ಬಂಟ್ವಾಳ: ಚುನಾವಣಾ ವಾಹನವಾಗಿ ಬಳಸಲಾಗುವ ಟೂರಿಸ್ಟ್ ಕಾರು, ವ್ಯಾನ್‌ಗಳಿಗೆ 2023ರ ವಿಧಾನಸಭಾ ಚುನಾವಣೆಯ ಸಂದರ್ಭ ನೀಡಬೇಕಾಗಿದ್ದ ಬಾಡಿಗೆಯನ್ನು ಇನ್ನೂ ನೀಡಿಲ್ಲ ಎಂದು ಆರೋಪಿಸಿ ಬಂಟ್ವಾಳದ ಆಡಳಿತ ಸೌಧದ ಮುಂಭಾಗ ಟೂರಿಸ್ಟ್ ಕಾರು, ವ್ಯಾನು ಚಾಲಕ, ಮಾಲಕರ ಸಂಘದ ಪದಾಧಿಕಾರಿಗಳು, ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು.
ಈ ಬಾರಿ ಮೊದಲೇ ಪಾವತಿಯ ಗ್ಯಾರಂಟಿ ಕೊಡಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ಕಳೆದ 2023ರ ವಿಧಾನಸಭಾ ಚುನಾವಣೆಗೆ ವಿವಿಧ ಇಲಾಖೆಗಳಿಗೆ ನಮ್ಮ ಟೂರಿಸ್ಟ್ ವಾಹನಗಳಲ್ಲಿ ವಶಪಡಿಸಿ, ಸರಕಾರದ ಆದೇಶ ಪ್ರಕಾರ ಪಾವತಿ ನೀಡುವುದಾಗಿ ತಿಳಿಸಿದ್ದಾರೆ. ಕಾರಿಗೆ 2700 ರು., ವ್ಯಾನು 3800, ಮಿನಿ ಬಸ್ 8,200 ರು. ನೀಡುವುದಾಗಿ ತಿಳಿಸಿದ್ದರು. ಆದರೆ ಹೇಳಿದ ಪ್ರಕಾರ, ಕಾರ್ಯನಿರ್ವಹಿಸಿದ ಎಲ್ಲ ಚಾಲಕರಿಗೆ ಬಾಡಿಗೆ ನೀಡದೆ ತೊಂದರೆ ಉಂಟುಮಾಡಿದೆ ಎಂದು ಆರೋಪಿಸಿದರು.
ಈ ಸಂದರ್ಭ ಟೂರಿಸ್ಟ್ ಕಾರು ಚಾಲಕ ಮಾಲಕರ ಸಂಘದ ಅಧ್ಯಕ್ಷ ರಾಘವೇಂದ್ರ ರಾವ್, ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್ ಅಸೋಸಿಯೇಶನ್ ಗೌರವಾಧ್ಯಕ್ಷ ಇಕ್ಬಾಲ್ ಬಿ.ಸಿ.ರೋಡ್, ಪ್ರಮುಖರಾದ ವಿನ್ಸೆಂಟ್ ರೋಡ್ರಿಗಸ್, ಸುನಿಲ್ ಲೋಬೊ, ವಿಠಲ ರೈ, ಸುರೇಶ್ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.