ಚನ್ನಪಟ್ಟಣ: ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ ೧ ರು. ಪ್ರೋತ್ಸಾಹ ಧನ ನೀಡುವ ಬಮೂಲ್ ನಿರ್ಧಾರದಿಂದ ಚನ್ನಪಟ್ಟಣ ತಾಲೂಕಿನ ೧೭,೮೦೫ ರೈತರಿಗೆ ೧೦.೬೩ ಕೋಟಿ ರು. ಪ್ರೋತ್ಸಾಹ ಧನ ಸಿಗಲಿದೆ ಎಂದು ಬಮೂಲ್ ನಿರ್ದೇಶಕ ಎಸ್.ಲಿಂಗೇಶ್‌ಕುಮಾರ್ ಮಾಹಿತಿ ನೀಡಿದ್ದಾರೆ
ಚನ್ನಪಟ್ಟಣ: ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ ೧ ರು. ಪ್ರೋತ್ಸಾಹ ಧನ ನೀಡುವ ಬಮೂಲ್ ನಿರ್ಧಾರದಿಂದ ಚನ್ನಪಟ್ಟಣ ತಾಲೂಕಿನ ೧೭,೮೦೫ ರೈತರಿಗೆ ೧೦.೬೩ ಕೋಟಿ ರು. ಪ್ರೋತ್ಸಾಹ ಧನ ಸಿಗಲಿದೆ ಎಂದು ಬಮೂಲ್ ನಿರ್ದೇಶಕ ಎಸ್.ಲಿಂಗೇಶ್‌ಕುಮಾರ್ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ನಮ್ಮ ತಾಲೂಕಿನ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನದಲ್ಲಿ ಸಿಂಹಪಾಲು ದೊರೆತಿದ್ದು, ಇದಕ್ಕೆ ಕಾರಣ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಅವರಿಗೆ ಹಾಗೂ ಎಲ್ಲಾ ನಿರ್ದೇಶಕರು ಮತ್ತು ಬಮೂಲ್ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
೧೦.೬೩ ಕೋಟಿ ರು. ಪ್ರೋತ್ಸಾಹ ಧನ: ತಾಲೂಕಿನ ೧೭೩ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ೧೭,೮೦೫ ರೈತರು ೨೦೨೫-೨೬ನೇ ಸಾಲಿನಲ್ಲಿ ೧೦,೬೧,೧೫,೦೩೫ ಲೀಟರ್ ಹಾಲನ್ನು ಒಕ್ಕೂಟಕ್ಕೆ ಪೂರೈಸಿದ್ದಾರೆ. ನಿರಂತರ ನಷ್ಟದಲ್ಲಿದ್ದ ಬೆಂಗಳೂರು ಹಾಲು ಒಕ್ಕೂಟ ಡಿ.ಕೆ.ಸುರೇಶ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಲಾಭದ ಹಾದಿಯಲ್ಲಿ ಸಾಗುತ್ತಿದೆ ಎಂದು ತಿಳಿಸಿದ್ದಾರೆ.
ಹಾರೋಕೊಪ್ಪಕ್ಕೆ ಹೆಚ್ಚು ಹಣ:
ತಾಲೂಕಿನ ಹಾರೋಕೊಪ್ಪ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ೨೬.೬೬ ಲಕ್ಷ ರು., ಸೋಗಾಲ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ೨೬.೪೬ ಲಕ್ಷ ರು., ಕೃಷ್ಣಾಪುರ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ೨೩.೭೯ ಲಕ್ಷ ರು. ಪ್ರೋತ್ಸಾಹ ಧನ ಸಿಗುತ್ತಿದೆ. ಪ್ರತಿ ಹಾಲು ಉತ್ಪಾದಕರ ಸಹಕಾರ ಸಂಘದ ರೈತರಿಗೂ ೨೦೨೫ರ ಏ.೧ರಿಂದ ೨೦೨೬ರ ಮಾ.೩೧ರವರೆಗೆ ಪೂರೈಕೆ ಮಾಡಿರುವ ಹಾಲಿನ ಪ್ರಮಾಣಕ್ಕೆ ಅನುಗುಣವಾಗಿ ಪ್ರತಿ ಲೀಟರ್‌ಗೆ ೧ ರು. ನೀಡಲಾಗುವುದು ಎಂದು ತಿಳಿಸಿದ್ದಾರೆ.
