ಕುಶಾಲನಗರ: ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾಯರ ಪ್ರತಿಮೆ ನಿರ್ಮಾಣ ಸಂಬಂಧ ಆ. 22ರಂದು ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ.
ಆ. 22ರಂದು ರಾಯರ ಪುಣ್ಯಸ್ಮರಣೆ ದಿನವಾಗಿದ್ದು, ಅಂದು ಕುಶಾಲನಗರ ಪುರಸಭೆ ಆವರಣದಲ್ಲಿ ನಿರ್ಮಿಸಲುದ್ದೇಶಿಸಿರುವ ಪ್ರತಿಮೆಯ ರೂಪುರೇಷೆಗಳ ಬಗ್ಗೆ ಇಂಜಿನಿಯರ್ ಅರ್ಬಸ್ ಅಹಮದ್ ಅವರು ಸಮಗ್ರ ಮಾಹಿತಿ ಒದಗಿಸಿದರು.
ಪ್ರತಿಮೆ ನಿರ್ಮಾಣಕ್ಕೆ ಅಗತ್ಯವಿರುವ ವೆಚ್ಚದ ಬಗ್ಗೆ ಚರ್ಚಿಸಲಾಗಿದ್ದು, ರಾಯರ ಪುತ್ರ ಹಾಗೂ ಮಾಜಿ ಸಚಿವ ದಿನೇಶ್ ಗುಂಡೂರಾವ್ ಮತ್ತು ಕ್ಷೇತ್ರ ಶಾಸಕ ಡಾ. ಮಂತರ್ ಗೌಡ ಸಹಕಾರ ನೀಡುವ ಬಗ್ಗೆ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ. ಪಿ. ಶಶಿಧರ್ ಮಾಹಿತಿ ನೀಡಿದರು. ಉಳಿದಂತೆ ಸ್ಥಳೀಯ ಸಂಘ ಸಂಸ್ಥೆಗಳ ಮತ್ತು ರಾಯರ ಅಭಿಮಾನಿಗಳ ಮೂಲಕ ದೇಣಿಗೆ ಸಂಗ್ರಹದ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಪ್ರತಿಮೆ ನಿರ್ಮಾಣ ಸಮಿತಿ ಗೌರವಾಧ್ಯಕ್ಷರಾಗಿ ಕ್ಷೇತ್ರದ ಶಾಸಕರು ಮತ್ತು ಸಂಚಾಲಕರಾಗಿ ಪುರಸಭೆ ಮುಖ್ಯ ಅಧಿಕಾರಿ ಟಿ.ಎಸ್. ಗಿರೀಶ್ ನೇತೃತ್ವದಲ್ಲಿ ಮುಂದಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಭೆ ಒಮ್ಮತದಿಂದ ನಿರ್ಣಯ ಕೈಗೊಳ್ಳಲಾಯಿತು.ರಾಯರ ಒಡನಾಡಿಗಳಾದ ನಿವೃತ್ತ ಶಿಕ್ಷಕರು ಎಂ.ಎಚ್. ನಜೀರ್ ಅಹ್ಮದ್ ರಾಯರೊಂದಿಗೆ ಅಂದಿನ ತಮ್ಮ ಒಡನಾಟದ ಬಗ್ಗೆ ತಿಳಿಸಿದರು. ಸಭೆಯಲ್ಲಿ ಪುರಸಭೆ ಮುಖ್ಯ ಅಧಿಕಾರಿ ಟಿ.ಎಸ್. ಗಿರೀಶ್, ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಗುಂಡೂರಾಯರ ಆಪ್ತ ಸಹಾಯಕರಾಗಿ ಹಲವು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ ಎಂ.ಎಚ್. ಫಜಲುಲ್ಲಾ, ಕುಶಾಲನಗರ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಪ್ರಮುಖರು, ರಾಯರ ಅಭಿಮಾನಿಗಳು, ಪುರಸಭೆ ಹಿರಿಯ ಆರೋಗ್ಯ ಅಧಿಕಾರಿ ಉದಯ ಕುಮಾರ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.