ಕನ್ನಡಪ್ರಭವಾರ್ತೆ ವಿರಾಜಪೇಟೆ
ಕೊಡವ ಹಾಕಿ ಅಕಾಡೆಮಿ, ಹಾಕಿ ಕರ್ನಾಟಕ ಹಾಗೂ ಕಾವೇರಿ ಪದವಿ ಕಾಲೇಜು, ವಿರಾಜಪೇಟೆ ಇವರ ಸಹಯೋಗದಲ್ಲಿ ಹಾಕಿ ತೀರ್ಪುಗಾರರಿಗೆ ಎರಡು ದಿನಗಳ ಕಾರ್ಯಾಗಾರಕ್ಕೆ ಬುಧವಾರ ಚಾಲನೆ ನೀಡಲಾಯಿತು .ಕಾವೇರಿ ಕಾಲೇಜಿನ ಕೌಸ್ತುಭ ಸಭಾಭವನದಲ್ಲಿ ನಡೆದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷರಾದ ಮೇಕೇರಿರ ರವಿ ಪೆಮ್ಮಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ರಘುಪ್ರಸಾದ್ ಹಾಗೂ ರೋಹಿಣಿ ಬೋಪಣ್ಣ ರಂತಹ ಅಂತರಾಷ್ಟ್ರೀಯ ತೀರ್ಪುಗಾರರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿರುವುದು ನಿಜಕ್ಕೂ ಹೆಮ್ಮೆಯ ವಿಚಾರ. ಮೂರು ಒಲಂಪಿಕ್ಸ್ ಗಳನ್ನುಆಡಿಸಿದ ಸಾಧನೆಯನ್ನು ಮಾಡಿದಂತಹ ರಘುಪ್ರಸಾದ್ ರಂತಹ ಅಂತರಾಷ್ಟ್ರೀಯ ತೀರ್ಪುಗಾರರನ್ನು ಕರೆಸಿರುವಂಥದ್ದು ನಿಜವಾಗಿಯೂ ಆಯೋಜಕರ ಸಾಧನೆಯಾಗಿದ್ದು ಕಾರ್ಯಾಗಾರದಲ್ಲಿ ಭಾಗವಹಿಸುವಂತಹ ಸರ್ವರು ಎರಡು ದಿನಗಳವರೆಗೆ ಇವರಿಂದ ಆದಷ್ಟು ಹೆಚ್ಚಿನ ಪ್ರಮಾಣದಲ್ಲಿ ಹಾಕಿಯ ತೀರ್ಪುಗಾರರಿಗೆ ಸಂಬಂಧಿಸಿದ ವಿಚಾರಗಳನ್ನು ತಿಳಿದುಕೊಂಡು ತಮ್ಮ ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟ, ರಾಜ್ಯ ಮಟ್ಟ ಹಾಗೂ ರಾಷ್ಟ್ರಮಟ್ಟದಲ್ಲಿ ನಡೆಯುವಂತಹ ಹಾಕಿ ಪಂದ್ಯಾಟಗಳ ತೀರ್ಪುಗಾರರಾಗಿ ನಿಯೋಜನೆಗೊಳ್ಳುವುದರ ಮೂಲಕ ನಾಡಿಗೆ ಕೀರ್ತಿಯನ್ನು ತರಬೇಕೆಂದು ಆಶಿಸಿದರು .
