ಹೊಸಪೇಟೆ: ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸದ ಅಧ್ಯಯನವೆಂದರೆ ಇಲ್ಲಿ ವಾಸಿಸುವ ಮನುಷ್ಯರ ಅಧ್ಯಯನವೇ ಆಗಿದೆ. ಇತಿಹಾಸ, ಸಮಾಜ ಶಾಸ್ತ್ರ, ಮಾನವಶಾಸ್ತ್ರ, ಜಾನಪದ, ಬುಡಕಟ್ಟು, ಲಲಿತಕಲೆಗಳು, ವಿಜ್ಞಾನಗಳ ಅಧ್ಯಯನಕ್ಕೂ ಭಾಷೆಗೂ ಕರುಳಬಳ್ಳಿ ಸಂಬಂಧವಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಸಂಜೆ 34ನೇ ನುಡಿಹಬ್ಬದಲ್ಲಿ ಪಿಎಚ್‌ಡಿ ಪದವಿಗಳನ್ನು ಪ್ರದಾನ ಮಾಡಿ ಮಾತನಾಡಿದರು. ವಿವಿಯ ನಾಲ್ಕು ನಿಕಾಯಗಳ ಹಲವು ವಿಭಿನ್ನ ಅಧ್ಯಯನ ವಿಭಾಗಗಳು, ಅಲ್ಲಿನ ವಿದ್ವಾಂಸರು ಬಹುಶಿಸ್ತೀಯ ಹಾಗೂ ಅಂತರ್‌ಶಿಸ್ತೀಯ ಅಧ್ಯಯನಗಳ ಮೂಲಕ ಹಲವು ಮಹತ್ವದ ಅಧ್ಯಯನಗಳನ್ನು ಈ ಮೂವತ್ನಾಲ್ಕು ವರ್ಷಗಳ ಕಾಲ ನಿರ್ವಹಿಸಿ, ಕನ್ನಡ, ಕರ್ನಾಟಕ ಸಂಸ್ಕೃತಿಯ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದಾರೆ. ಉಪೇಕ್ಷಿತ ನೆಲೆಗಳ ಅಧ್ಯಯನಗಳನ್ನು ಮುನ್ನೆಲೆಗೆ ತರುವ ಮೂಲಕ ಕರ್ನಾಟಕಕ್ಕೆ ಹೊಸ ಚಿಂತನಾಕ್ರಮವನ್ನು ಕೊಟ್ಟಿದ್ದಾರೆ ಎಂದರು.ಇಂತಹ ಅಮೋಘ ಸಾಧನೆ ಮಾಡಿದ ಹೆಮ್ಮೆಯ ವಿಶ್ವವಿದ್ಯಾಲಯ ಅನುದಾನದ ಕೊರತೆಯಿಂದ ತನ್ನ ಸಂಶೋಧನೆ ಅಭಿವೃದ್ಧಿ ಹಾಗೂ ನಿರ್ವಹಣೆ ಚಟುವಟಿಕೆಗೆ ಸಂಕಷ್ಟ ಎದುರಿಸುತ್ತಿರುವುದನ್ನು ಕೇಳಿದ್ದೇನೆ. ಸ್ವತಃ ಕುಲಪತಿಗಳಾದ ಡಾ. ಡಿ.ವಿ. ಪರಮಶಿವಮೂರ್ತಿಯವರು ಆರ್ಥಿಕ ಸಂಕಷ್ಟಗಳಿಂದಾಗಿ ಉದ್ಭವಿಸಿರುವ ಇಲ್ಲಿನ ಪರಿಣಾಮಗಳನ್ನು ನನ್ನೊಂದಿಗೆ ಹಂಚಿಕೊಂಡಿದ್ದಾರೆ. ಸಾಧ್ಯವಾದಷ್ಟು ಶೈಕ್ಷಣಿಕ ಮತ್ತು ಆರ್ಥಿಕ ಆಡಚಣೆಗಳನ್ನು ಮೀರಿ ಇಂದು ವಿಶ್ವವಿದ್ಯಾಲಯ ಮುನ್ನಡೆಯುತ್ತಿದೆ. ಇದಕ್ಕೆ ಕಾರಣರಾದ ಡಾ. ಡಿ.ವಿ. ಪರಮಶಿವಮೂರ್ತಿ ಹಾಗೂ ಎಲ್ಲ ಪ್ರಾಧ್ಯಾಪಕರನ್ನೂ ಆಡಳಿತ ಸಿಬ್ಬಂದಿಯನ್ನೂ ಅಭಿನಂದಿಸುತ್ತೇನೆ. ಬೋಧಕ ಮತ್ತು ಆಡಳಿತ ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ನಿವೃತ್ತಿ ಹೊಂದುತ್ತಿರುವ ವಿಷಯ ಕುಲಪತಿಗಳಿಂದ ತಿಳಿಯಿತು. ಮುಖ್ಯಮಂತ್ರಿಗಳೊಂದಿಗೆ ಈ ಕುರಿತು ಗಂಭೀರವಾಗಿ ಚರ್ಚಿಸಿ ಸಾಧ್ಯವಾದಷ್ಟು ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ವಾಗಿ ಪ್ರಯತ್ನಿಸುವೆ ಎಂದು ಅವರು ಹೇಳಿದರು.