ಮಟ್ಕಾ ಪ್ರಕರಣದ ವಿಚಾರಣೆಗೆಂದು ಕರೆ ತಂದಿದ್ದ ವ್ಯಕ್ತಿ ಪೊಲೀಸರ ವಶದಲ್ಲಿದ್ದಾಗಲೇ ಸಾವನ್ನಪ್ಪಿದ ಹಿನ್ನೆಲೆ ಉದ್ರಿಕ್ತರ ಗುಂಪು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಕಲ್ಲು ತೂರಾಟ ನಡೆಸಿದೆ. ಇದರಿಂದ 11 ಪೊಲೀಸರು ಗಾಯಗೊಂಡಿದ್ದು, ಏಳೆಂಟು ವಾಹನಗಳನ್ನು ಜಖಂಗೊಂಡಿವೆ ನಡೆಸಲಾಗುತ್ತಿದೆ.
ದಾವಣಗೆರೆ : ಮಟ್ಕಾ ಪ್ರಕರಣದ ವಿಚಾರಣೆಗೆಂದು ಕರೆ ತಂದಿದ್ದ ವ್ಯಕ್ತಿ ಪೊಲೀಸರ ವಶದಲ್ಲಿದ್ದಾಗಲೇ ಸಾವನ್ನಪ್ಪಿದ ಹಿನ್ನೆಲೆ ಉದ್ರಿಕ್ತರ ಗುಂಪು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಕಲ್ಲು ತೂರಾಟ ನಡೆಸಿದೆ. ಇದರಿಂದ 11 ಪೊಲೀಸರು ಗಾಯಗೊಂಡಿದ್ದು, ಏಳೆಂಟು ವಾಹನಗಳನ್ನು ಜಖಂಗೊಂಡಿವೆ. ಉದ್ರಿಕ್ತರನ್ನು ಚದುರಿಸಲು ಪೊಲೀಸರು ರಾತ್ರೋರಾತ್ರಿ ಲಾಠಿ ಪ್ರಹಾರ ನಡೆಸಿದ ಘಟನೆ ಚನ್ನಗಿರಿ ಪಟ್ಟಣದಲ್ಲಿ ಶುಕ್ರವಾರ ತಡರಾತ್ರಿ ವರದಿಯಾಗಿದೆ. ಘಟನೆ ಸಂಬಂಧ 27 ಮಂದಿಯನ್ನು ವಶಕ್ಕೆ ಪಡೆಯಲಾಗಿತ್ತು. ಅವರಲ್ಲಿ 7 ಮಂದಿ ಕೈಬಿಟ್ಟು, ಈಗ 20 ಮಂದಿಯ ವಿಚಾರಣೆ ನಡೆಸಲಾಗುತ್ತಿದೆ.
ಚನ್ನಗಿರಿ ಪಟ್ಟಣದ ಟಿಪ್ಪು ನಗರದ ವಾಸಿ ಆದಿಲ್ (32) ವಿಚಾರಣೆಗೆಂದು ಪೊಲೀಸರು ಠಾಣೆಗೆ ಕರೆದೊಯ್ದಿದ್ದ ವೇಳೆ ಸಾವನ್ನಪ್ಪಿದ್ದ. ಪೊಲೀಸರ ಹಲ್ಲೆಯಿಂದಲೇ ಆದಿಲ್ ಸಾವನ್ನಪ್ಪಿರುವುದಾಗಿ ಆರೋಪಿಸಿ ರಾತ್ರೋರಾತ್ರಿ 500ಕ್ಕೂ ಹೆಚ್ಚು ಜನರು ಗುಂಪಾಗಿ ಚನ್ನಗಿರಿ ಠಾಣೆಗೆ ಮುತ್ತಿಗೆ ಹಾಕಿ, ಪ್ರತಿಭಟನೆ ಆರಂಭಿಸಿದರು. ನೋಡ ನೋಡುತ್ತಿದ್ದಂತೆ ಗುಂಪಿನಲ್ಲಿದ್ದ ಯಾರೋ ಕಿಡಿಗೇಡಿಗಳು ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿ, ಠಾಣೆ ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ಪೊಲೀಸ್ ವಾಹನ, ವಶಕ್ಕೆ ಪಡೆದಿದ್ದ ವಾಹನಗಳ ಮೇಲೆ ಕಲ್ಲು ತೂರಿ ಹಾನಿಗೊಳಿಸಿದರು.
