ಚನ್ನಪಟ್ಟಣ ಉಪಚುನಾವಣೆ: ಮದ್ದೂರಿನಲ್ಲೂ ಬೆಟ್ಟಿಂಗ್ ಭರಾಟೆ ಜೋರು

KannadaprabhaNewsNetwork | Published : Nov 16, 2024 12:33 AM

ಸಾರಾಂಶ

ಚನ್ನಪಟ್ಟಣ ಉಪ ಚುನಾವಣೆ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಹೇಳಿಕೆಯಿಂದ ಕೈ ಕಾರ್ಯಕರ್ತರಲ್ಲಿ ಸೋಲಿನ ಆತಂಕ ಶುರುವಾಗಿದೆ. ಜಮೀರ್ ಅವರನ್ನು ಚನ್ನಪಟ್ಟಣ ಚುನಾವಣಾ ಪ್ರಚಾರಕ್ಕೆ ಕಳುಹಿಸಬಾರದಿತ್ತು ಎಂಬ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆಗಳು ಶುರುವಾಗಿವೆ.

ಎಚ್.ಜಿ.ರವಿಕುಮಾರ್

ಕನ್ನಡಪ್ರಭ ವಾರ್ತೆ ಮದ್ದೂರು

ಚನ್ನಪಟ್ಟಣ ಉಪ ಚುನಾವಣೆ ಹವಾ ಪಕ್ಕದ ಮದ್ದೂರಿಗೂ ತಟ್ಟಿದೆ. ಚುನಾವಣೆಯ ಸೋಲು- ಗೆಲುವಿನ ಲೆಕ್ಕಾಚಾರ ತಾಲೂಕಿನಲ್ಲೂ ಬಿರುಸಾಗಿ ನಡೆದಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಪರ ಬೆಟ್ಟಿಂಗ್ ಭರಾಟೆಯೂ ಜೋರಾಗಿದ್ದು, ಇಬ್ಬರ ಪರವಾಗಿಯೂ ಲಕ್ಷಾಂತರ ರು. ಹಣವನ್ನು ಪಣಕ್ಕಿಡುತ್ತಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಹಾಗೂ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವಿನ ಕುರಿತಂತೆ ಎರಡೂ ಪಕ್ಷದವರು ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಣೆ ಮಾಡಿ ಗೆಲುವಿನ ಲೆಕ್ಕಾಚಾರ ಹಾಕಿದ್ದಾರೆ. ಆ ಮತ ಲೆಕ್ಕಾಚಾರದ ಮೇಲೆ ಬೆಟ್ಟಿಂಗ್ನಲ್ಲಿ ತೊಡಗಿದ್ದಾರೆ.

೫೦ ಸಾವಿರ ರು.ನಿಂದ ೫ ಲಕ್ಷದವರೆಗೆ ಬೆಟ್ಟಿಂಗ್:

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ಗೆಲುವಿನ ವಿಚಾರವಾಗಿ ೫೦ ಸಾವಿರ ರು.ನಿಂದ ೫ ಲಕ್ಷ ರು.ವರೆಗೆ ಬೆಟ್ಟಿಂಗ್ ನಡೆಯುತ್ತಿರುವುದಾಗಿ ತಿಳಿದುಬಂದಿದೆ. ಯೋಗೇಶ್ವರ್ ಪರ ಚುನಾವಣಾ ಕೆಲಸ ಮಾಡಿರುವವರೂ ಅವರ ಗೆಲುವಿನ ಬಗ್ಗೆಯೂ ಖಚಿತತೆಯನ್ನಿಟ್ಟುಕೊಂಡು ಬೆಟ್ಟಿಂಗ್‌ಗೆ ಮುಂದಾಗಿದ್ದಾರೆ. ಆದರೆ, ಬೆಟ್ಟಿಂಗ್ ಕಣದಲ್ಲಿ ನಿಖಿಲ್ ಗೆಲುವಿನ ಬಗ್ಗೆ ಹೆಚ್ಚು ಭರವಸೆಯನ್ನಿಟ್ಟುಕೊಂಡು ಹಣ ಹೂಡುತ್ತಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್‌ಗೆ ಚುನಾವಣಾ ಪೂರ್ವದಲ್ಲಿದ್ದ ವಾತಾವರಣಕ್ಕೂ ಚುನಾವಣೆ ವೇಳೆಗೆ ಸೃಷ್ಟಿಯಾದ ವಾತಾವರಣಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ದೇವೇಗೌಡರ ಆಗಮನ ನಿಖಿಲ್ ಪರವಾಗಿ ಹೆಚ್ಚಿನ ಶಕ್ತಿ ತಂದುಕೊಟ್ಟರೆ ಜಮೀರ್ ಅಹಮದ್ ಮಾತುಗಳು ನಿಖಿಲ್‌ಗೆ ವರದಾನವಾಗಿರುವುದಾಗಿ ಬೆಟ್ಟಿಂಗ್‌ನಲ್ಲಿ ತೊಡಗಿಸಿಕೊಂಡಿರುವವರ ಹೇಳಿಕೆಯಾಗಿದೆ.

