- ಜಗದ್ಗುರುಗಳಿಂದ ಶಾರದಾಂಬೆಗೆ ನವರಾತ್ರಿ ವಿಶೇಷ ಪೂಜೆ । ಮಳೆಯಲ್ಲೂ ಶೃಂಗೇರಿಯಲ್ಲಿ ಭಕ್ತರ ದಂಡು । ಸರ್ವಾಭರಣ ಭೂಷಿತಳಾಗಿ
ಕನ್ನಡಪ್ರಭ ವಾರ್ತೆ,ಶೃಂಗೇರಿಶ್ರೀ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಉತ್ಸವ ನಿಮಿತ್ತ ಸತತವಾಗಿ ಸುರಿಯುತ್ತಿರುವ ಮಳೆ ನಡುವೆಯೂ ಭಕ್ತರು ಶೃಂಗೇರಿಗೆ ಆಗಮಿಸಿ ದೇವಿ ದರ್ಶನ ಪಡೆಯುತ್ತಾ ಧಾರ್ಮಿಕ , ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮೆರುಗು ತಂದುಕೊಟ್ಟಿದೆ. ವಿಶಿಷ್ಟ ಅಲಂಕಾರದಲ್ಲಿ ನವರಾತ್ರಿ ಶಕ್ತಿ ಸ್ವರೂಪಿಣಿಯಾಗಿ ದೇವಿ ಎಲ್ಲರ ಕಣ್ತುಂಬುತ್ತಿದ್ದಾಳೆ.
ಶೃಂಗೇರಿ ಪೀಠದ ಅಧಿದೇವತೆ ಶಾರದೆ ಹಂಸವಾಹಿನಿ, ಮಾಹೇಶ್ವರಿ, ಕೌಮಾರಿ,ವೈಷ್ಣವಿ,ಇಂದ್ರಾಣಿ ಅಲಂಕಾರದಲ್ಲಿ ಭಕ್ತರ ಮನಸೆಳೆದು ಏಳನೇಯ ದಿನವಾದ ಭಾನುವಾರ ಸರ್ವಾಭರಣ ಭೂಷಿತಳಾಗಿ ಮೋಹಿನಿ ಅಲಂಕಾರದಲ್ಲಿ ಅನುಗ್ರಹಿಸಿದಳು. ಕೈಯಲ್ಲಿ ಅಮೃತ ಕಲಶ ಹಿಡಿದು ಮೋಹಕವಾದ ರೂಪ ಲಾವಣ್ಯಗಳಿಂದ ದುಷ್ಟರು, ಕ್ರೂರಿಗಳಾದ ರಾಕ್ಷಸರನ್ನು ಮೋಹಗೊಳಿಸಿ ದೇವತೆಗಳಿಗೆ ಅಮೃತ ಲಭಿಸುವಂತೆ ಮಾಡುದ ಮೋಹಿನಿ ಅಲಂಕಾರದಲ್ಲಿ ಶಾರದೆ ಕಂಗೊಳಿಸಿದಳು.ಶಾರದೆಗೆ ಬಂಗಾರ, ಬೆಳ್ಳಿ, ವಜ್ರಗಳು ಸೇರಿದಂತೆ ಸಕಲಾ ಭರಣಗಳಿಂದ ಅಲಂಕರಿಸಲಾಗಿತ್ತು. 600 ವರ್ಷಗಳಿಂದ ದೇಶ ವಿದೇಶಗಳ ಸಂಸ್ಥಾನಗಳ ರಾಜಮಹಾರಾಜರು ಸಮರ್ಪಿಸಿದ್ದ ಹಾಗೂ ಪೀಠದ ಖಜಾನೆಯನ ಸಕಲ ಆಭರಣಗಳನ್ನು ತೊಡಿಸಿ ಅಲಂಕರಿಸಲಾಗಿತ್ತು.
