ರಥ ನಿರ್ಮಾಣ ಸಾಮಗ್ರಿ ಮೆರವಣಿಗೆಯ ಮೂಲಕ ದೇವಾಲಯಕ್ಕೆ

KannadaprabhaNewsNetwork | Published : Mar 13, 2024 2:02 AM

ಸಾರಾಂಶ

ಮಾ.೧೯ರ ರಾತ್ರಿ ಕಲ್ಯಾಣೋತ್ಸವ ನಡೆದು ಬುಧವಾರ ಮುಂಜಾನೆ ರಥಾರೂಢಳಾಗಿ ಜಾತ್ರಾ ಗದ್ದುಗೆಗೆ ರಥೋತ್ಸವದ ಮೂಲಕ ತೆರಳಿ ಜಾತ್ರಾ ಗದ್ದುಗೆ ಏರುವುದರೊಂದಿಗೆ ಜಾತ್ರಾ ವೈಭವ ಚಪ್ಪರದಲ್ಲಿ ಆರಂಭಗೊಳ್ಳುತ್ತದೆ.

ಶಿರಸಿ: ಎರಡು ವರ್ಷಕ್ಕೊಮ್ಮೆ ಭಕ್ತರಿಗೆ ಜಾತ್ರಾ ಮಂಟಪದಲ್ಲಿ ದರ್ಶನ ನೀಡುವ ಜಾಗೃತ ಶಕ್ತಿ ಸ್ವರೂಪಿಣಿ ಶಿರಸಿ ಮಾರಿಕಾಂಬಾ ದೇವಿಯ ಜಾತ್ರಾ ರಥೋತ್ಸವದ ನಿಮಿತ್ತ ರಥ ನಿರ್ಮಾಣದ ಮರಗಳನ್ನು ಮಂಗಳವಾರ ಅಂಕೆಯ ಹೊರಬೀಡಿನ ದಿನ ನಿಗದಿತ ಬೆಳಗ್ಗೆ ೧೦.೧೨ರಿಂದ ೧೨.೧೩ ಗಂಟೆಯ ಒಳಗಿನ ಮುಹೂರ್ತದಲ್ಲಿ ಅಲಂಕೃತ ಎತ್ತಿನ ಗಾಡಿಗಳಲ್ಲಿ ವಾದ್ಯ ಮೇಳಗಳೊಡನೆ ಮೆರವಣಿಗೆಯ ಮೂಲಕ ನಗರದ ಗಡಿಯಿಂದ ಸಾಂಪ್ರದಾಯಿಕವಾಗಿ ಶ್ರೀದೇವಿಯ ದೇವಾಲಯದ ಎದುರಿಗೆ ತರಲಾಯಿತು.

ಮಾ.೧೯ರ ರಾತ್ರಿ ಕಲ್ಯಾಣೋತ್ಸವ ನಡೆದು ಬುಧವಾರ ಮುಂಜಾನೆ ರಥಾರೂಢಳಾಗಿ ಜಾತ್ರಾ ಗದ್ದುಗೆಗೆ ರಥೋತ್ಸವದ ಮೂಲಕ ತೆರಳಿ ಜಾತ್ರಾ ಗದ್ದುಗೆ ಏರುವುದರೊಂದಿಗೆ ಜಾತ್ರಾ ವೈಭವ ಚಪ್ಪರದಲ್ಲಿ ಆರಂಭಗೊಳ್ಳುತ್ತದೆ.

