ಕನ್ನಡಪ್ರಭ ವಾರ್ತೆ ಬೀದರ್
ವಿಶೇಷ ಪೂಜೆ, ಭವ್ಯ ಪಲ್ಲಕ್ಕಿ ಉತ್ಸವ, ದಹಿ ಹಂಡಿ, ಹರಿನಾಮ ಸಂಕಿರ್ತನೆ, ವಿವಿಧ ಭಜನಾ ಮಂಡಳಿಗಳ ಭಜನೆ, ಯುವಕ-ಯುವತಿಯರ ಫುಗಡಿ ನೃತ್ಯ ಹಾಗೂ ಮಹಾಪ್ರಸಾದ ಕಾರ್ಯಕ್ರಗಳಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಪಾಂಡುರಂಗನ ದರ್ಶನ ಪಡೆದರು.
ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜೆ, ಪಂಚಾಮೃತ ಅಭಿಷೇಕ, ತುಳಸಿ ಅರ್ಚನೆ, ವೇದಮಂತ್ರೋಚ್ಚಾರಣೆ, ಅಲಂಕಾರ ಸೇವೆ ಹಾಗೂ ಮಹಾ ಮಂಗಳಾರತಿ ನೆರವೇರಿತು. ಮಹಿಳೆಯರು ಸಾಂಪ್ರದಾಯಿಕ ಉಡುಪಿನಲ್ಲಿ ಹಾಗೂ ಕುಟುಂಬ ಸಮೇತ ಆಗಮಿಸಿದ ಭಕ್ತರು ಭಕ್ತಿಭಾವದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ಮಧ್ಯಾಹ್ನ ಪಾಂಡುರಂಗನ ಉತ್ಸವ ಮೂರ್ತಿಯನ್ನು ಸುಂದರ ಹೂವಿನ ಅಲಂಕಾರದಿಂದ ಸಿಂಗರಿಸಲಾದ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಭವ್ಯ ಮೆರವಣಿಗೆಗೆ ಚಾಲನೆ ನೀಡಲಾಯಿತು. ದೇವಸ್ಥಾನದಿಂದ ಆರಂಭವಾದ ಪಲ್ಲಕ್ಕಿ ಉತ್ಸವ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಭಕ್ತರ ಗಮನ ಸೆಳೆಯಿತು.
ಮೆರವಣಿಗೆಯಲ್ಲಿ ವಿವಿಧ ಭಜನಾ ಮಂಡಳಿಗಳು ಪಾಲ್ಗೊಂಡು ವಿವಿಧ ವಾದ್ಯಗಳ ನಾದಕ್ಕೆ ಭಕ್ತರು ನಾಮಸ್ಮರಣೆ ಮಾಡುತ್ತಾ ಹೆಜ್ಜೆ ಹಾಕಿದರು. ಮೆರವಣಿಗೆಯ ನೇತೃತ್ವ ರಾಮಲು ಗಾದಗಿ, ರಾಜೇಂದ್ರಸಿಂಗ್ ಪವಾರ, ಬಸವರಾಜ ಶೀಲವಂತ ಚಿಟಗುಪ್ಪಾ, ಜಗನ್ನಾಥರಾವ ಮಾನಕೇರಿ ಹಾಗೂ ರಾಜಕುಮಾರ ವಿಶ್ವಕರ್ಮ ವಹಿಸಿದ್ದರು.
ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷ ಡಿ.ವಿ.ಸಿಂಧೋಲ, ಅಶೋಕ ರೆಜಂತಲ್, ಶ್ರೀನಿವಾಸ ಪೋಲಾ, ದಿಗಂಬರ್ ಪೋಲಾ, ಸುನೀಲ ವಂಗೆಪಲ್ಲಿ, ಆರ್ಯ ವೈಶ್ಯ ಸಂಘದ ಪದಾಧಿಕಾರಿಗಳು, ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು, ವಿವಿಧ ಭಜನಾ ಮಂಡಳಿಗಳ ಸದಸ್ಯರು ಹಾಗೂ ಸಾವಿರಾರು ಭಕ್ತರು ಉಪಸ್ಥಿತರಿ ದ್ದರು ಎಂದು ಪಾಂಡುರಂಗ ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯದರ್ಶಿ ಚಂದ್ರಶೇಖರ ಗಾದಾ ತಿಳಿಸಿದ್ದಾರೆ.