- ಹಳಸಿದ ಸಾಂಬಾರ್ ವಿರುದ್ಧ ಮಾರಿಕೊಪ್ಪದ ಮಂಜುನಾಥ ಮುಖ್ಯಾಧಿಕಾರಿಗೆ ದೂರು
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಕಡುಬಡವರು, ಶ್ರಮಿಕ ವರ್ಗದವರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ತಿಂಡಿ, ಊಟ ಸಿಗಲೆಂಬ ಉದ್ದೇಶದಿಂದ ಸರ್ಕಾರ ಹೊನ್ನಾಳಿ ಪಟ್ಟಣದ ಎಸ್.ಎಂ.ಎಫ್.ಸಿ. ಕಾಲೇಜಿನ ಆವರಣದಲ್ಲಿ ಕಟ್ಟಡ, ಇತರೆ ಪರಿಕರಗಳು ಸೇರಿ ಒಟ್ಟು ₹1.30 ಕೋಟಿ ವೆಚ್ಚದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಿದೆ. ಕಳೆದ ನವೆಂಬರಲ್ಲಿ ಸೇವೆಗೂ ಚಾಲನೆ ನೀಡಿದೆ. ಆದರೆ, ಉದ್ದೇಶ ಮಾತ್ರ ಜನರಿಗೆ ಸರಿಯಾಗಿ ತಲುಪುತ್ತಿಲ್ಲ.ಹೊನ್ನಾಳಿಯ ಇಂದಿರಾ ಕ್ಯಾಂಟೀನ್ ಅರಂಭಗೊಂಡು ಕೇವಲ 2 ತಿಂಗಳಾಗಿದೆ. ಈ ಅವಧಿಯಲ್ಲೇ ಅಲ್ಲಿನ ಅವ್ಯವಸ್ಥೆಗಳಿಂದ ಸಾರ್ವಜನಿಕರು, ಗ್ರಾಹಕರಿಂದ ತೀವ್ರ ಟೀಕೆಗೆ ಗುರಿಯಾಗಿದೆ.
ಗುರುವಾರ ಬೆಳಗ್ಗೆ ಮಾರಿಕೊಪ್ಪದ ಮಂಜುನಾಥ ಸೇರಿದಂತೆ ಹಲವಾರು ಗ್ರಾಹಕರು ಇಂದಿರಾ ಕ್ಯಾಂಟೀನ್‌ಗೆ ಉಪಾಹಾರಕ್ಕಾಗಿ ಆಗಮಿಸಿದ್ದರು. ಇಡ್ಲಿ, ಸಾಂಬರ್ ಪಡೆದು ತಿನ್ನುವಾಗ ಸಾಂಬರ್ ಸಂಪೂರ್ಣ ಹಳಸಿ ಕೆಟ್ಟ ವಾಸನೆ ಬರುತ್ತಿತ್ತು. ಕೂಡಲೇ ಅಲ್ಲಿನ ಸಿಬ್ಬಂದಿಗೆ ಈ ಬಗ್ಗೆ ಪ್ರಶ್ನಿಸಿದರೆ, ಸಿಬ್ಬಂದಿ ತಾತ್ಸಾರದ ಉತ್ತರ ನೀಡಿದ್ದಾರೆ. ಆಗ ಕೂಡಲೇ ಮಾರಿಕೊಪ್ಪದ ಮಂಜುನಾಥ ಪುರಸಭೆ ಮುಖ್ಯಾಧಿಕಾರಿಗೆ ದೂರವಾಣಿ ಕರೆ ಮಾಡಿ, ಅವ್ಯವಸ್ಥೆ ತಿಳಿಸಿದ್ದಾರೆ.ಗ್ರಾಹಕರ ದೂರಿನ ಮೇರೆಗೆ ಪುರಸಭೆ ಮುಖ್ಯಾಧಿಕಾರಿ ಟಿ. ಲೀಲಾವತಿ ಇಂದಿರಾ ಕ್ಯಾಂಟೀನ್‌ಗೆ ಆಗಮಿಸಿದರು. ಸಾಂಬರ್ ಮುಂತಾದ ಆಹಾರ ಪದಾರ್ಥಗಳ ಗುಣಮಟ್ಟ ಮತ್ತು ಸ್ವಚ್ಛತೆಯನ್ನು ಪರಿಶೀಲಿಸಿದರು. ಆಗ ಸಾಂಬಾರ್ ಹಳಸಿರುವುದು