ಹನುಮಗಿರಿಯಲ್ಲಿ ಶ್ರೀರಾಮ ನಾಮ ತಾರಕ ಜಪ ಯಜ್ಞ ದೀಕ್ಷೆ

KannadaprabhaNewsNetwork |  
Published : Mar 05, 2026, 02:45 AM IST
ಫೋಟೋ: 2ಪಿಟಿಆರ್‌-ಹನುಮಗಿರಿಹನುಮಗಿರಿಯಲ್ಲಿ ಶ್ರೀರಾಮ ನಾಮ ತಾರಕ ಜಪ ಯಜ್ಞ ದೀಕ್ಷೆ ಮತ್ತು ಲಕ್ಷೋತ್ತರ ನಾಳಿಕೇರ ಸಮರ್ಪಣೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು.  | Kannada Prabha

ಸಾರಾಂಶ

ಈಶ್ವರಮಂಗಲದ ಹನುಮಗಿರಿ ಶ್ರೀ ಪಂಚಮುಖಿ ಆಂಜನೇಯ- ಕೋದಂಡರಾಮ ಕ್ಷೇತ್ರದಲ್ಲಿ ಏ.೯ರಿಂದ ೧೨ರವರೆಗೆ ನಡೆಯಲಿರುವ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಪೂರ್ವಭಾವಿಯಾಗಿ ಸೋಮವಾರ ಶ್ರೀರಾಮ ನಾಮ ತಾರಕ ಜಪ ಯಜ್ಞ ದೀಕ್ಷೆ ಮತ್ತು ಲಕ್ಷೋತ್ತರ ನಾಳಿಕೇರ ಸಮರ್ಪಣೆ ಅಭಿಯಾನಕ್ಕೆ ಚಾಲನೆ ಕಾರ್ಯಕ್ರಮ ನಡೆಯಿತು.

ಪುತ್ತೂರು: ತಾಲೂಕಿನ ಈಶ್ವರಮಂಗಲದ ಹನುಮಗಿರಿ ಶ್ರೀ ಪಂಚಮುಖಿ ಆಂಜನೇಯ- ಕೋದಂಡರಾಮ ಕ್ಷೇತ್ರದಲ್ಲಿ ಏ.೯ರಿಂದ ೧೨ರವರೆಗೆ ನಡೆಯಲಿರುವ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಪೂರ್ವಭಾವಿಯಾಗಿ ಸೋಮವಾರ ಶ್ರೀರಾಮ ನಾಮ ತಾರಕ ಜಪ ಯಜ್ಞ ದೀಕ್ಷೆ ಮತ್ತು ಲಕ್ಷೋತ್ತರ ನಾಳಿಕೇರ ಸಮರ್ಪಣೆ ಅಭಿಯಾನಕ್ಕೆ ಚಾಲನೆ ಕಾರ್ಯಕ್ರಮ ನಡೆಯಿತು.

ಹನುಮಗಿರಿ ಬ್ರಹ್ಮಕಲಶೋತ್ಸವಕ್ಕಾಗಿ ರಚಿಸಲಾದ ೬೦ ಗ್ರಾಮ ಸಮಿತಿಗಳ ನೇತೃತ್ವದಲ್ಲಿ ಮನೆ ಮನೆಗಳಿಂದ ಸಂಗ್ರಹಿಸಲಾದ ತೆಂಗಿನಕಾಯಿಗಳನ್ನು ಮೆರವಣಿಗೆ ಮೂಲಕ ಕ್ಷೇತ್ರದಲ್ಲಿ ಸಮರ್ಪಿಸಲಾಯಿತು.ಶ್ರೀ ಕೋದಂಡರಾಮ ಸನ್ನಿಧಿಯಲ್ಲಿ ಕ್ಷೇತ್ರದ ತಂತ್ರಿವರ್ಯರಾದ ಕುಂಟಾರು ರವೀಶ ತಂತ್ರಿ ನೇತೃತ್ವದಲ್ಲಿ ಸೋಮವಾರ ಬೆಳಗ್ಗೆ ಶ್ರೀರಾಮ ತಾರಕ ಯಜ್ಞ ಆರಂಭಗೊಂಡಿತು. ಇದಾದ ಬಳಿಕ ಶ್ರೀರಾಮ ನಾಮ ತಾರಕ ಜಪ ಯಜ್ಞ ಗ್ರಾಮ ಸಂಚಾಲಕರುಗಳಿಗೆ ಜಪ ದೀಕ್ಷೆ ನೀಡುವ ಕಾರ್ಯಕ್ರಮ ನಡೆಯಿತು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ಮಾತುಗಳ ಮೂಲಕ ವಿವರಿಸಿದರು.

