ಕುಮಟಾ: ಸತ್ಯದ ಬೆಳಕಿನೆಡೆಗೆ ಕರೆದೊಯ್ಯುವ ದೊಡ್ಡ ಶಕ್ತಿಯೇ ಗುರು ಎಂದು ಕನ್ಯಾಡಿ ಶ್ರೀರಾಮಕ್ಷೇತ್ರದ ಪೀಠಾಧೀಶ ಮಹಾಮಂಡಲೇಶ್ವರ ಬ್ರಹ್ಮಾನಂದ ಸರಸ್ವತಿ ಮಹಾರಾಜರು ನುಡಿದರು.
ಕೋನಳ್ಳಿಯಲ್ಲಿ ವನದುರ್ಗಾ ಮಂದಿರ ಪರಿಸರದಲ್ಲಿ ಗುರುವಾರ ಆಯೋಜಿಸಿದ್ದ ಚಾತುರ್ಮಾಸ್ಯ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿ ಆಶೀರ್ವಚನ ನೀಡಿದರು. ನಿರಂತರ ಭಗವಂತನ ಆರಾಧನೆ ಮಾಡಬೇಕು. ಪ್ರತಿಯೊಬ್ಬರಲ್ಲೂ ಪವಿತ್ರತೆ ಅಂತಸ್ಥವಾಗಿದೆ, ಅದಕ್ಕೆ ಕವಿದ ಮೋಡವನ್ನು ಕರಗಿಸಲು ಸಾತ್ವಿಕತೆ ಬೇಕು. ನಮ್ಮ ಆತ್ಮವನ್ನು ಉದ್ಧರಿಸುವವರು ನಾವೇ ಎಂದರು.ಈವರೆಗಿನ ಚಾತುರ್ಮಾಸ್ಯ ಸಂತೃಪ್ತಿಯನ್ನು ಕೊಟ್ಟಿದೆ. ನಮ್ಮಲ್ಲಿ ಧರ್ಮ ಇದೆ, ಆದರೆ ಜಾಗೃತಿ ಮಾಡಬೇಕಾಗಿದೆ. ನಾರಾಯಣ ಗುರು ಹೇಳಿದಂತೆ ಸಾಮಾಜಿಕ ಸಂಘಟನೆ ಸುಭದ್ರವಾಗಬೇಕಾದರೆ ಧಾರ್ಮಿಕ ಪೋಷಣೆ ಬೇಕು. ಪ್ರತಿಯೊಬ್ಬರೂ ತತ್ವ ಚಿಂತಕರಾಗಿ, ಸಾತ್ವಿಕರಾಗಿ, ಸಂಸ್ಕಾರವಂತರಾದರೆ ಗುರುತತ್ವವೇ ನಿಮಗೆ ದಾರಿ ತೋರಿಸಲಿದೆ. ಯಾರೊಬ್ಬರೂ ಏಕಾಂಗಿಯಾಗಿ ಕೆಲಸ ಮಾಡಲಾಗದು. ಒಬ್ಬರಿಗೊಬ್ಬರು ಸಹಸಂಬಂಧವಾಗಿರಬೇಕು ಎಂದರು.
ಸಚಿವ ಮಧು ಬಂಗಾರಪ್ಪ ಮಾತನಾಡಿ, ನಾರಾಯಣ ಗುರುಗಳ ಒಂದೇ ದೇವರು, ಒಂದು ಮತದ ತತ್ವವು ಕೋನಳ್ಳಿ ಚಾತುರ್ಮಾಸ್ಯದಲ್ಲಿ ಸಾಕಾರವಾಗಿದೆ. ಎಲ್ಲ ಸಮಾಜಗಳು ಸೇರಿದಾಗ ಉತ್ತಮ ಚಿಂತನೆಗಳು ಹುಟ್ಟುತ್ತವೆ. ಸಮಾಜ ಸಂಘಟನೆ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಿ. ಮಕ್ಕಳಿಗೆ ಶಿಕ್ಷಣ ಕೊಟ್ಟರೆ ಬದುಕು ಸಾರ್ಥಕವಾಗುತ್ತದೆ. ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಿ ಎಂದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಮಾತನಾಡಿ, ಗುರುವಿನಿಂದ ಶಿಷ್ಯರಿಗೆ ಹಲವಾರು ನಿರೀಕ್ಷೆಗಳಿರುತ್ತವೆ. ಆದರೆ ಗುರುವಿಗೆ ಶಿಷ್ಯರಿಂದ ಆಗಬೇಕಾದ್ದೇನೂ ಇಲ್ಲ. ಆದರೂ ಗುರುವಿನ ಕಾಯಕವೆಲ್ಲವೂ ಶಿಷ್ಯರಿಗಾಗಿ. ಭಕ್ತಿ ಹಾಗೂ ಧರ್ಮಕ್ಕಾಗಿ ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತಿರುವ ಬ್ರಹ್ಮಾನಂದ ಶ್ರೀಗಳ ನೇತೃತ್ವದಲ್ಲಿ ಕೋನಳ್ಳಿಯಲ್ಲಿ ಪುಣ್ಯದ ಕೆಲಸಗಳು ನಡೆಯುತ್ತಿವೆ ಎಂದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ, ಕೋನಳ್ಳಿಯಲ್ಲಿ ಚಾತುರ್ಮಾಸ ವ್ರತಾಚರಿಸುವ ಶ್ರೀಗಳ ಸಂಕಲ್ಪ ನಿಜ ಅರ್ಥದಲ್ಲಿ ಯಶಸ್ವಿಯಾಗಿದೆ. ಚಿಕ್ಕ ಗ್ರಾಮದಲ್ಲಿ ಚಾತುರ್ಮಾಸ್ಯ ನಡೆಯುತ್ತಿದ್ದರೂ ಇಡೀ ಸಮಾಜ ಎದ್ದು ನಿಂತು ಸಂಘಟಿತವಾಗಿರುವುದರ ದ್ಯೋತಕವೇ ಶ್ರೀಗಳ ಕೋನಳ್ಳಿ ಚಾತುರ್ಮಾಸ್ಯ ಎಂದರು.ಶಾಸಕರಾದ ಭೀಮಣ್ಣ ನಾಯ್ಕ, ಹರೀಶ ಪೂಂಜಾ, ಮಾಜಿ ಸಚಿವ ಶಿವಾನಂದ ನಾಯ್ಕ ಭಟ್ಕಳ, ಮಾಜಿ ಶಾಸಕ ಸುನಿಲ ನಾಯ್ಕ, ಉದ್ಯಮಿ ಮುರಳೀಧರ ಪ್ರಭು, ಸೂರಜ ನಾಯ್ಕ ಮಾತನಾಡಿದರು.
ಆರ್ಯ ಈಡಿಗ ನಾಮಧಾರಿ ಸಂಘದ ತಾಲೂಕಾಧ್ಯಕ್ಷ ಮಂಜುನಾಥ ಆರ್.ನಾಯ್ಕ, ನವೀನ ಪ್ರಕಾಶ ಬೆಳ್ತಂಗಡಿ, ಮಾಜಿ ಜಿಪಂ ಸದಸ್ಯ ರತ್ನಾಕರ ನಾಯ್ಕ, ಮಂಜುನಾಥ ಎಲ್ ನಾಯ್ಕ, ಗೋವಿಂದ ಪೂಜಾರಿ, ಪ್ರಶಾಂತ ನಾಯ್ಕ, ರಾಮಕ್ಷೇತ್ರ ಸಂಚಾಲಕ ಆಟೋ ಗಂಗಾಧರ, ಟ್ರಸ್ಟಿ ಚಿತ್ತರಂಜನ ಇತರರು ವೇದಿಕೆಯಲ್ಲಿದ್ದರು.ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಎಚ್.ಆರ್.ನಾಯ್ಕ ದಂಪತಿ ಬ್ರಹ್ಮಾನಂದ ಶ್ರೀಗಳ ಪಾದಪೂಜೆ ನೆರವೇರಿಸಿದರು. ಲೋಕೇಶ ಸಂಗಡಿಗಳು ವೇದಘೋಷಗೈದರು. ಸುಧೀಶ ನಾಯ್ಕ ಸ್ವಾಗತಿಸಿದರು. ಎನ್.ಆರ್. ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಮಂಜುನಾಥ ನಾಯ್ಕ ನಿರೂಪಿಸಿದರು. ಕೋನಳ್ಳಿಯ ಚಾತುರ್ಮಾಸ್ಯ ತಾಣಕ್ಕೆ ಆಗಮಿಸುವುದಕ್ಕೂ ಮುನ್ನ ಬ್ರಹ್ಮಾನಂದ ಶ್ರೀಗಳು ಕುಮಟಾದ ನಾಮಧಾರಿ ಸಭಾಭವನದ ವೆಂಕಟೇಶ್ವರ ಮಂದಿರದಲ್ಲಿ ಪೂಜೆ ಸಲ್ಲಿಸಿದರು.
ಬಳಿಕ ಶ್ರೀಗಳನ್ನು ಭವ್ಯ ರಥದಲ್ಲಿ ಆಸೀನಗೊಳಿಸಿ ಕಾರು ಹಾಗೂ ಬೈಕ್ ರ‍್ಯಾಲಿಯೊಂದಿಗೆ ಕೋನಳ್ಳಿ ವನದುರ್ಗಾ ಮಂದಿರಕ್ಕೆ ಕರೆತರಲಾಯಿತು.