ಚನ್ನಕಲ್ ಕಾವಲ್ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ

KannadaprabhaNewsNetwork | Published : Apr 26, 2024 12:59 AM

ಸಾರಾಂಶ

ಪೂರ್ವಜರಿಂದಲೂ ನಾವು ಈ ದೇವಾಲಯದಲ್ಲಿ ಪೂಜೆ ಮಾಡಿಕೊಂಡು ಬಂದಿದ್ದೇವೆ, ಕಳೆದ 33 ವರ್ಷಗಳಿಂದಲೂ ಹಬ್ಬ ಆಚರಿಸಿ, ಅಕ್ಕಪಕ್ಕದ ಗ್ರಾಮಗಳಿಗೆ ಅನ್ನದಾನ ಮಾಡುತ್ತಿದ್ದೇವೆ, ಮೇ 2 ಮತ್ತು 3 ರಂದು 33ನೇ ವರ್ಷದ ವಾರ್ಷಿಕವನ್ನು ಆಚರಿಸಲು ಸಕಲ ಸಿದ್ಧತೆ ನಡೆಸಿರುವ ಸಂದರ್ಭದಲ್ಲಿ ಇಲ್ಲಿನ ಪ್ರಭಾವಿ ವ್ಯಕ್ತಿಯೊಬ್ಬರು ಈ ಒಂದು ವರ್ಷ ಹಬ್ಬ ಆಚರಣೆ ಮಾಡಿಕೊಳ್ಳಿ ಇನ್ನೂ ಮುಂದಿನ ದಿನಗಳಲ್ಲಿ ಹಬ್ಬ ಆಚರಿಸಬಾರದು ಎಂದು ನಮಗೆ ತಾಕೀತು ಮಾಡಿದ್ದಾರೆ.

- ಮುತ್ತು ಮಾರಿಯಮ್ಮ ದೇವಸ್ಥಾನದ ದಾರಿಯ ಸಮಸ್ಯೆ ಪರಿಹಾರಕ್ಕೆ ಒತ್ತಾಯ

ಕನ್ನಡಪ್ರಭ ವಾರ್ತೆ ಬೆಟ್ಟದಪುರ

ಪಿರಿಯಾಪಟ್ಟಣ ತಾಲೂಕಿನ ಚನ್ನಕಲ್ ಕಾವಲ್ ಗ್ರಾಮದ ಮುತ್ತು ಮಾರಿಯಮ್ಮ ದೇವಾಲಯಕ್ಕೆ ಸಾರ್ವಜನಿಕರು ಬರಲು ರಸ್ತೆಯ ಸಮಸ್ಯೆ ಇರುವುದರಿಂದ ಸಮಸ್ಯೆ ಬಗ್ಗೆ ಹರಿಸುವವರೆಗೂ ನಾವು ಮತದಾನ ಮಾಡುವುದಿಲ್ಲ ಎಂದು ದೇವಾಲಯದ ಮುಂಭಾಗ ಆಧಾರ್ ಕಾರ್ಡ್ ಹಾಗೂ ವೋಟರ್ ಐಡಿಯನ್ನು ಇಟ್ಟು ಗುರುವಾರ ಗ್ರಾಮಸ್ಥರು ಪ್ರತಿಭಟಿಸಿದರು.

ಮುಖಂಡ ಸಿ.ಆರ್. ಪ್ರಕಾಶ್ ಮಾತನಾಡಿ, ಪೂರ್ವಜರಿಂದಲೂ ನಾವು ಈ ದೇವಾಲಯದಲ್ಲಿ ಪೂಜೆ ಮಾಡಿಕೊಂಡು ಬಂದಿದ್ದೇವೆ, ಕಳೆದ 33 ವರ್ಷಗಳಿಂದಲೂ ಹಬ್ಬ ಆಚರಿಸಿ, ಅಕ್ಕಪಕ್ಕದ ಗ್ರಾಮಗಳಿಗೆ ಅನ್ನದಾನ ಮಾಡುತ್ತಿದ್ದೇವೆ, ಮೇ 2 ಮತ್ತು 3 ರಂದು 33ನೇ ವರ್ಷದ ವಾರ್ಷಿಕವನ್ನು ಆಚರಿಸಲು ಸಕಲ ಸಿದ್ಧತೆ ನಡೆಸಿರುವ ಸಂದರ್ಭದಲ್ಲಿ ಇಲ್ಲಿನ ಪ್ರಭಾವಿ ವ್ಯಕ್ತಿಯೊಬ್ಬರು ಈ ಒಂದು ವರ್ಷ ಹಬ್ಬ ಆಚರಣೆ ಮಾಡಿಕೊಳ್ಳಿ ಇನ್ನೂ ಮುಂದಿನ ದಿನಗಳಲ್ಲಿ ಹಬ್ಬ ಆಚರಿಸಬಾರದು ಎಂದು ನಮಗೆ ತಾಕೀತು ಮಾಡಿದ್ದಾರೆ.

