ಸಾರ್ಥಕ ಬದುಕಿಗೆ ದಾನ, ಧರ್ಮ, ಮಾನವೀಯತೆ ಮುಖ್ಯ-ಜಿಲ್ಲಾಧಿಕಾರಿ ಡಾ. ದಾನಮ್ಮನವರ

KannadaprabhaNewsNetwork | Published : Jan 11, 2025 12:45 AM

ಸಾರಾಂಶ

ಧರ್ಮ ಪರಿಪಾಲನೆಯು ಜಾತ್ರೆಯ ಉದ್ದೇಶವಾಗಿದ್ದು, ಸಾಮರಸ್ಯದ ಸಹಬಾಳ್ವೆಗೆ ಇಂತಹ ಕಾರ್ಯಕ್ರಮ ಅವಶ್ಯವಾಗಿದೆ. ಸಾರ್ಥಕ ಬದುಕು ಸಾಗಿಸಲು ದಾನ, ಧರ್ಮ, ಮಾನವೀಯತೆ, ಪರೋಪಕಾರ, ನಿಸ್ವಾರ್ಥ ಸೇವೆಯ ಮೌಲ್ಯಗಳ ಪ್ರತಿಫಲ ಪುಣ್ಯ ಸ್ಮರಣೋತ್ಸವದಲ್ಲಿ ಕಾಣುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.

ಹಾವೇರಿ: ಧರ್ಮ ಪರಿಪಾಲನೆಯು ಜಾತ್ರೆಯ ಉದ್ದೇಶವಾಗಿದ್ದು, ಸಾಮರಸ್ಯದ ಸಹಬಾಳ್ವೆಗೆ ಇಂತಹ ಕಾರ್ಯಕ್ರಮ ಅವಶ್ಯವಾಗಿದೆ. ಸಾರ್ಥಕ ಬದುಕು ಸಾಗಿಸಲು ದಾನ, ಧರ್ಮ, ಮಾನವೀಯತೆ, ಪರೋಪಕಾರ, ನಿಸ್ವಾರ್ಥ ಸೇವೆಯ ಮೌಲ್ಯಗಳ ಪ್ರತಿಫಲ ಪುಣ್ಯ ಸ್ಮರಣೋತ್ಸವದಲ್ಲಿ ಕಾಣುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.

ನಗರದ ಶಿವಬಸವೇಶ್ವರ ಪ್ರೌಢಶಾಲೆಯ ಆವರಣದಲ್ಲಿ ಹಮ್ಮಿಕೊಂಡಿರುವ ಹುಕ್ಕೇರಿಮಠದ ಲಿಂ.ಶಿವಬಸವ ಸ್ವಾಮಿಗಳ 79ನೇ ಹಾಗೂ ಲಿಂ.ಶಿವಲಿಂಗ ಸ್ವಾಮಿಗಳ 16ನೇ ಪುಣ್ಯಸ್ಮರಣೋತ್ಸವ 5ನೇ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

12ನೇ ಶತಮಾನದಲ್ಲಿ ಸಮಸಮಾಜದ ಕನಸು ಕಂಡ ಬಸವಾದಿ ಶಿವಶರಣರ ದಾರಿಯಲ್ಲಿಯೇ ಇಂದು ಮಠ ಮಾನ್ಯಗಳು ಕಾರ್ಯ ಮಾಡುತ್ತಿದ್ದು, ಅನ್ನ, ಅರಿವು, ಆಶ್ರಯದ ಮೂಲಕ ಜಾತ್ಯತೀತ ತತ್ವಕ್ಕೆ ಅನುಗುಣವಾಗಿ ಕಾರ್ಯ ನಿರ್ವಹಿಸುತ್ತಿವೆ. ಹುಕ್ಕೇರಿಮಠದ ಲಿಂ. ಶಿವಬಸವ ಮತ್ತು ಲಿಂ.ಶಿವಲಿಂಗ ಶ್ರೀಗಳು ಸಮಾಜದ ಎಲ್ಲ ವರ್ಗಗಳಿಗೂ ತ್ರಿವಿಧ ದಾಸೋಹ ಕಲ್ಪಿಸಿ ಬಸವಾದಿ ಶರಣರ ಆಶಯ ಸಾಕಾರಗೊಳಿಸುಲು ತಮ್ಮ ಜೀವವನ್ನೇ ಮುಡಿಪಾಗಿಟ್ಟು ಮಾತನಾಡುವ ಜ್ಯೋತಿರ್ಗಲಿಂಗವಾಗಿದ್ದಾರೆ ಎಂದರು.