ಉದ್ರಿಕ್ತ ಗುಂಪಿನಲ್ಲಿ ಕೆಲ ಕಿಡಿಗೇಡಿಗಳ ಕಲ್ಲು ತೂರಾಟದಿಂದಾಗಿ ಪೊಲೀಸ್ ಠಾಣೆಯ ಕಿಟಕಿಗಳ ಗಾಜುಗಳು ಪುಡಿಯಾಗಿದ್ದು, ಕರ್ತವ್ಯದ ಮೇಲಿದ್ದ 11 ಸಿಬ್ಬಂದಿಗೆ ತೀವ್ರ ಕಲ್ಲೇಟುಗಳು ಬಿದ್ದಿವೆ. ವಿಷಯ ತಿಳಿಯುತ್ತಿದ್ದಂತೆಯೇ ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಗಳಿಂದ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ತುಕಡಿಗಳು, ಕೆಎಸ್‌ಆರ್‌ಪಿ ತುಕಡಿಗಳು ಚನ್ನಗಿರಿ ಪಟ್ಟಣಕ್ಕೆ ದೌಡಾಯಿಸಿ, ಉದ್ರಿಕ್ತ ಗುಂಪನ್ನು ಚದುರಿಸಲು ಲಘು ಲಾಠಿ ಪ್ರಹಾರ ಮಾಡಿದವು. ಅದಕ್ಕೂ ಮುಂಚೆ ಚನ್ನಗಿರಿ ಡಿವೈಎಸ್‌ಪಿ ಡಾ.ಪ್ರಶಾಂತ ಮನ್ನೋಳಿ, ಸಿಪಿಐ ನಿರಂಜನ ಪ್ರತಿಭಟನಾಕಾರರ ಮನವೊಲಿಸಲು ಮಾಡಿದ ಪ್ರಯತ್ನ ಕೈಕೊಟ್ಟಿತ್ತು.
ಆದಿಲ್ ಅಂತ್ಯಕ್ರಿಯೆ:
ಇಡೀ ಚನ್ನಗಿರಿ ಪಟ್ಟಣದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಅನಾವಶ್ಯಕವಾಗಿ ತಿರುಗಾಡುತ್ತಿದ್ದವರಿಗೆ ಪೊಲೀಸ್ ಬೆತ್ತದೇಟಿನ ರುಚಿಯನ್ನೂ ತೋರಿಸಲಾಗುತ್ತಿದೆ. ಪೊಲೀಸ್ ವಶದಲ್ಲಿದ್ದಾಗಲೇ ಮೃತಪಟ್ಟ ಆದಿಲ್ ಶವವನ್ನು ಚನ್ನಗಿರಿ ತಾಲೂಕು ಆಸ್ಪತ್ರೆಯಿಂದ ದಾವಣಗೆರೆ ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿತ್ತು. ಅನಂತರ ಮಧ್ಯಾಹ್ನದ ಹೊತ್ತಿದೆ ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ಚನ್ನಗಿರಿ ಪಟ್ಟಣದ ಈದ್ಗಾ ಮೈದಾನದ ಖಬರಸ್ತಾನದಲ್ಲಿ ಕುಟುಂಬ ಸದಸ್ಯರು, ಬಂಧ-ಬಳಗದ ಸಮಕ್ಷಮ ಮೃತ ಆದಿಲ್‌ನ ಅಂತ್ಯಕ್ರಿಯೆ ನಡೆಸಲಾಯಿತು.