ತಾಲೂಕಿನ ಕೂಡ್ಲೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಜಯ್ ಕುಮಾರ್ ಕಳೆದ ಸಾಲಿನಲ್ಲಿ ೧,೦೨,೫೨೫ ಲೀಟ್ ಹಾಲನ್ನು ಸಂಘಕ್ಕೆ ಪೂರೈಸಿದ್ದಾರೆ. ಇವರಿಗೆ ೧.೦೨ ಲಕ್ಷ ರು. ಪ್ರೋತ್ಸಾಹ ಧನ ಸಿಗಲಿದೆ. ಅದೇ ರೀತಿ ಸಂಕಲಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಎಸ್.ಬಿ.ರಾಜು ೧,೦೧,೬೬೭.೩೦ ಲೀಟರ್ ಹಾಲು ಪೂರೈಸಿದ್ದು ಇವರಿಗೆ ೧.೦೧ ಲಕ್ಷ ರು. ಪ್ರೋತ್ಸಾಧನ ಸಿಗಲಿದೆ. ಇವರಿಬ್ಬರು ತಾಲೂಕಿನಲ್ಲಿ ಅತಿಹೆಚ್ಚು ಹಾಲು ಪೂರೈಸಿರುವ ರೈತರು ಎಂದು ವಿವರಿಸಿದ್ದಾರೆ.
ಸಂಘದ ನೌಕರರಿಗೂ ನೆರವು:
ರೈತರ ಜೊತೆಗೆ ಒಕ್ಕೂಟದಿಂದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಕಾರ್ಯನಿರ್ವಹಿಸುತ್ತಿರುವ ನೌಕರರಿಗೂ ಪ್ರೋತ್ಸಾಹಧನ ನೀಡಲಾಗುತ್ತಿದ್ದು, ತಾಲೂಕಿನ ೧೭೩ ಡೇರಿಗಳಿಗೂ ತಲಾ ೧೫ ಸಾವಿರ ರು.ಗಳಂತೆ ನೀಡಲಾಗುತ್ತಿದೆ. ಜತೆಗೆ ಹೊರಗುತ್ತಿಗೆ ಮೇಲೆ ಕೆಲಸ ನಿರ್ವಹಿಸುತ್ತಿರುವ ಬಮೂಲ್ ನೌಕರರಿಗೆ ೧೨ ಸಾವಿರ ರು. ಮೌಲ್ಯದ ಗಿಫ್ಟ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.
೫ ಲಕ್ಷ ಲೀಟರ್ ಹಾಲು ಉತ್ಪಾದನೆ ಗುರಿ:
ಚನ್ನಪಟ್ಟಣ ರೈತರು ಹಾಲು ಉತ್ಪಾದನೆಯಲ್ಲಿ ಒಕ್ಕೂಟದ ವ್ಯಾಪ್ತಿಯಲ್ಲೇ ಮುಂಚೂಣಿಯಲ್ಲಿ ಶಾಸಕ ಸಿ.ಪಿ.ಯೋಗೇಶ್ವರ್ ಕಾರಣ. ತಾಲೂಕಿನಲ್ಲಿ ಪ್ರಸ್ತುತ ೩.೨೦ ಲಕ್ಷ ಲೀಟರ್ ಹಾಲು ಪ್ರತಿದಿನ ಉತ್ಪಾದನೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ೫ ಲಕ್ಷ ಲೀಟರ್ ಹಾಲು ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.