ಶೇಗುಣಸಿ ವಿರಕ್ತಮಠದ ಡಾ. ಮಹಾಂತಪ್ರಭು ಸ್ವಾಮೀಜಿ ಮಾತನಾಡಿ, ಭಕ್ತಿರಸದ ಉಚ್ಛ್ರಾಯವನ್ನು ನಾವು ಹಾವೇರಿಯಲ್ಲಿ ನೋಡಬಹುದು. 63 ಮಠಗಳನ್ನು ಹೊಂದಿ, ಮರಿಕಲ್ಯಾಣದ ಖ್ಯಾತಿ ಈ ನಗರಕ್ಕಿದೆ. ಸಂಸ್ಕೃತಿ, ಸಂಸ್ಕಾರಗಳು ಉಳಿಯಬೇಕಾದರೆ ಮಠಮಾನ್ಯಗಳು ಉಳಿಯಬೇಕು. ಸ್ವಾತಿ ಹನಿ ಚಿಪ್ಪನ್ನು ಸೇರಿ ಮುತ್ತು ಆಗುವ ಹಾಗೆ, ಶ್ರೀಮಠದ ಪೂಜ್ಯದ್ವಯರ ಕೃಪೆಯಿಂದ ಪ್ರತಿ ಭಕ್ತನೂ ಮಹೇಶನಾಗುತ್ತಾನೆ. ಅಂತಹ ಕತೃತ್ವ ಶಕ್ತಿ ಶ್ರೀ ಹುಕ್ಕೇರಿಮಠಕ್ಕಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮಾದನ ಹಿಪ್ಪರಗಿಯ ಶ್ರೀ ಶಿವಲಿಂಗೇಶ್ವರ ವಿರಕ್ತಮಠದ ಅಭಿನವ ಶಿವಲಿಂಗ ಸ್ವಾಮೀಜಿ ಮಾತನಾಡಿ, ಎಲ್ಲರನ್ನೂ ಹಿರಿಯರನ್ನಾಗಿ ಮಾಡಿ, ತಾನು ಮಾತ್ರ ಕಿರಿಯ ಎಂದು ಭಾವಿಸಿದವರು ಬಸವಣ್ಣನವರು. ಅವರ ಮಾರ್ಗವನ್ನೇ ಅನುಸರಿಸಿದವರು ಶ್ರೀಮಠದ ಲಿಂ. ಪೂಜ್ಯದ್ವಯರು ಎಂದು ಹೇಳಿದರು.

ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಡಾ. ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪಡೆದ ವಿರೂಪಾಕ್ಷಪ್ಪ ಹಾವನೂರ ಅವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ, ಡಾ. ಶಿವಯೋಗಿ ದೇವರು, ಚನ್ನಬಸವ ದೇವರು, ಮಲ್ಲಿಕಾರ್ಜುನ ದೇವರು, ವೀರಬಸವ ದೇವರು, ಮಲ್ಲಿಕಾರ್ಜುನ ಹಾವೇರಿ, ಎಸ್.ಎಸ್. ಕೂಡ್ಲಪ್ಪನವರ, ಮಹಾಂತಪ್ಪ ಹಲಗಣ್ಣನವರ, ರುದ್ರೇಶ ಚಿನ್ನಣ್ಣವನರ, ಡಾ. ಬಸವರಾಜ ವೀರಾಪುರ, ಮಹೇಶ ಚಿನ್ನಿಕಟ್ಟಿ, ಲಲಿತಾ ಕುಂದೂರ, ನವೀನ ಹಾವನೂರ, ಶಂಭುಲಿಂಗಪ್ಪ ಅಟವಾಳಗಿ, ಅಶೋಕ ಮಗಾನೂರ, ಮಾಂತಣ್ಣ ಸುರಳಿಹಳ್ಳಿ, ಗಣೇಶ ಮುಷ್ಠಿ, ಕಳಕಪ್ಪ ತುಪ್ಪದ, ಮಲ್ಲಿಕಾರ್ಜುನ ಸುರಳಿಹಳ್ಳಿ, ಶಿವಯೋಗಿ ಹಂಚಿನಮನಿ, ಸುರೇಶ ಮುರಡಣ್ಣನವರ, ಸಿ.ವೈ. ಅಂತರವಳ್ಳಿ, ವನಿತಾ ಗುತ್ತಲ, ಅಮೃತಮ್ಮ ಶೀಲವಂತರ, ಲಲಿತಾ ಹೊರಡಿ, ಸಿ.ಜಿ. ತೋಟಣ್ಣನವರ, ಶಿವಯೋಗಿ ಬೆನಕೊಪ್ಪ, ಬಿ.ಬಸವರಾಜ ಇತರರು ಇದ್ದರು.

