ಗಣೇಶ ಮೆರವಣಿಗೆ ವೇಳೆ ಗಲಾಟೆ: ಗ್ರಾಪಂ ಸದಸ್ಯನಿಂದ ದರ್ಪ

KannadaprabhaNewsNetwork | Published : Sep 18, 2024 1:51 AM

ಸಾರಾಂಶ

ಕಮ್ಮನಾಯಕನಹಳ್ಳಿ ಗ್ರಾಪಂ ಸದಸ್ಯ ಅನಿಲ್‌ಕುಮಾರ್ ದರ್ಪ ಪ್ರದರ್ಶಿಸಿದ ಆರೋಪಿ. ಕಾರಿನಲ್ಲಿ ತಗ್ಗಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ವಿನಾಕಾರಣ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದನೆಂದು ಆರೋಪಿಸಿ ಚಂದ್ರೇಗೌಡ ಎಂಬುವರು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಗಣೇಶ ವಿಸರ್ಜನೆ ಸಮಯದಲ್ಲಿ ಗ್ರಾಪಂ ಸದಸ್ಯನೊಬ್ಬ ವ್ಯಕ್ತಿಯೊಬ್ಬರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆ ತಡೆಯಲು ಬಂದ ಪೊಲೀಸ್ ಸಿಬ್ಬಂದಿಗೆ ಆವಾಜ್ ಹಾಕಿ ದರ್ಪ ಪ್ರದರ್ಶಿಸಿರುವ ಘಟನೆ ತಾಲೂಕಿನ ಕಮ್ಮನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕಮ್ಮನಾಯಕನಹಳ್ಳಿ ಗ್ರಾಪಂ ಸದಸ್ಯ ಅನಿಲ್‌ಕುಮಾರ್ ದರ್ಪ ಪ್ರದರ್ಶಿಸಿದ ಆರೋಪಿ. ಕಾರಿನಲ್ಲಿ ತಗ್ಗಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ವಿನಾಕಾರಣ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದನೆಂದು ಆರೋಪಿಸಿ ಚಂದ್ರೇಗೌಡ ಎಂಬುವರು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರು ದಾಖಲಿಸಿಕೊಂಡ ಪೊಲೀಸರು ಗ್ರಾಪಂ ಸದಸ್ಯ ಅನಿಲ್‌ಕುಮಾರ್‌ನನ್ನು ವಶಕ್ಕೆ ತೆಗೆದುಕೊಂಡರು. ಅನಿಲ್‌ಕುಮಾರ್ ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡರ ಆಪ್ತ ಎನ್ನಲಾಗಿದ್ದು, ಶಾಸಕರ ಪ್ರಭಾವಕ್ಕೆ ಮಣಿದು ಅನಿಲ್‌ಕುಮಾರ್‌ನನ್ನು ಬಂಧಿಸದೆ ದೂರ ಉಳಿದಿದ್ದರು. ಕೊನೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಸೂಚನೆ ಮೇರೆಗೆ ಅನಿಲ್‌ಕುಮಾರ್‌ನನ್ನು ಬಂಧಿಸಿದರು.

ಏನಾಯ್ತು?

ತಗ್ಗಹಳ್ಳಿ ಗ್ರಾಮದ ಚಂದ್ರೇಗೌಡ ಅವರು ಭಾನುವಾರ ರಾತ್ರಿ ೧೦.೫೦ರ ಸಮಯದಲ್ಲಿ ಮಂಡ್ಯದಿಂದ ಕಮ್ಮನಾಯಕನಹಳ್ಳಿ ಮಾರ್ಗವಾಗಿ ತಗ್ಗಹಳ್ಳಿಗೆ ತೆರಳುತ್ತಿದ್ದರು. ಕಮ್ಮನಹಳ್ಳಿ ಗ್ರಾಮದ ಅಂಗಡಿ ಶಂಭಣ್ಣ ಮನೆಯ ಬಳಿ ಬಂದ ಸಮಯದಲ್ಲಿ ಗಣೇಶಮೂರ್ತಿ ಮೆರವಣಿಗೆ ಹೋಗುತ್ತಿದ್ದು, ರಸ್ತೆಯಲ್ಲಿ ಜನರು ತುಂಬಿಕೊಂಡಿದ್ದರು ಎಂದು ಹೇಳಲಾಗಿದೆ.