ಕಳೆದ ಶುಕ್ರವಾರ ೪ನೇ ಹೊರಬೀಡಿನ ದಿನ ಮುಂಜಾನೆ ಶ್ರೀದೇವಿಯ ಜಾತ್ರಾ ಮಹೋತ್ಸವದ ರಥದ ನಿರ್ಮಾಣಕ್ಕಾಗಿ ತಾಲೂಕಿನ ಬಿಕ್ನಳ್ಳಿಯ ಪ್ರದೀಪ ಬಂಗಾರೇಶ್ವರ ಗೌಡ ಅವರು ಸೇವಾರ್ಥವಾಗಿ ನೀಡಿದ್ದ ತಮ್ಮ ಮಾಲ್ಕಿ ಜಮೀನಿನಲ್ಲಿ ಬೆಳೆದ ತಾರೆ ಮರವನ್ನು ದೇವಸ್ಥಾನದ ಆಚರಣೆಯಂತೆ ಗುರುತಿಸಿ, ಆಯುಧ ಸಹಿತವಾಗಿ ವೃಕ್ಷ ಪೂಜೆ ನಡೆಸಿ, ಪರಂಪರಾಗತ ಆಚರಣೆಯಂತೆ ಮರಗಳ ಕಡಿತದ ಸೇವಾ ಕೈಂಕರ್ಯ ನೆರವೇರಿಸುವ ಬಡಗಿ ಬಾಬದಾರರಿಂದ ಕಚ್ಚು ಹಾಕುವ ಮೂಲಕ ರಥದ ಮರ ಕಡಿಯುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ತದನಂತರ ಮರವನ್ನು ವಿಧಿವಿಧಾನ ಪೂರ್ವಕವಾಗಿ ಕಡಿದು, ನಿಗದಿತ ಅಳತೆಯಂತೆ ತುಂಡರಿಸಿದ್ದರು.

ಮಂಗಳವಾರ ಅಲಂಕರಿಸಿದ ಎತ್ತಿನ ಗಾಡಿಗಳಲ್ಲಿ ತರಲಾದ ಮರದ ಬೃಹತ್ ತುಂಡುಗಳಿಗೆ ಮೊದಲು ಕೋಟೆಕೆರೆ ಬಳಿ ಪೂಜೆ, ಆರತಿ ನೆರವೇರಿಸಿದರು. ನಂತರ ಈ ಮರದ ತುಂಡುಗಳನ್ನು ದೇವಸ್ಥಾನದ ಎದುರು ತಂದು ನಿಲ್ಲಿಸಲಾಯಿತು.

ದೇವಾಲಯದ ಮಹಾದ್ವಾರದ ಬಳಿ ಸಾಲಾಗಿ ನಿಲ್ಲಿಸಲಾದ ಮರದ ತುಂಡುಗಳಿಗೆ ಪೂಜೆ, ಆರತಿ ನೆರವೇರಿಸಿದರು. ಧರ್ಮದರ್ಶಿಗಳ ಉಪಸ್ಥಿತಿಯಲ್ಲಿ ಅರ್ಚಕರು, ಬಾಬದಾರರು ಹಾಗೂ ಬಾಬದಾರರ ಕುಟುಂಬದ ಮಹಿಳೆಯರು ಶ್ರೀದೇವಿಯ ಜಾತ್ರಾ ರಥೋತ್ಸವದ ರಥದ ತಯಾರಿಕೆಗೆ ಬಳಸುವ ಮರದ ತುಂಡುಗಳಿಗೆ ಪೂಜೆ ಸಲ್ಲಿಸಿ, ಆರತಿ ಬೆಳಗಿದರು.

ಈ ಸಂದರ್ಭದಲ್ಲಿ ಧರ್ಮದರ್ಶಿ ಮಂಡಳದವರು, ಬಾಬದಾರ ಪ್ರಮುಖರಾದ ವಿಜಯ ನಾಡಿಗ, ಜಗದೀಶ ಗೌಡ, ಬಸವರಾಜ ಚಕ್ರಸಾಲಿ, ಇತರ ಬಾಬದಾರ ಪ್ರಮುಖರು, ಬಾಬದಾರ ಕುಟುಂಬದವರು, ಪಾರುಪತ್ಯೆಗಾರರು, ಸಿಬ್ಬಂದಿ, ನೌಕರರು ಉಪಸ್ಥಿತರಿದ್ದರು.

Share this article