ಶಿವರುದ್ರಯ್ಯ ಗೌಡಗಾಂವ್ ಪ್ರಾರ್ಥಿಸಿದರು. ತಮ್ಮಣ್ಣ ಮುದ್ದಿ ಸ್ವಾಗತಿಸಿದರು. ನಾಗರಾಜ ನಡುವಿನಮಠ ನಿರೂಪಿಸಿದರು. ಸೋಮಶೇಖರ ಯಾದವಾಡ ವಂದಿಸಿದರು.ಕುಂಭಮೇಳದ ತ್ರಿವೇಣಿ ಸಂಗಮದ ಪುಣ್ಯಸ್ನಾನ ಪವಿತ್ರವಾದಂತೆ, ಶ್ರೀಮಠದ ಲಿಂ. ರಾಚೋಟೇಶ್ವರ, ಲಿಂ. ಶಿವಬಸವ ಹಾಗೂ ಲಿಂ. ಶಿವಲಿಂಗ ಶ್ರೀಗಳ ತ್ರಿವೇಣಿ ತಪೋಶಕ್ತಿಯು ಶ್ರೀ ಹುಕ್ಕೇರಿಮಠದ ಆಸ್ತಿಯಾಗಿದೆ. ನಮಿಸುವ ಕೈಗಳಿಂತ ದುಡಿಯುವ ಕೈ ಮೇಲೆ ಎಂಬಂತೆ ಶ್ರೀಮಠದ ಪುಣ್ಯ ಸ್ಮರಣೋತ್ಸವದಲ್ಲಿ ಸಾವಿರಾರು ಜನರು ನಿಸ್ವಾರ್ಥ ಸೇವೆಯನ್ನು ಮಾಡುತ್ತಿದ್ದಾರೆ. ಅವರೆಲ್ಲರ ಸೇವೆಯು ಅಭಿನಂದನಾರ್ಹವಾಗಿದೆ. ಇದರಿಂದ ಪ್ರತಿವರ್ಷವೂ ಜಾತ್ರೆ ವಿಜೃಂಭಣೆಯಿಂದ ಜರುಗುತ್ತಿದೆ ಎಂದು ಹುಕ್ಕೇರಿಮಠ ಸದಾಶಿವ ಸ್ವಾಮೀಜಿ ಹೇಳಿದರು.

ನನಗೆ ಗುರುಕೃಪೆಯಿಂದ ಅಧಿಕಾರ ಒಲಿದು ಬಂದಿದೆ. ಸದಾಶಿವ ಶ್ರೀಗಳ ಮಾತು ನಿಜವಾಗಿದೆ. ಗುರು ಪರಂಪರೆಯಿಂದ ಬಂದ ನನಗೆ ಹೆಚ್ಚಿನ ಸಮಾಜ ಸೇವೆ ಮಾಡಲು ಶ್ರೀಮಠದ ಆಶೀರ್ವಾದವೇ ಕಾರಣವಾಗಿದೆ ಎಂದು ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿ ಹೇಳಿದರು.

Share this article