ಆದಿಲ್ ಸಾವಿನಿಂದ ಬೂದಿ ಮುಚ್ಚಿದ ಕೆಂಡದಂತಿರುವ ಚನ್ನಗಿರಿ ಪಟ್ಟಣಕ್ಕೆ ಪೂರ್ವ ವಲಯದ ಪೊಲೀಸ್ ಮಹಾನಿರೀಕ್ಷಕ ಡಾ.ತ್ಯಾಗರಾಜನ್, ದಾವಣಗೆರೆ ಎಸ್‌ಪಿ ಉಮಾ ಪ್ರಶಾಂತ, ಶಿವಮೊಗ್ಗ ಎಸ್‌ಪಿ ಜಿ.ಕೆ. ಮಿಥುನ್‌ಕುಮಾರ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ, ಪರಿಸ್ಥಿತಿ ಪರಿಶೀಲಿಸಿದರು.
ಸದ್ಯಕ್ಕೆ ಚನ್ನಗಿರಿ ಪಟ್ಟಣದಲ್ಲಿ 5 ಜನ ಡಿವೈಎಸ್‌ಪಿಗಳು, 6 ಜನ ವೃತ್ತ ನಿರೀಕ್ಷಕರು, 15 ಜನ ಸಬ್ ಇನ್‌ಸ್ಪೆಕ್ಟರ್‌ಗಳು, 250 ಎಎಸ್‌ಐ, ಹೆಡ್ ಕಾನ್‌ಸ್ಟೇಬಲ್, ಕಾನ್‌ಸ್ಟೇಬಲ್‌ಗಳು, 4 ಜಿಲ್ಲಾ ಸಶಸ್ತ್ರ ಮೀಸಲು ಪಡೆ ತುಕಡಿಗಳು, 5 ಕೆಎಸ್‌ಆರ್‌ಪಿ ತುಕಡಿಗಳನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ.
ಕಿಡಿಗೇಡಿಗಳ ಮಟ್ಟಹಾಕಲು ಕ್ರಮ:
ಆದಿಲ್ ಸಾವಿನ ಹಿನ್ನೆಲೆಯಲ್ಲಿ ಚನ್ನಗಿರಿ ಠಾಣೆಗೆ ಮುತ್ತಿಗೆ ಹಾಕಿ, ಕಲ್ಲು ತೂರಾಟ ನಡೆಸಿದ್ದು, ವಾಹನಗಳನ್ನು ಜಖಂಗೊಳಿಸಿದ್ದು, ಪೊಲೀಸ್ ಜೀಪನ್ನು ಪಲ್ಟಿ ಮಾಡಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಕೆಲ ಕಿಡಿಗೇಡಿಗಳು ಪ್ರಯತ್ನಿಸಿದ್ದ ಘಟನೆಗಳೆಲ್ಲಾ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಅಂತಹ ಕಿಡಿಗೇಡಿಗಳನ್ನು ಮಟ್ಟಹಾಕಲು ಪೊಲೀಸ್ ಇಲಾಖೆ ಇದೀಗ ಮುಂದಾಗಿದೆ.
ಚನ್ನಗಿರಿ ಡಿವೈಎಸ್‌ಪಿ, ಸಿಪಿಐ ತಲೆದಂಡ! - ಮತ ಬ್ಯಾಂಕ್‌ಗಾಗಿ ಅಧಿಕಾರಿಗಳಿಬ್ಬರ ಅಮಾನತು?!- ಸರ್ಕಾರದ ನಡೆಗೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ
ದಾವಣಗೆರೆ : ಮಟ್ಕಾ ಕೇಸ್‌ನ ವಿಚಾರಣೆಗೆ ಸಂಬಂಧಿಸಿದಂತೆ ಆದಿಲ್‌ಗೆ ವಿಚಾರಣೆಗೆ ಕರೆತಂದ ವೇಳೆ ಆತ ಮೃತಪಟ್ಟ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸದೇ, ಠಾಣೆಗೆ ಕರೆ ತಂದ ಆರೋಪದಡಿ ಚನ್ನಗಿರಿ ಪೊಲೀಸ್ ಉಪಾಧೀಕ್ಷಕ ಪ್ರಶಾಂತ ಮನ್ನೋಳಿ ಮತ್ತು ವೃತ್ತ ನಿರೀಕ್ಷಕ ನಿರಂಜನ್ ಅವರನ್ನು ಅಮಾನತುಗೊಳಿಸಲಾಗಿದೆ.