ಅಯೋಧ್ಯೆ ಶ್ರೀರಾಮ ಜನ್ಮಸ್ಥಾನದಲ್ಲಿ ಬಾಲರಾಮನ ಮಂದಿರ ಸ್ಥಾಪನೆಯಾದ ಬಳಿಕ ಇದೇ ಮೊದಲ ಬಾರಿ ರಾಮ ಮಂದಿರದ ಜ್ಯೋತಿ ದಕ್ಷಿಣ ಕನ್ನಡಕ್ಕೆ ಆಗಮಿಸಲಿದೆ. ರಾಮ ನವಮಿಯಂದು ಜ್ಯೋತಿ ಅಯೋಧ್ಯೆಯಿಂದ ಹೊರಟು ಜಿಲ್ಲೆಗೆ ಆಗಮಿಸಲಿದೆ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಗ್ರಾಮ ಗ್ರಾಮಗಳಿಗೆ ಜ್ಯೋತಿ: ಅಯೋಧ್ಯೆಯಿಂದ ಜ್ಯೋತಿ ತಂದು ಗ್ರಾಮ ಗ್ರಾಮಗಳಲ್ಲಿ ಸಂಚರಿಸಿ ಮನೆಮನೆಗಳಿಗೆ ಶ್ರೀರಾಮ ಜ್ಯೋತಿ ನೀಡಲು ನಿರ್ಧರಿಸಲಾಗಿದೆ. ರಾಮನವಮಿ ದಿನ ತಲುಪುವಂತೆ ಅಯೋಧ್ಯೆಗೆ ಹನುಮಗಿರಿಯಿಂದ ಭಕ್ತರ ತಂಡ ತೆರಳಲಿದೆ. ಶುಭ ದಿನದಂದು ಬಾಲರಾಮ ಮಂದಿರದಿಂದ ಜ್ಯೊತಿ ತರಲಾಗುವುದು. ಇದೇ ವೇಳೆ ಕೊಪ್ಪಳ ಜಿಲ್ಲೆಯ ಶ್ರೀ ಆಂಜನೇಯ ಕ್ಷೇತ್ರದಿಂದ ಹನುಮ ಜ್ಯೋತಿಯೂ ಆಗಮಿಸಲಿದೆ. ದ್ವಂದ್ವ ಜ್ಯೊತಿಗಳನ್ನು ಜಿಲ್ಲೆಗೆ ತಂದು ಬಂಟ್ವಾಳದ ಮೂಲಕ ಪುತ್ತೂರಿಗೆ ತರಲಾಗುತ್ತದೆ. ಬಳಿಕ ಗ್ರಾಮ ಗ್ರಾಮಗಳಿಗೆ ಹಂಚಲಾಗುತ್ತದೆ. ಗ್ರಾಮ ಸಮಿತಿಗಳ ಮೂಲಕ ಜ್ಯೋತಿಯು ಭಕ್ತರ ಮನೆ ತಲುಪಿದ್ದು, ಇದು ದೇಶದಲ್ಲೇ ಮೊದಲ ಪ್ರಯೋಗ ಎಂದು ನಳಿನ್‌ ಹೇಳಿದರು. ಹನುಮಗಿರಿ ಬ್ರಹ್ಮಕಲಶದ ಪ್ರಯುಕ್ತ ಶ್ರೀರಾಮ ಮತ್ತು ಹನುಮರ ಸಂಕೇತವಾಗಿ ಪ್ರತೀ ಮನೆಯಿಂದ ೨ ತೆಂಗಿನಕಾಯಿ

ಸಮರ್ಪಣೆ ಅಪೇಕ್ಷಿಸಲಾಗಿದೆ. ಇಂದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು ಏ.೯ರವರೆಗೂ ಮುಂದುವರಿಯಲಿದೆ ಎಂದರು.

ರಾಮಾಯಣದ ಮೂಲ ಸತ್ವವೇ ದೇಶಭಕ್ತಿ: ಹಿರಿಯ ಆರೆಸ್ಸೆಸ್ ಮುಖಂಡ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಮಾತನಾಡಿ, ಶ್ರೀರಾಮ ನಾಮ ತಾರಕ ಜಪ ಯಜ್ಞದ ಮಹತ್ವದ ಬಗ್ಗೆ ವಿವರಿಸಿದರು.