ಆಗ ಚಂದ್ರೇಗೌಡರು ಕಾರು ಮುಂದೆ ಸಾಗುವುದಕ್ಕೆ ಸ್ಥಳಾವಕಾಶ ಮಾಡಿಕೊಡುವಂತೆ ಪೊಲೀಸರಲ್ಲಿ ಮನವಿ ಮಾಡಿದರು. ಈ ಸಮಯದಲ್ಲಿ ಅಲ್ಲೇ ಇದ್ದ ಕಮ್ಮನಾಯಕನಹಳ್ಳಿ ಗ್ರಾಪಂ ಸದಸ್ಯ ಅನಿಲ್‌ಕುಮಾರ ಎಂಬಾತ ಚಂದ್ರೇಗೌಡರ ಮೇಲಿನ ಹಳೆಯ ದ್ವೇಷದಿಂದ ಕಾರು ಮುಂದೆ ಹೋಗದಂತೆ ಅಡ್ಡಗಟ್ಟಿದನು. ಕಾರಿನ ಬಾನೆಟ್‌ನ್ನು ಕೈಯಿಂದ ಗುದ್ದಿ ಕಾರನ್ನು ನಿಲ್ಲಿಸು, ನನ್ನ ಊರಿನ ಮೇಲೆ ಏಕೆ ಬರುತ್ತೀಯಾ ಎನ್ನುತ್ತಾ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದನೆಂದು ದೂರಿನಲ್ಲಿ ತಿಳಿಸಲಾಗಿದೆ

ಈ ಸಮಯದಲ್ಲಿ ನನ್ನ ರಕ್ಷಣೆಗೆ ಧಾವಿಸಿದ ಪೊಲೀಸರನ್ನೂ ಎಳೆದಾಡಿ, ಆವಾಜ್ ಹಾಕಿ ಅನಿಲ್‌ಕುಮಾರ್ ದರ್ಪ ಪ್ರದರ್ಶಿದ್ದಾನೆ. ಆಗ ಅಲ್ಲೇ ಇದ ಸ್ಥಳೀಯರು ಮತ್ತು ಪೊಲೀಸರು ಜಗಳ ಬಿಡಿಸಿದರು ಎಂದು ತಿಳಿಸಲಾಗಿದೆ.

ಚಂದ್ರೇಗೌಡ ಅವರು ಗ್ರಾಪಂ ಸದಸ್ಯ ಅನಿಲ್‌ಕುಮಾರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ದೂರು ನೀಡಿದ್ದರೂ ಶಾಸಕರ ಪ್ರಭಾವಕ್ಕೆ ಮಣಿದು ಆತನನ್ನು ಬಂಧಿಸಿರಲಿಲ್ಲ. ಈ ವಿಷಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಮನಕ್ಕೆ ಬಂದ ನಂತರ ಆರೋಪಿಗಳ ಬಂಧನಕ್ಕೆ ಸೂಚಿಸಿದರು. ಆಗ ಪೊಲೀಸರು ಅನಿಲ್‌ಕುಮಾರ್ ಮತ್ತಿತರರನ್ನು ಬಂಧನಕ್ಕೊಳಪಡಿಸಿದರು.

ಘಟನೆ ಕುರಿತಂತೆ ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಈಗಾಗಲೇ ಆರೋಪಿಗಳನ್ನು ಬಂಧಿಸಲಾಗಿದೆ. ಅವರನ್ನು ನ್ಯಾಯಾಲಯದ ಎದುರು ಹಾಜರು ಪಡಿಸಲಾಗುವುದು. ಗಣೇಶ ಮೆರವಣಿಗೆ ನಡೆಯುವ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಹಳೆ ವೈಷಮ್ಯದಿಂದ ಗಲಾಟೆಯಾಗಿದೆ. ಪೊಲೀಸರಿಗೂ ಅವಾಚ್ಯ ಶಬ್ಧದಿಂದ ನಿಂದನೆ ಮಾಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಯನ್ನು ಬಂಧಿಸಲಾಗಿದೆ. ಪೊಲೀಸರ ಮೇಲೆ ದರ್ಪ ಪ್ರದರ್ಶಿಸಿದ್ದರ ಕುರಿತು ಪೇದೆಯವರ ಕಡೆಯಿಂದ ದೂರು ಬಂದಿಲ್ಲ. ಆದರೂ ಅವರ ಹೇಳಿಕೆಯನ್ನೂ ಕೂಡ ದಾಖಲಿಸಿ ಕ್ರಮ ಜರುಗಿಸಲಾಗುವುದು. ಪೊಲೀಸರ ಮೇಲೆ ಗಲಾಟೆ ನಡೆದಿರುವ ಬಗ್ಗೆ ಪ್ರತ್ಯೇಕ ಕೇಸ್ ದಾಖಲು ಮಾಡುತ್ತೇವೆ ಎಂದರು.

Share this article