ಎಫ್ಐಆರ್ ದಾಖಲಿಸದೇ ಆದಿಲ್‌ಗೆ ಠಾಣೆಗೆ ಕರೆ ತಂದು, ಆತ ಆಕಸ್ಮಿಕವಾಗಿ ಸಾವನ್ನಪ್ಪಿದ ಹಿನ್ನೆಲೆ, ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಡಿವೈಎಸ್ಪಿ ಮನ್ನೋಳಿ, ಸಿಪಿಐ ನಿರಂಜನ್ ತಲೆದಂಡವಾಗಿದೆ. ಇಬ್ಬರೂ ಅಧಿಕಾರಿಗಳನ್ನು ತನ್ನ ಮತ ಬ್ಯಾಂಕ್ ಉಳಿಸಿಕೊಳ್ಳಲು ರಾಜ್ಯ ಸರ್ಕಾರ ತಲೆದಂಡ ಕೊಟ್ಟಿದೆಯೇ ಎಂಬ ಪ್ರಶ್ನೆ ಅಲ್ಲಿನ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಇಬ್ಬರೂ ಅಧಿಕಾರಿಗಳ ಅವಧಿಯಲ್ಲಿ ಚನ್ನಗಿರಿಯಲ್ಲಿ ಕಾನೂನುಬಾಹಿರ ಚಟುವಟಿಕೆಗಳಿಗೆ, ಅದೆಷ್ಟೋ ಅಕ್ರಮಗಳಿಗೆ ಬ್ರೇಕ್ ಬಿದ್ದಿದೆ. ಇಂತಹ ಪರಿಸ್ಥಿತಿಯಲ್ಲಿ ಆದಿಲ್ ಸಾವಿಗೆ ಏನು ಕಾರಣ ಎಂಬುದು ಮರಣೋತ್ತರ ಪರೀಕ್ಷೆಯ ವರದಿ ಕೈಸೇರದೇ, ಅಮಾನತುಗೊಳಿಸಿದ ಪೊಲೀಸ್ ಇಲಾಖೆ ಹಾಗೂ ರಾಜ್ಯ ಸರ್ಕಾರದ ಕ್ರಮಕ್ಕೆ ಜನರಿಂದ ತೀವ್ರ ಅಪಸ್ವರವೂ ವ್ಯಕ್ತವಾಗುತ್ತಿದೆ.
* ಪೊಲೀಸ್ ಹಲ್ಲೆಯಿಂದಲ್ಲ, ಲೋ ಬಿ.ಪಿ.ಯಿಂದ ಆದಿಲ್ ಸಾವು
- ಪೊಲೀಸ್ ವಶದಲ್ಲಿದ್ದ ವ್ಯಕ್ತಿ ಸಾವು ಕುರಿತು ತಂದೆ ಖಲೀಂವುಲ್ಲಾ ಹೇಳಿಕೆ ಕನ್ನಡಪ್ರಭ ವಾರ್ತೆ, ದಾವಣಗೆರೆ
ಪೊಲೀಸರ ವಶದಲ್ಲಿದ್ದ ತಮ್ಮ ಆದಿಲ್ ಲೋ ಬಿ.ಪಿ.ಯಿಂದಾಗಿ ಸಾವನ್ನಪ್ಪಿದ್ದು, ಯಾರೋ ಕಿಡಿಗೇಡಿಗಳು ನಮ್ಮ ಹೆಸರನ್ನು ಕೆಡಿಸಲು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ, ದಾಂಧಲೆ ಮಾಡಿದ್ದಾರೆ ಎಂದು ಮೃತ ಆದಿಲ್ ತಂದೆ ಖಲೀಂವುಲ್ಲಾ ಹೇಳಿಕೆ ನೀಡುವ ಮೂಲಕ ಪ್ರಕರಣಕ್ಕೆ ತಿರುವು ನೀಡಿದ್ದಾರೆ.