ಆದರೆ, ಸಿ.ಪಿ.ಯೋಗೇಶ್ವರ್ ಬಗ್ಗೆಯೂ ಜನರಲ್ಲಿ ಸೋಲಿನ ಅನುಕಂಪವಿದೆ. ಜೆಡಿಎಸ್‌ನವರ ಬಗ್ಗೆ ಮಂಡ್ಯ ಜನರಿಗಿರುವ ಭಾವನೆಯೇ ಬೇರೆ, ಚನ್ನಪಟ್ಟಣದ ಜನರಿಗಿರುವ ಭಾವನೆಯೇ ಬೇರೆ. ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಅಲ್ಲಿನವರು ಓಟು ಹಾಕುತ್ತಾರೆ. ಸಿ.ಪಿ.ಯೋಗೇಶ್ವರ್ ತಳಮಟ್ಟದಿಂದ ಕಾರ್ಯಕರ್ತರನ್ನು ಜೊತೆಗಿಟ್ಟುಕೊಂಡು ಕೆಲಸ ಮಾಡಿದ್ದಾರೆ. ಬಿಜೆಪಿಯವರೂ ಯೋಗೇಶ್ವರ್ ಪರವಾಗಿಯೇ ಚುನಾವಣೆಯಲ್ಲಿ ಕೆಲಸ ಮಾಡಿರುವುದರಿಂದ ಯೋಗೇಶ್ವರ್ ಗೆಲುವು ಶತಸ್ಸಿದ್ಧ ಎನ್ನುವುದು ಕೈ ಪಾಳಯದವರ ನಂಬಿಕೆಯಾಗಿದೆ.

ಮಾಜಿ ಸಂಸದ ಡಿ.ಕೆ.ಸುರೇಶ್ ಉಪ ಚುನಾವಣೆಯಲ್ಲಿ ಯೋಗೇಶ್ವರ್ ಗೆಲುವಿಗಾಗಿ ಭಾರೀ ಶ್ರಮವಹಿಸಿದ್ದಾರೆ. ಚುನಾವಣೆಯ ಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು ಕೈ ಕಾರ್ಯಕರ್ತರನ್ನೆಲ್ಲಾ ಒಗ್ಗೂಡಿಸಿಕೊಂಡು ಚುನಾವಣೆ ನಡೆಸಿದ್ದಾರೆ. ಇದರೊಂದಿಗೆ ಯೋಗೇಶ್ವರ್ ವರ್ಚಸ್ಸು ಕ್ಷೇತ್ರದಲ್ಲಿರುವುದರಿಂದ ಸಿ.ಪಿ.ಯೋಗೇಶ್ವರ್‌ಗೆ ಜಯ ದೊರಕಲಿದೆ ಎಂಬ ವಿಶ್ವಾಸ ಮದ್ದೂರು ಭಾಗದ ಅಭಿಮಾನಿಗಳಲ್ಲಿದೆ.

ಯೋಗೇಶ್ವರ್ ಹೇಳಿಕೆ: ಕೈ ಕಾರ್ಯಕರ್ತರಲ್ಲಿ ಆತಂಕ:

ಚನ್ನಪಟ್ಟಣ ಉಪ ಚುನಾವಣೆ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಹೇಳಿಕೆಯಿಂದ ಕೈ ಕಾರ್ಯಕರ್ತರಲ್ಲಿ ಸೋಲಿನ ಆತಂಕ ಶುರುವಾಗಿದೆ. ಜಮೀರ್ ಅವರನ್ನು ಚನ್ನಪಟ್ಟಣ ಚುನಾವಣಾ ಪ್ರಚಾರಕ್ಕೆ ಕಳುಹಿಸಬಾರದಿತ್ತು ಎಂಬ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆಗಳು ಶುರುವಾಗಿವೆ.

ದೇವೇಗೌಡರು ಮತ್ತು ಕುಮಾರಸ್ವಾಮಿ ದೈತ್ಯಶಕ್ತಿ ಇದ್ದಂತೆ. ಜಮೀರ್ ಹೇಳಿಕೆಯಿಂದ ನಷ್ಟವಾಗಿ ನನಗೆ ಸೋಲು ಕೂಡ ಆಗಬಹುದು ಎಂದು ಯೋಗೇಶ್ವರ್ ಬೇಸರ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲೇ ಜಮೀರ್ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಜಮೀರ್ ಮತ್ತು ಎಚ್‌ಡಿಕೆ ಹಳೇ ದೋಸ್ತಿ ಪೋಟೋ ಹಾಕಿ ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ.

ನಿಖಿಲ್ ನನ್ನ ಮಗನಿದ್ದಂತೆ ಎಂದಾಗಲೇ ನಾವು ಅರ್ಥ ಮಾಡಿಕೊಳ್ಳಬೇಕಿತ್ತು. ಜಮೀರ್‌ನನ್ನು ಪ್ರಚಾರಕ್ಕೇ ಕಳಿಸಿದ್ದೇ ತಪ್ಪಾಯಿತು ಎಂದು ನಾಗಮಂಗಲ ಯುವ ಕಾಂಗ್ರೆಸ್ ಟೀಮ್ ಜಮೀರ್ ವಿರುದ್ಧ ಸಾಮಾಜಿಕ ಜಾಲ ತಾಣದಲ್ಲಿ ಕಿಡಿಕಾರಿದೆ.

Share this article