ಈ ದೇವಾಲಯಕ್ಕೆ ನಮಗೆ ದಾರಿಯ ಸಮಸ್ಯೆ ಇದ್ದ ಕಾರಣ ಸರ್ಕಾರ ಮಟ್ಟದಲ್ಲಿ ಅರ್ಜಿ ಸಲ್ಲಿಸಿ ದೇವಾಲಯಕ್ಕೆ ತಹಸೀಲ್ದಾರ್ ಅವರೆ ಬಂದು ಅಳತೆ ಮಾಡಿ ಓಡಾಡಲು ಅನುವು ಮಾಡಿಕೊಟ್ಟಿದ್ದರು, ಆದರೆ ಇಲ್ಲಿನ ಪ್ರಭಾವಿ ವ್ಯಕ್ತಿ ಅಧಿಕಾರಿಗಳಿಗೆ, ಸರ್ಕಾರಕ್ಕೆ ಮಾನ್ಯತೆ ನೀಡದೆ, ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ, ಹಬ್ಬದ ವಿಚಾರವಾಗಿ ಈಗಾಗಲೇ ಕರಪತ್ರವನ್ನು ಎಲ್ಲ ಕಡೆ ಹಂಚಲಾಗಿದೆ, ಪ್ರತಿ ಬಾರಿಯೂ ಇದೇ ರೀತಿ ಸಮಸ್ಯೆಯಾದರೆ ನಮಗೆ ಅನ್ಯಾಯವಾಗುತ್ತದೆ, ಆದ್ದರಿಂದ ಈ ಬಾರಿ ನಮಗೆ ಸೂಕ್ತ ನ್ಯಾಯ ಒದಗಿಸಬೇಕು, ಶುಕ್ರವಾರ ನಡೆಯುವ ಮತದಾನದಂದು 300 ಕುಟುಂಬದವರು ಮತದಾನವನ್ನು ಬಹಿಷ್ಕರಿಸಿ ದೇವಾಲಯದ ಮುಂಭಾಗ ಕುಳಿತುಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

ಗ್ರಾಮಸ್ಥೆ ಕೃಷ್ಣವೇಣಿ ಮಾತನಾಡಿ, ಸರ್ಕಾರದಿಂದಲೇ ನಮಗೆ ರಸ್ತೆ ಮಾಡಿ ಕೊಟ್ಟಿದ್ದರು, ರಾಜಕೀಯವದವರ ಪ್ರಭಾವದಿಂದ ಓಡಾಡಲು ಸಮಸ್ಯೆ ಉಂಟಾಗಿದೆ, ಈ ಸಮಸ್ಯೆ ಬಗೆಹರಿಯದಿದ್ದರೆ, 300 ಕುಟುಂಬದ ಸದಸ್ಯರು ಜಿಲ್ಲಾಧಿಕಾರಿಗಳಿಗೆ ನಮ್ಮ ಆಧಾರ್ ಕಾರ್ಡ್ ಹಾಗೂ ವೋಟರ್ ಐಡಿ ಅನ್ನು ತಲುಪಿಸಿ ಇನ್ನು ಮುಂದೆ ಅಲೆಮಾರಿ ಜೀವನವನ್ನು ಮಾಡುತ್ತೇವೆ ಎಂದು ಕಿಡಿಕಾರಿದರು.

ಗ್ರಾಪಂ ಸದಸ್ಯೆ ಲೀಲಾವತಿ ವೆಂಕಟೇಶ್ ಮಾತನಾಡಿ, ದೇವಾಲಯದ ಸುತ್ತ ಪ್ರಬಲರು ಒತ್ತುವರಿ ಮಾಡಿಕೊಂಡಿದ್ದಾರೆ, ಮಾಜಿ ಶಾಸಕ ಕೆ. ಮಹದೇವ್ ಅವರು ದೇವಸ್ಥಾನ ಅಭಿವೃದ್ಧಿಗೆಂದು 4 ಲಕ್ಷ ರು. ಗಳನ್ನು ನೀಡಿದ್ದಾರೆ, ಆದರೆ ಸಮಸ್ಯೆಯಿಂದ ಅಭಿವೃದ್ಧಿ ಮಾಡಲು ಆಗದೆ ಹಾಗೆ ಉಳಿದಿದೆ, ಇನ್ನು ಮುಂದೆ ದಾರಿಯಲ್ಲಿ ಓಡಾಡಲು ಸಮಸ್ಯೆ ಉಂಟಾಗದಂತೆ ಕ್ರಮವಹಿಸಬೇಕೆಂದು ಅಧಿಕಾರಿಗಳಲ್ಲಿ ಮನವಿ ಮಾಡಿದರು.

ತಹಸೀಲ್ದಾರ್ ಸುರೇಂದ್ರ ಮೂರ್ತಿ ಮಾತನಾಡಿ, ನಿಮ್ಮ ಮೂಲಭೂತ ಹಕ್ಕನ್ನು ಮೊದಲು ಚಲಾಯಿಸಿ, ನಿಮ್ಮ ಬೇಡಿಕೆಯನ್ನು ಅರ್ಜಿ ಮುಖಾಂತರ ನಮಗೆ ಸಲ್ಲಿಸಿದರೆ ನಾವು ಪರಿಶೀಲಿಸಿ ಕಾನೂನಾತ್ಮಕವಾಗಿ ಪರಿಹರಿಸುವ ಕ್ರಮ ಕೈಗೊಳ್ಳುತ್ತೇವೆ, ಎಲ್ಲರೂ ತಪ್ಪದೆ ಮತದಾನ ಮಾಡಿ ಎಂದು ತಿಳಿಸಿದರು.

ಮುಖಂಡ ಸುರೇಶ್, ಮಣಿ, ಷಣ್ಮುಗ, ಕಾವೇರಿ, ಮಂಜುನಾಥ್, ರಾಮಚಂದ್ರ, ಗಂಗೂಲಿ, ಕಾಮಾಕ್ಷಿ, ಲಕ್ಷ್ಮಿ, ಚೆಲುವಿ, ಪಾಳಿಯಮ್ಮ, ರೂಪಾ, ವೆಂಕಟೇಶ್, ಶಾಂತಮ್ಮ, ಅಮಿತಾ ಭಾಗವಹಿಸಿದ್ದರು.

Share this article