತ್ತಿರುವುದು ಸಂತಸ ತಂದಿದೆ ಎಂದರು.

ದೇಶದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ಇಲ್ಲದೇ ಇರುವ ಸಂದರ್ಭದಲ್ಲಿ ಸಹಕಾರ ಸಂಘಗಳು ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯಗಳನ್ನು ನೀಡುತ್ತ ರೈತರಿಗೆ ಆರ್ಥಿಕ ಶಕ್ತಿ ತುಂಬಿವೆ. ಇಂಥವ ಕೆಲಸ ಮಾಡಿದ ಸಂಸ್ಥೆ ಚುನಾವಣೆಯಲ್ಲಿ ಜಯ ಗಳಿಸಿದ ನೀವುಗಳು ಅಧಿಕಾರದ ಅವಧಿಯಲ್ಲಿ ರೈತರಿಗೆ ಸಹಕಾರ ನೀಡಬೇಕು. ಪಕ್ಷಕ್ಕೆ ಉತ್ತಮ ಹೆಸರು ತರಬೇಕು ಎಂದರು.

ತಾಲೂಕು ಬಿಜೆಪಿ ಅಧ್ಯಕ್ಷ ಮಲಹಾಳ್ ಡಿ.ಸಿ. ಕುಮಾರ ಸ್ವಾಮಿ, ಪುರಸಭೆ ಸದಸ್ಯ ಪಟ್ಲಿ ನಾಗರಾಜ್, ಗಂಗಗೊಂಡನಹಳ್ಳಿ ಜಗದೀಶ್, ಕೋಗಲೂರು ಉಮೇಶ್, ಮಾಚನಾಯ್ಕನಹಳ್ಳಿ ಜಯಪ್ಪ, ಪುನೀತ್ ಮೊದಲಾದವರು ಹಾಜರಿದ್ದರು.

- - - -19ಕೆಸಿಎನ್‌ಜಿ4:

ಚನ್ನಗಿರಿ ಪಟ್ಟಣದ ಪಿ.ಎಲ್.ಡಿ. ಬ್ಯಾಂಕ್ ಚುನಾವಣೆಯಲ್ಲಿ ಜಯ ಗಳಿಸಿದ ಬಿಜೆಪಿ ಬೆಂಬಲಿತ ನಿರ್ದೇಶಕರು ತಾಲೂಕು ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ್ ಅವರಿಗೆ ಗೌರವಿಸಿದರು.

Share this article