ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ, ಅಪಪ್ರಚಾರ ದೂರವಾಗಿ ಶ್ರೀ ಮಂಜುನಾಥನ ಭಕ್ತರಿಗೆ ಶಾಂತಿ- ನೆಮ್ಮದಿ ಲಭಿಸಲಿ, ಭಕ್ತಿ ಹೆಚ್ಚಾಗಲಿ ಎನ್ನುವ ಸಂಕಲ್ಪದೊಂದಿಗೆ ವಿಶ್ವ ಹಿಂದೂ ಪರಿಷತ್ ವತಿಯಿಂದ ಕದ್ರಿ ಮಂಜುನಾಥ ಕ್ಷೇತ್ರದಲ್ಲಿ ಸೋಮವಾರ ‘ಓಂ ನಮಃ ಶಿವಾಯ’ ಶಿವ ಪಂಚಾಕ್ಷರಿ ಮಂತ್ರ ಪಠಣ ನಡೆಯಿತು.ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಪ್ರಾರ್ಥನೆ ನೆರವೇರಿಸಿದ ಬಳಿಕ ಕ್ಷೇತ್ರದ ಹೊರ ಅವರದಲ್ಲಿ 108 ಬಾರಿ ಶಿವ ಪಂಚಾಕ್ಷರಿ ಪಠಣ ಮಾಡಲಾಯಿತು.
ಈ ಸಂದರ್ಭ ಮಾತನಾಡಿದ ವಿಶ್ವ ಹಿಂದು ಪರಿಷತ್ ಪ್ರಾಂತ ಕಾರ್ಯಕಾರಿಣಿ ಸದಸ್ಯ ಡಾ.ಎಂ.ಬಿ. ಪುರಾಣಿಕ್, ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಬೆರಳೆಣಿಕೆ ಮಂದಿಯಿಂದ ಆರಂಭವಾಗಿ ಅನೇಕರು ಈ ಅಪಪ್ರಚಾರದಲ್ಲಿ ಸೇರಿಕೊಂಡಿದ್ದಾರೆ. ಕೋಟ್ಯಂತರ ಹಿಂದೂಗಳ ಶ್ರದ್ಧಾ ಕೇಂದ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಮಾಡುತ್ತಿರುವವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಹೇಳಿದರು.ಉಡುಪಿ ಶ್ರೀಕೃಷ್ಣ ಮಠ, ಕಟೀಲು, ಶಬರಿಮಲೆ ಇತ್ಯಾದಿ ಅನೇಕ ಕ್ಷೇತ್ರಗಳ ವಿರುದ್ಧ ಅಪಪ್ರಚಾರದ ಷಡ್ಯಂತ್ರ ನಡೆದಿದೆ. ಅದರ ಮುಂದುವರಿದ ಭಾಗವಾಗಿ ಧರ್ಮಸ್ಥಳದ ವಿರುದ್ಧ ಅಪಪ್ರಚಾರಕ್ಕೆ ಇಳಿದಿದ್ದಾರೆ. ಈ ಇಕ್ಕಟ್ಟಿನಿಂದ ಪಾರು ಮಾಡುವಂತೆ ದೇವರಲ್ಲೇ ಪ್ರಾರ್ಥಿಸಿದ್ದೇವೆ ಎಂದರು.
ಕಟೀಲು ಕ್ಷೇತ್ರದ ಹರಿನಾರಾಯಣದಾಸ ಆಸ್ರಣ್ಣ, ಮಂಗಳೂರಿನ ಓಂ ಶ್ರೀ ಮಠದ ಶ್ರೀ ವಿದ್ಯಾನಂದ ಸರಸ್ವತಿ ಸ್ವಾಮೀಜಿ, ಮಾತಾ ಶಿವಜ್ಞಾನಮಹಿ ಸರಸ್ವತಿ, ವಿಹಿಂಪ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ವಿಹಿಂಪ ಸೇವಾ ಪ್ರಕಲ್ಪ ಬಾಲ ಸಂರಕ್ಷಣಾ ಕೇಂದ್ರ ಕಾರ್ಯದರ್ಶಿ ಡಾ. ಅನಂತಕೃಷ್ಣ ಭಟ್, ಪ್ರಾಂತ ಸಹ ಸೇವಾ ಪ್ರಮುಖ್ ಗೋಪಾಲ ಕುತ್ತಾರ್, ವಿಹಿಂಪ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ್, ವಿಭಾಗ ಮಂದಿರ ಅರ್ಚಕ ಪುರೋಹಿತ ಸಂಪರ್ಕ ಪ್ರಮುಖ್ ಪೊಳಲಿ ಗಿರಿಪ್ರಕಾಶ್ ತಂತ್ರಿ, ಬಜರಂಗದಳ ಪ್ರಾಂತ ಸಹ ಸಂಯೋಜಕ ಭುಜಂಗ ಕುಲಾಲ್, ಮಾಜಿ ಮೇಯರ್‌ಗಳಾದ ಮನೋಜ್ ಕುಮಾರ್, ದಿವಾಕರ ಪಾಂಡೇಶ್ವರ, ಪ್ರಮುಖರಾದ ಕಟೀಲು ದಿನೇಶ ಪೈ, ಪ್ರದೀಪ ಕುಮಾರ ಕಲ್ಕೂರ, ಪುಷ್ಪರಾಜ್ ಜೈನ್, ಸತ್ಯಕೃಷ್ಣ ಭಟ್, ನಂದನ್ ಮಲ್ಯ ಇದ್ದರು.ವಿಭಾಗ ಸಹ ಕಾರ್ಯದರ್ಶಿ ಶಿವಾನಂದ ಮೆಂಡನ್ ಸ್ವಾಗತಿಸಿ, ನಿರೂಪಿಸಿದರು.