ಪುರೋಹಿತ ಕಶೆಕೋಡಿ ಸೂರ್ಯನಾರಾಯಣ ಭಟ್ ಭಕ್ತರಿಗೆ ಜಪ ದೀಕ್ಷೆ ನೀಡಿದರು. ರಾಮ ತಾರಕ ಯಜ್ಞದ ಸಂದರ್ಭದಲ್ಲಿ ಪೂಜಿತಗೊಂಡ ರಕ್ಷೆಗಳನ್ನು ಪ್ರತೀ ಭಕ್ತರಿಗೆ ವಿತರಿಸಿ ಪ್ರತಿಯೊಬ್ಬರು ಪರಸ್ಪರರ ಕೈಗೆ ರಕ್ಷೆ ಕಟ್ಟಿದರು.

ದೀಕ್ಷೆ ಪಡೆದವರಿಗೆ ಶ್ರೀರಾಮನ ಚಿತ್ರವಿರುವ ಸ್ಟಿಕ್ಕರ್ ಮತ್ತು ಮಂತ್ರಗಳ ಸಂಖ್ಯೆಯನ್ನು ದಿನಂಪ್ರತಿ ದಾಖಲಸಿಕೊಳ್ಳುವ ಪತ್ರ ನೀಡಲಾಯಿತು. ಜಪ ದೀಕ್ಷೆ ಗ್ರಾಮ ಸಂಚಾಲಕರು ತಮ್ಮ ಊರಿನ ಭಕ್ತರಿಗೆ ದೀಕ್ಷೆ ನೀಡಬೇಕಿದೆ. ಭಕ್ತರು ಪ್ರಾತಃಕಾಲ ಮತ್ತು ಸಂಜೆ ಶುಚಿರ್ಭೂತರಾಗಿ ಕುಳಿತು ರಾಮ ತಾರಕ ಮಂತ್ರವನ್ನು ೧೦೮ ಬಾರಿ ಪಠಿಸಿ ಅದರ ಲೆಕ್ಕವನ್ನು ಪತ್ರದಲ್ಲಿ ದಾಖಲಿಸಬೇಕು. ಇದು ಏಪ್ರಿಲ್ ೮ರವರಗೆ ನಡೆಯಲಿದ್ದು, ಅನುಷ್ಠಾನ ಸಂದರ್ಭ ಮದ್ಯಪಾನ ತ್ಯಜಿಸಲು ಸೂಚಿಸಲಾಗಿದೆ. ಏ.೯ರಿಂದ ನಡೆಯುವ ಬ್ರಹ್ಮಕಲಶೋತ್ಸವ ಸಂದರ್ಭ ತಾರಕ ಮಂತ್ರ ಪಠಿಸಿದವರು ದಂಪತಿ ಸಹಿತ ಹನುಮಗಿರಿಗೆ ಬಂದು ಪ್ರಸಾದ ಪಡೆಯಲು ತಿಳಿಸಲಾಯಿತು.ಶ್ರೀ ಕೋದಂಡರಾಮ ಸನ್ನಿಧಿ ಕ್ಷೇತ್ರದ ತಂತ್ರಿವರ್ಯರಾದ ಕುಂಟಾರು ರವೀಶ ತಂತ್ರಿ, ಬ್ರಹ್ಮಕಲಶೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ರವೀಶ್ ಪಡುಮಲೆ ಉಪಸ್ಥಿತರಿದ್ದರು. ಸಮಿತಿಯ ಪದಾಧಿಕಾರಿಗಳಾದ ಸೀತಾರಾಮ ರೈ ಕೇದಂಬಾಡಿ ಗುತ್ತು, ಆರ್, ಸಿ. ನಾರಾಯಣ, ಸಾಜ ರಾಧಾಕೃಷ್ಣ ಆಳ್ವಾ, ರಾಧಾಕೃಷ್ಣ ಬೋರ್ಕರ್, ಅರುಣ್ ಕುಮಾರ್ ಪುತ್ತಿಲ, ಮತ್ತು ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುತ್ತೂರು ನಗರದಲ್ಲಿ ವಿಮಾನ ಹಾರಾಟ ಆತಂಕ!
ಕುಂದಾಪುರ- ಎಂಸಿಎನ್‌ ವಿದ್ಯಾರ್ಥಿಗಳ ಲ್ಯಾಂಪ್ ಲೈಟಿಂಗ್