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿರಾಜಪೇಟೆ ಕಾವೇರಿ ಪದವಿ ಕಾಲೇಜು ಪ್ರಾಂಶುಪಾಲರಾದ ಬೆನೆಡಿಕ್ಟ್ ಆರ್ ಸಲ್ದಾನ ಕೊಡಗಿನಲ್ಲಿ ಇತ್ತೀಚಿನ ದಿನಗಳಲ್ಲಿ ಎಲ್ಲ ರೀತಿಯ ಕ್ರೀಡೆಗಳು ನಡೆಯುವುದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಹೆಚ್ಚಿನ ಕ್ರೀಡೆಗಳು ಯಶಸ್ಸನ್ನು ಕಾಣದೆ ಗೊಂದಲದಿಂದಾಗಿ ಜಗಳಗಳು ನಡೆದು ಕ್ರೀಡೆ ರದ್ದಾಗಿರುವುದನ್ನು ನೋಡಿದ್ದೇವೆ. ಆದ್ದರಿಂದ ಒಂದು ಕ್ರೀಡೆಯು ಯಶಸ್ವಿಯಾಗಬೇಕಾದರೆ ಆಯೋಜಕರ ಶ್ರಮ ಎಷ್ಟಿರುತ್ತದೆಯೋ ಅದೇ ರೀತಿಯಾಗಿ ತೀರ್ಪುಗಾರರ ಪಕ್ಷಪಾತ ರಹಿತ ವಾದಂತಹ ತೀರ್ಪುಗಳು ಅತಿ ಮುಖ್ಯವಾಗಿರುತ್ತದೆ. ಅದರಲ್ಲೂ ಹಾಕಿ ಕ್ರೀಡೆಗಳಲ್ಲಿ ತೀರ್ಪುಗಾರರು ಹೆಚ್ಚಿನ ಸೂಕ್ಷ್ಮತೆಯಿಂದ ಪ್ರತಿ ಹಂತವನ್ನು ಗಮನಿಸಿ ತೀರ್ಪು ನೀಡಬೇಕಾಗುತ್ತದೆ. ಅಂತಹ ತೀರ್ಪುಗಾರರಿಗೆ ನಮ್ಮ ಕಾಲೇಜಿನಲ್ಲಿ ಎರಡು ದಿನಗಳ ಕಾರ್ಯಾಗಾರವನ್ನು ಆಯೋಜಿಸಿರುವ ಆಯೋಜಕರಿಗೆ ಧನ್ಯವಾದಗಳು ತಿಳಿಸಿದರು. ಇಂತಹ ಕಾರ್ಯಾಗಾರಗಳು ಹೆಚ್ಚು ನಡೆದ ಸಂದರ್ಭದಲ್ಲಿ ಕ್ರೀಡೆಗಳು ಕೂಡ ಯಾವುದೇ ಸಮಸ್ಯೆಯಾಗದೆ ಯಶಸ್ಸನ್ನು ಗಳಿಸಲು ಸಾಧ್ಯ ಎಂದರು.ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದ ಮಡಿಕೇರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ದೈಹಿಕ ನಿರ್ದೇಶಕರಾದ ಕಂಭೀರಂಡ ರಾಕಿ ಪೂವಣ್ಣ, ಈ ಕಾರ್ಯಾಗಾರವು ಪ್ರಮುಖವಾಗಿ ಕೊಡಗಿನ ಯುವ ಆಟಗಾರರಿಗೆ ಹಾಗೂ ಯುವ ತೀರ್ಪಗಾರರಿಗಾಗಿ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ವಕೀಲರು ಹಾಗೂ ವಿರಾಜಪೇಟೆ ತಾಲೂಕು ಹಾಕಿ ಅಕಾಡೆಮಿಯ ಉಪಾಧ್ಯಕ್ಷರಾದ ಮಾದಂಡ ಪೂವಯ್ಯ, ಮಡಿಕೇರಿ ಹಾಕಿ ಅಕಾಡೆಮಿಯ ಉಪಾಧ್ಯಕ್ಷೆ ಬಡಕಡ ಡೀನಾ ಪೂವಯ್ಯ, ಕೊಡವ ಹಾಕಿ ಅಕಾಡೆಮಿಯ ಕಾರ್ಯದರ್ಶಿಗಳಾದ ಮರ್ಚಂಡ ಗಣೇಶ್ ಪೊನ್ನಪ್ಪ, ಅಂತಾರಾಷ್ಟ್ರೀಯ ಹಾಕಿ ತೀರ್ಪುಗಾರ ಅಪ್ಪಚಟೋಲಂಡ ಅಯ್ಯಪ್ಪ, ಕಾವೇರಿ ಪದವಿ ಕಾಲೇಜಿನ ದೈಹಿಕ ನಿರ್ದೇಶಕರಾದ ತಮ್ಮಯ್ಯ, ಕೊಡಗು ಹಾಕಿ ಅಕಾಡೆಮಿಯ ಸದಸ್ಯರು ಹಾಜರಿದ್ದರು.