ಪುತ್ತೂರು: ಸುಳ್ಯ ತಾಲೂಕಿನ ಸುಳ್ಯ ಕಸಬಾ ದಕ್ಷಿಣ ಬೀರಮಂಗಲ ನಿವಾಸಿ ಮಹಿಳೆಯೋರ್ವರಿಗೆ ಪುತ್ತೂರು ಶಾಸಕ ಅಶೋಕ್ ರೈ ಅವರ ಹೆಸರಿನಲ್ಲಿ ವಂಚನೆ ಮಾಡಿದ್ದು, ಶಾಸಕ ಅಶೋಕ್ ರೈ ಮಹಿಳೆ ಕಳೆದುಕೊಂಡ ಮೊತ್ತವನ್ನು ಪಾವತಿಸಿ ಮಾನವೀಯತೆ ಮೆರೆದಿದ್ದಾರೆ.ಸುಳ್ಯ ಕಸಬಾ ದಕ್ಷಿಣ ಬೀರಮಂಗಲ ನಿವಾಸಿ ಗಣೇಶ್ ಅವರ ಪತ್ನಿ ಪುಷ್ಪಾವತಿ ಹಣ ಕಳೆದುಕೊಂಡ ಗೃಹಿಣಿ. ಪುಷ್ಪಾವತಿ ಪತಿ ತೀವ್ರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇವರ ಕಷ್ಟವನ್ನು ಕಂಡು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೂ ಬಿತ್ತರವಾಗಿತ್ತು. ಈ ಸುದ್ದಿಯನ್ನು ಗಮನಿಸಿದ್ದ ಹಲವು ದಾನಿಗಳು ಪುಷ್ಪಾವತಿ ಖಾತೆಗೆ ಹಣ ಕಳುಹಿಸಿದ್ದರು. ಒಟ್ಟು ೨೨,೫೦೦ ಹಣ ಜಮೆಯಾಗಿತ್ತು. ಜು.೨೭ ರಂದು ಸಂಜೆ ವೇಳೆ ಅನಾಮಿಕ ಕರೆಯೊಂದು ಬಂದಿದೆ. ಕರೆಯನ್ನು ಸ್ವೀಕರಿಸಿದ ಪುಷ್ಪಾವತಿಯವರಲ್ಲಿ ನಿಮಗೆ ಪುತ್ತೂರು ಶಾಸಕ ಅಶೋಕ್ ರೈ ಅವರು ೩ ಲಕ್ಷ ಹಣ ನೀಡುವುದಾಗಿ ಹೇಳಿದ್ದಾರೆ ಹಣ ಕಳುಹಿಸಬೇಕಾದರೆ ನೀವು ೨೫ ಸಾವಿರ ರೂ ಟ್ಯಾಕ್ಸ್ ಮೊತ್ತವನ್ನು ಪಾವತಿ ಮಾಡಬೇಕು ಎಂದು ಹೇಳಿದ್ದ.ಇದನ್ನು ನಂಬಿದ ಮಹಿಳೆ ತನ್ನ ಖಾತೆಯಲ್ಲಿದ್ದ ೨೨೫೦೦ ರೂಪಾಯಿ ಯನ್ನು ಕರೆ ಮಾಡಿದ್ದ ವ್ಯಕ್ತಿಗೆ ಫೋನ್ ಪೇ ಮಾಡಿದ್ದಾರೆ .ಇದಾದ ಬಳಿಕ ಕರೆ ಮಾಡಿದಾಗ ಆ ನಂಬರ್ ಸ್ವಿಚ್ ಆಫ್ ಆಗಿತ್ತು. ಈ ಬಗ್ಗೆ ಪುಷ್ಪಾವತಿಯವರು ಸುಳ್ಯ ನಗರಠಾಣೆಯಲ್ಲಿ ಕೇಸು ದಾಖಲಿಸಿದ್ದರು.
ತನ್ನ ಹೆಸರು ಹೇಳಿ ಮಹಿಳೆಗೆ ವಂಚನೆ ಮಾಡಿದ ವಿಷಯ ತಿಳಿದು. ಓರ್ವ ರೋಗಿಯ ಖಾತೆಗೆ ಬಂದ ಹಣವನ್ನು ಈ ರೀತಿಯಾಗಿ ಸುಳ್ಳು ಹೇಳಿ ವಂಚನೆ ಮಾಡಿದ್ದು ದೇವರು ಮೆಚ್ಚದ ಕೆಲಸವಾಗಿದೆ ಎಂದು ಹೇಳಿ ವರದಿ ಮಾಡಿದ್ದ ಪತ್ರಕರ್ತಗೆ ಕರೆ ಮಾಡಿ ನನ್ನ ಹೆಸರು ಹೇಳಿದ ಕಾರಣ, ನನ್ನ ಮೇಲಿನ ಗೌರವದಿಂದ ಮಹಿಳೆ ಹಣ ಕಳಿಸಿದ್ದಾರೆ, ಮಹಿಳೆ ಕಳೆದುಕೊಂಡ ಮೊತ್ತವನ್ನು ನಾನು ನೀಡುವುದಾಗಿ ತಿಳಿಸಿದ್ದರು. ಬಳಿಕ ಶಾಸಕರು ಮಹಿಳೆ ಕಳೆದು ಕೊಂಡ ಮೊತ್ತ ೨೨,೫೦೦ ಕ್ಕೆ ಹೆಚ್ಚುವರಿಯಾಗಿ ೭೫೦೦ ನೀಡಿ ಒಟ್ಟು ೩೦ ಸಾವಿರ ರು. ಖಾತೆಗೆ ಜಮೆ ಮಾಡುವುದಾಗಿ ತಿಳಿಸಿ ಮಹಿಳೆಗೆ ಸಾಂತ್ವನ ಹೇಳಿದ್ದಾರೆ.