ಶಿಗ್ಗಾಂವಿ:ಚಾರ್ಲಿ ಚಾಪ್ಲಿನ್ ಅವರ ಸಿನಿಮಾ ಕೇವಲ ಮನರಂಜನೆಗೆ ಸೀಮಿತವಾಗಿರಲಿಲ್ಲ, ಅದು ಸಮಾಜದ ಬಡತನ, ಅಸಮಾನತೆ, ದುಃಖ, ಶ್ರಮಜೀವಿಗಳ ಬದುಕು ಮತ್ತು ಮಾನವೀಯ ಮೌಲ್ಯಗಳನ್ನು ಮೌನ ಭಾಷೆಯಲ್ಲೇ ಜಗತ್ತಿಗೆ ಹೇಳಿದ ಶಕ್ತಿಶಾಲಿ ಮಾಧ್ಯಮವಾಗಿತ್ತು ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಎಂ. ಭಾಸ್ಕರ್ ಹೇಳಿದರು.
ಮಾತುಗಳಿಲ್ಲದೆ ನಗುವನ್ನು ಹುಟ್ಟಿಸಿ, ಅದೇ ನಗುವಿನ ಮೂಲಕ ಕಣ್ಣೀರು ತರಿಸುವ ಅಪೂರ್ವ ಕಲೆ ಅವರಿಗೆ ಮಾತ್ರ ಸಿದ್ಧಿಸಿತ್ತು. ಅಂತಹ ಮಹಾನ್ ಕಲಾವಿದ ನಮ್ಮನ್ನಗಲಿ ೪೮ ವರ್ಷ ಕಳೆದರೂ ಜನಮನದಲ್ಲಿ ಜೀವಂತವಾಗಿದ್ದಾರೆ ಎಂದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ. ವೆಂಕನಗೌಡ ಪಾಟೀಲ ಅವರು ಮಾತನಾಡಿ, ಚಾರ್ಲಿ ಚಾಪ್ಲಿನ್ ಹಲವಾರು ಕಷ್ಟ ಕಾರ್ಪಣ್ಯಗಳ ನಡುವೆಯೂ ನಟನೆಯ ಮೂಲಕ ಜಗತ್ತನ್ನು ನಿಬ್ಬೆರಗಾಗಿಸಿದ ಅತ್ಯಂತ ಶ್ರೇಷ್ಠ ಕಲಾವಿದ, ನಟನೆಯಲ್ಲಿ ಮಾತು ಇಲ್ಲದಿದ್ದರೂ ಭಾವನೆಗಳಿಗೆ ಜೀವ ತುಂಬಿದ ನಟ, ಅತ್ಯಂತ ಬಡತನದಲ್ಲಿ ಅರಳಿದ ಪ್ರತಿಭೆ ಜಗತ್ತಿಗೆ ಮಾದರಿಯಾಗಿದ್ದಾರೆ ಎಂದರು.ಸಹಾಯಕ ಕುಲಸಚಿವರಾದ ಶಹಜಹಾನ್ ಮುದಕವಿ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಂಥಪಾಲಕರಾದ ಡಾ.ರಾಜಶೇಖರ ಕುಂಬಾರ, ಸಹಾಯಕ ಪ್ರಾಧ್ಯಾಪಕರಾದ ಡಾ. ಚಂದ್ರಪ್ಪ ಸೊಬಟಿ, ಡಾ. ಅರುಣಾಬಾಬು ಅಂಗಡಿ, ಸಹಾಯಕ ಸಂಶೋಧನಾಧಿಕಾರಿ ಡಾ. ಮಲ್ಲಿಕಾರ್ಜುನ ಮಾನ್ಪಡೆ, ಸಹಾಯಕ ದಾಖಲೀಕರಣ ಅಧಿಕಾರಿ ಡಾ. ಗೇಮಸಿಂಗ್ ರಾಠೋಡ, ಲೆಕ್ಕ ಸಹಾಯಕ ರೇಣುಕಪ್ಪ ಸುಗ್ಗಿ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು ಪಾಲ್ಗೊಂಡಿದ್ದರು.