ಲಲಿತ ಸಹಸ್ರ ನಾಮವಿರುವ ಸ್ವರ್ಣ ಸಹಸ್ರನಾಮಮಾಲೆ, ಲಲಿತಾ ತ್ರಿಶತಿ ಸ್ವರ್ಣಮಾಲೆ, ಮೈಸೂರು ರಾಜಲಾಂಛನ ಗಂಡ ಬೇರುಂಡ ಪದಕದ ಏಳುಸುತ್ತಿನ ಮುತ್ತಿನ ಹಾರ, ವಜ್ರ ರತ್ನಗಳಿಂದ ಮಕರ ರೂಪದಲ್ಲಿ ಮಾಡಲಾದ ಮಕರ ಕಂಠಿ, ಜಮಖಂಡಿ ಮಹಾರಾಜ ಸಮರ್ಪಿಸಿದ್ದ ಜಮಖಂಡಿ ಕಂಠಿ, ಬಿದಿಗೆ ಚಂದ್ರಮನ ಹೊಳಹಿನೊಂದಿಗೆ ಶೋಭಿಸುವ ವಜ್ರ ಕಿರೀಟ, ಚಿನ್ಮುದ್ರೆಯ ಶುಖಾಭಾಷಿಣಿ, ಮುಕುಟದಲ್ಲಿ ಹಸಿರುಗೋಲಿಯ ಕಲಾತ್ಮಕ ವಂಕಿ, ವಜ್ರ ಖಚಿತ ಕೈಕಡಗ, ಚಿನ್ನ ಪಟ್ಟಿಕೆ ಹೊಂದಿರುವ ವಜ್ರ ಕಂಪಿನ ನಾಗರ ಜಡೆ ಜಲ್ಲಿ, ಅಪರೂಪದ ಪಚ್ಚೆ ಹವಳದ ಪಂಚಪಾತ್ರೆ, ಅಪರೂಪದ ನಾಣ್ಯಗಳದ್ದೆ ಸರ, ವಜ್ರದ ತಾಟಂಕಿ ವಜ್ರ ಭುಜಕೀರ್ತಿ, ಚತುರ್ಭುಜಗಳಿಗೆ ವಜ್ರಕವಚ, ವಿವಿಧ ಸುತ್ತಿನ ಮುತ್ತಿನ ಮಾಲೆಗಳು, ಹಂಸಬಿಲ್ಲೆ, ಪುಸ್ತಕ ಹಸ್ತ, ಅಕ್ಷಯ ಹಸ್ತ, ಕಲಶ ಹಸ್ತ ಹೀಗೆ ಸಕಲ ಆಭರಣಗಳನ್ನು ತೊಡಿಸಲಾಗಿತ್ತು.ಬೆಳಿಗ್ಗೆ ಜಗದ್ಗುರು ಶಾರದಾಂಬೆಗೆ ನವರಾತ್ರಿ ವಿಶೇಷ ಪೂಜೆ, ಮಹಾಮಂಗಳಾರತಿ ನೆರವೇರಿಸಿದರು. ಶಾರದಾ ದೇವಿ ಮೂರ್ತಿಯನ್ನು ಸ್ವರ್ಣರಥದಲ್ಲಿ ಕೂರಿಸಿ ದೇವಾಲಯದ ಪ್ರಾಂಗಣದಲ್ಲಿ ಮೂರುಸುತ್ತು ಪ್ರದಕ್ಷಿಣೆ ಹಾಕಲಾಯಿತು. ದಿಂಡೀ ದೀಪಾರಾಧನೆ ನಡೆಯಿತು. ಜಗದ್ಗುರುಗಳು ನವಾರಾತ್ರಿ ಅಂಗವಾಗಿ ತುಂಗಾನದಿಯಲ್ಲಿ ಗಂಗಾಪೂಜೆ ನೆರವೇರಿಸಿದರು. ಶ್ರೀ ಶಾರದಾಂಬಾ ದೇವಾಲಯ ಸಹಿತ ಶ್ರೀ ಶಂಕರಾಚಾರ್ಯ,ಶ್ರೀ ತೋರಣಗಣಪತಿ,ಶ್ರೀ ವಿದ್ಯಾಶಂಕರ, ಶ್ರೀ ಸುಬ್ರಮಣ್ಯ,ಶ್ರೀ ಜನಾರ್ಧನ ಸ್ವಾಮಿ ದೇವಾಲಯಗಳಲ್ಲಿ ನವರಾತ್ರಿ ವಿಶೇಷ ಪೂಜೆ ನೆರವೇರಿತು.