ಗಮನಕ್ಕೆ ಬಂದಿದೆ. ತಕ್ಷಣ ಅಲ್ಲಿನ ಸಿಬ್ಬಂದಿಗೆ ಈ ಬಗ್ಗೆ ತರಾಟೆಗೆ ತೆದುಕೊಂಡರು. ಗ್ರಾಹಕರಿಗೆ ಉತ್ತಮ ಗುಣಮಟ್ಟದ ಆಹಾರ ನೀಡಬೇಕು. ಇಲ್ಲವಾದರೆ ಮೇಲಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇಂದಿರಾ ಕ್ಯಾಂಟೀನ್ ಅಡುಗೆ ಮನೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳನ್ನು ಗಮನಿಸಿದರು. ಆಗ ಅಡುಗೆ ಪಾತ್ರೆಗಳು ಸಹ ಶುಚಿಯಾಗಿ ಇಲ್ಲದಿರುವುದು ಕಂಡುಬಂದಿತು. ಇಡೀ ಕ್ಯಾಂಟೀನ್ ಪ್ರದೇಶ ಕಸ, ಕಡ್ಡಿಗಳಿಂದ ಕೂಡಿತ್ತು. ಕೊಳಚೆ ನೀರು ಕ್ಯಾಂಟೀನ್ ಮುಂಭಾಗದಲ್ಲೇ ಶೇಖರಣೆಯಾಗಿದ್ದರೆ, ಪಕ್ಕದಲ್ಲೇ ಇರುವ ಚಾನಲ್ ನೀರು ಪಾಚಿ ಕಟ್ಟಿ ಇಡೀ ವಾತಾವರಣ ಶುಚಿತ್ವ ವಂಚಿತವಾಗಿದ್ದನ್ನು ಮುಖ್ಯಾಧಿಕಾರಿ ಗಮನಿಸಿದರು.ಸ್ವಚ್ಛತೆ ನಿರ್ಲಕ್ಷ್ಯ ವಿರುದ್ಧವೂ ಮುಖ್ಯಾಧಿಕಾರಿ ಲೀಲಾವತಿ ಪ್ರತಿಯೊಬ್ಬ ಸಿಬ್ಬಂದಿಗೆ ತರಾಟೆ ತೆಗೆದುಕೊಂಡರು. ಕ್ಯಾಂಟೀನ್ ಮುಂದಿನ ಬಾಗಿಲಿನ ಗಾಜುಗಳು ಒಡೆದು ಹೋಗಿದ್ದು, ಬಾಗಿಲು ಹಾಳಾಗಿದೆ. ಇನ್ನೂ ಕೂಡ ರಿಪೇರಿ ಮಾಡಿಲ್ಲ. ಶೀಘ್ರ ಪರಿಸ್ಥಿತಿ ಸುಧಾರಿಸಬೇಕು. ಶುದ್ಧ ಆಹಾರ, ಆರೋಗ್ಯಪೂರ್ಣ ವಾತಾವರಣ ನಿರ್ಮಿಸಬೇಕು. ಇಲ್ಲದಿದ್ದರೆ ಕ್ಯಾಂಟೀನ್ ಸಿಬ್ಬಂದಿ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡುವುದಾಗಿ ಎಚ್ಚರಿಸಿದರು.
- - --22ಎಚ್.ಎಲ್.ಐ1, 1ಬಿ.: ಹೊನ್ನಾಳಿ ಇಂದಿರಾ ಕ್ಯಾಂಟೀನ್‌ನಲ್ಲಿ ಗ್ರಾಹಕರಿಗೆ ಹಳಸಿದ ಸಾಂಬಾರ್ ವಿತರಣೆ ಕುರಿತು ದೂರು ಆಧರಿಸಿ ಪುರಸಭೆ ಮುಖ್ಯಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
-22ಎಚ್.ಎಲ್.ಐ1ಎ: ಹೊನ್ನಾಳಿ ಇಂದಿರಾ ಕ್ಯಾಂಟೀನ್ ಮುಂದೆ ತ್ಯಾಜ್ಯ, ಕೊಳಚೆ ನೀರು ನಿಂತಿರುವುದು.