ನಗರದ ಜಿಲ್ಲಾಸ್ಪತ್ರೆ ಶವಾಗಾರದ ಬಳಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಚನ್ನಗಿರಿಯಲ್ಲಿ ಆದಿಲ್ ಬಡಿಗೆ ಕೆಲಸ, ದೇವಸ್ಥಾನಗಳಲ್ಲಿ ಕಟ್ಟಿಗೆಯ ದೇವರ ಮೂರ್ತಿ ಕೆತ್ತುವ ಕೆಲಸ ಮಾಡುತ್ತಿದ್ದ. ದಿನಕ್ಕೆ ₹2 ಸಾವಿರ ದುಡಿಯುತ್ತಿದ್ದ. ಪತ್ನಿ, ಮೂವರು ಮಕ್ಕಳು ಸೇರಿದಂತೆ ತಮ್ಮ ಇಡೀ ಕುಟುಂಬವನ್ನು ಆದಿಲ್ ಸಾಕುತ್ತಿದ್ದ ಎಂದರು.
ಪೊಲೀಸರು ಯಾಕೆ ಕರೆದೊಯ್ದರೋ ಗೊತ್ತಿಲ್ಲ:
ವಿಚಾರಣೆಗೆ ಪೊಲೀಸರು ಕರೆದೊಯ್ದ ವೇಳೆ ಲೋ ಬಿ.ಪಿ. ಸಮಸ್ಯೆಯಿಂದ ಆತ ಸಾವನ್ನಪ್ಪಿದ್ದಾನೆ. ಆದಿಲ್‌ಗೆ ಯಾವುದೇ ರೋಗ ಇರಲಿಲ್ಲ. ಆರೋಗ್ಯವಾಗಿದ್ದ. ಯಾರೋ ಕೆಟ್ಟ ಮನಸ್ಥಿತಿಯವರು ಆದಿಲ್‌ಗೆ ಮೂರ್ಛೆರೋಗ ಇತ್ತೆಂದು ಹೇಳಿದ್ದಾರೆ. ಮಗ ಆದಿಲ್ ಸಾವಿನ ಬಗ್ಗೆ ನಮಗ್ಯಾವುದೇ ರೀತಿಯ ಅನುಮಾನವೂ ಇಲ್ಲ. ಕಾರ್ಪೆಂಟರ್ ಕೆಲಸ ಮಾಡಿಕೊಂಡಿದ್ದ ಆದಿಲ್ ಯಾವುದೇ ಮಟ್ಕಾ ಆಡುತ್ತಿರಲಿಲ್ಲ. ಪೊಲೀಸರು ಕೆಲಸ ಮಾಡುತ್ತಿದ್ದವನಿಗೆ ಯಾಕೆ ಕರೆದೊಯ್ದರೋ ಗೊತ್ತಿಲ್ಲ. ಏನಾಗಿದೆ ಎಂಬ ಬಗ್ಗೆ ತನಿಖೆ ನಡೆಸಿ, ನಮಗೆ ನ್ಯಾಯ ಕೊಡಿಸಲಿ ಎಂದು ಸರ್ಕಾರವನ್ನು ಒತ್ತಾಯಿಸಿದರು.