ಜಗದ್ಗುರು ಶ್ರೀ ಶಾರದಾ ಚಂದ್ರಮೌಳೇಶ್ವರ, ಶ್ರೀ ಚಕ್ರಕ್ಕೆ ನವಾರಣ ಪೂಜೆ ಸಲ್ಲಿಸಿದರು. ಎಂದಿನಂತೆ ಜಗದ್ಗುರುಗಳ ನವರಾತ್ರಿ ದರ್ಬಾರ್ ನಡೆಯಿತು. ನಾಲ್ಕು ವೇದಗಳ ಪಠಣ, ಸ್ವರ್ಣ ಸಿಂಹಾಸನ ಪೂಜೆ,ಅಷ್ಟಾವಧಾನ ಸೇವೆ ನಡೆಯಿತು. ರಾಜಬೀದಿ ಉತ್ಸವದಲ್ಲಿ ಬೇಗಾರು ಗ್ರಾಮಸ್ಥರೊಂದಿಗೆ ವಿವಿಧ ಸಂಘ ಸಂಸ್ಥೆಗಳು, ಭಜನಾ ತಂಡಗಳು, ಪಾಲ್ಗೊಂಡಿದ್ದವು,ಸಾಂಸ್ಕೃತಿಕ ಮಹೋತ್ಸವದಲ್ಲಿ ಬೆಂಗಳೂರಿನ ಹರಿನಾಮದ್ವಾರ್ ತಂಡದವರಿಂದ ಹಾಡುಗಾರಿಕೆ ನಡೆಯಿತು.ಮಳೆ ಅಬ್ಬರದಲ್ಲೂ ದೇವಿ ದರ್ಶನಕ್ಕೆ ಭಕ್ತರ ದಂಡು
ನವರಾತ್ರಿ ಆರಂಭದಿಂದಲೂ ಮಳೆ ಅಬ್ಬರಿಸುತ್ತಿದ್ದು ಭಾನುವಾರವೂ ಎಡಬಿಡದೆ ಮಳೆ ಸುರಿಯಿತು. ಮಳೆ ಲೆಕ್ಕಿಸದೇ ರಾಜ್ಯ, ದೇಶದ ವಿವಿಧ ಮೂಲೆಗಳಿಂದ ಜನಸಾಗರವೇ ಹರಿದು ಬರುತ್ತಿದೆ. ಶನಿವಾರ,ಭಾನುವಾರ ಸಾಲು ಸಾಲು ರಜೆಗಳು, ಮಕ್ಕಳಿಗೆ ದಸರೆ ರಜೆ ಇರುವುದರಿಂದ ಭಾನುವಾರ ಪಟ್ಟಣದಲ್ಲಿ ಜನಜಂಗುಳಿಯೇ ನೆರೆದಿತ್ತು.ಶ್ರೀಮಠದ ಆವರಣ, ಭೋಜನಶಾಲೆ, ನರಸಿಂಹವನ, ಭಾರತೀ ಬೀದಿ, ಬಸ್ ನಿಲ್ದಾಣ, ಗಾಂಧಿ ಮೈದಾನ, ವಸತಿ ಗೃಹಗಳು ಎಲ್ಲೆಡೆ ಜನಸಂದಣಿ ಕಂಡುಬಂದಿತು. ಎಲ್ಲೆಡೆ ವಾಹನ ದಟ್ಟಣೆ, ಗಾಂಧಿಮೈದಾನದಲ್ಲೂ ವಾಹನ ನಿಲುಗಡೆ ಜಾಗ ಸಾಲದಾಯಿತು.
-- ಬಾಕ್ಸ್--- ಅ. 3 ಕ್ಕೆ ಮಹಾ ರಥೋತ್ಸವ,
ಅ.3 ಕ್ಕೆ ಮಹಾರಥೋತ್ಸವ, ಅಡ್ಡಪಲ್ಲಕ್ಕಿ ಉತ್ಸವ-ಶಾರದೆಗೆ ಸೋಮವಾರ ವೀಣಾ ಶಾರದಾಲಂಕಾರ, ಮಂಗಳವಾರ ರಾಜ ರಾಜೇಶ್ವರಿ ಅಲಂಕಾರ, ಬುಧವಾರ ಚಾಮುಂಡಿ ಅಲಂಕಾರ, ಮಹಾನವಮಿಗೆ ಗಜಾಶ್ವ ಪೂಜೆ, ಗುರುವಾರ ಗಜಲಕ್ಷ್ಮಿ ಅಲಂಕಾರ, ವಿಜಯ ದಶಮಿ, ವಿಜಯೋತ್ಸವ ಶಮೀಪೂಜೆ, ನವರಾತ್ರಿ ಕೊನೆ ದಿನವಾದ ಅ. 3 ರ ಶುಕ್ರವಾರ ಶ್ರೀ ಶಾರದಾಂಬಾ ಮಹಾರಥೋತ್ಸವ, ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ.28 ಶ್ರೀ ಚಿತ್ರ 1-
ಶೃಂಗೇರಿ ಶಾರದಾಂಬೆ ಭಾನುವಾರ ಸರ್ವಾಭರಣ ಭೂಷಿತಳಾಗಿ ಮೋಹಿನಿಯಲಂಕಾರದಲ್ಲಿ ಕಂಗೊಳಿಸಿದಳು.28 ಶ್ರೀ ಚಿತ್ರ 2-
ಶೃಂಗೇರಿ ಶ್ರೀ ಶಾರದಾಂಬಾ ದೇವಾಲಯ ಪ್ರಾಂಗಣದಲ್ಲಿ ನವರಾತ್ರಿಯ ಅಂಗವಾಗಿ ಶ್ರೀ ಶಾರದಾಂಬಾ ಬಂಗಾರದ ದಿಂಡೀ ಉತ್ಸವ ನಡೆಯಿತು.