ಚನ್ನಗಿರಿ ಪೊಲೀಸ್ ಠಾಣೆ ಮುಂದೆ ಸಾಕಷ್ಟು ಜನರ ಸೇರಿದ್ದವು. ನಾವೆಲ್ಲಾ ಕುಟುಂಬ ಸದಸ್ಯರು ದುಃಖದಲ್ಲಿ ಠಾಣೆಯ ಒಳಗಿದ್ದೆವು. ಯಾರೋ ಹೊರಗಿದ್ದ ಕಿಡಿಗೇಡಿಗಳು ಕಲ್ಲು ತೂರಾಡಿ, ವಾಹನಗಳನ್ನು ಜಖಂಗೊಳಿಸಿ, ನಮಗೆ ಕೆಟ್ಟ ಹೆಸರು ತರಲು ಯತ್ನಿಸಿದ್ದಾರೆ. ಕಲ್ಲು ಹೊಡೆದವರು ಯಾರೆಂಬುದು ನನಗೆ ಗೊತ್ತಿಲ್ಲ. ನಾವು ನ್ಯಾಯ ಕೊಡಿಸಿ ಎಂಬುದಾಗಿ ದೂರು ನೀಡಿದ್ದೇವೆ. ಹಮಾಲಿ ಕೆಲಸ ಮಾಡಿ, ಕುಟುಂಬ ಸಾಕಿದ್ದೇನೆ. ಈಗ ನನಗೆ ವಯಸ್ಸಾಗಿದೆ. ಈಗ ಹಮಾಲಿ ಕೆಲಸ ಮಾಡಲು ಸಾಧ್ಯವಿಲ್ಲ. ಮೃತನ ಹೆಂಡತಿ, ಮಕ್ಕಳಿಗೆ ಗೌರವದ ಜೀವನ ನಡೆಸಲು ಸರ್ಕಾರ ನಮಗೆ ಸೂಕ್ತ ಪರಿಹಾರ ನೀಡಬೇಕು ಎಂದು ಖಲೀಂವುಲ್ಲಾ ಮನವಿ ಮಾಡಿದರು.
ದಾವಣಗೆರೆಯಲ್ಲಿ ಜಡ್ಜ್ ಸಮ್ಮುಖ ಮರಣೋತ್ತರ ಪರೀಕ್ಷೆ
ಕನ್ನಡಪ್ರಭ ವಾರ್ತೆ, ದಾವಣಗೆರೆ ಮಟ್ಕಾ ಪ್ರಕರಣದ ಪೊಲೀಸರು ವಿಚಾರಣೆಗೆ ತಂದಿದ್ದ ವೇಳೆ ಸಾವನ್ನಪ್ಪಿದ್ದ ಆದಿಲ್ ಪ್ರಕರಣ ಗಂಭೀರವಾಗಿದ್ದರಿಂದ ದಾವಣಗೆರೆ ಜಿಲ್ಲಾಸ್ಪತ್ರೆಗೆ ನ್ಯಾಯಾಧೀಶರ ಸಮ್ಮುಖದಲ್ಲಿ ಶನಿವಾರ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಚನ್ನಗಿರಿಯಿಂದ ಮೃತ ಆದಿಲ್ ಪಾರ್ಥಿವ ಶರೀರವನ್ನು ದಾವಣಗೆರೆ ಜಿಲ್ಲಾಸ್ಪತ್ರೆ ಶವಾಗಾರದಲ್ಲಿ ನ್ಯಾಯಾಧೀಶರ ಸಮಕ್ಷಮ ಮರಣೋತ್ತರ ಪರೀಕ್ಷೆ ಮಾಡಿಸಲಾಯಿತು. ಮೃತನ ಕುಟುಂಬಸ್ಥರು ಶವಾಗಾರದ ಎದುರು ನೆರೆದಿದ್ದರು.
ಮರಣೋತ್ತರ ಪರೀಕ್ಷೆ ನಂತರ ಶವವನ್ನು ಪೊಲೀಸ್ ಬಂದೋಬಸ್ತ್‌ನಲ್ಲಿ ಚನ್ನಗಿರಿಗೆ ಕಳಿಸಲಾಯಿತು. ಅನಂತರ ಚನ್ನಗಿರಿ ಪಟ್ಟಣದ ಈದ್ಗಾ ಮೈದಾನದ ಖಬರಸ್ತಾನದಲ್ಲಿ ಮೃತ ಆದಿಲ್ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು, ಸಂಬಂಧಿಗಳು, ಸ್ನೇಹಿತರ ಸಮಕ್ಷಮ ನೆರವೇರಿತು.