ಟಿಎಸ್‌ಎಸ್‌ಗೆ ಮೋಸ: ಆರೋಪಿಗಳ ವಿರುದ್ಧ ಕ್ರಮವಾಗಲಿ

KannadaprabhaNewsNetwork | Published : Jun 4, 2024 12:31 AM

ಸಾರಾಂಶ

ತೋಟಗಾರ್ಸ್ ಸೇಲ್ ಸೊಸೈಟಿಯಲ್ಲಿ ನೂರಾರು ಕೋಟಿ ರು. ಹಗರಣವಿದೆ ಎಂಬ ಬಹಿರಂಗ ಹೇಳಿಕೆಯನ್ನು ಆಧರಿಸಿ, ಕ್ರಮಕ್ಕೆ ಆಗ್ರಹಿಸುತ್ತೇವೆ.

ಶಿರಸಿ: ಅಡಕೆ ಬೆಳೆಗಾರರ ಜೀವನಾಡಿ ಸಂಸ್ಥೆಯಾದ ದಿ ತೋಟಗಾರ್ಸ್ ಸೇಲ್ ಸೊಸೈಟಿಗೆ ಮೋಸ ಮಾಡಿದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮವಾಗಲಿ. ಸುಖಾಸುಮ್ಮನೆ ಅವರ ಮೇಲೆ ಬಹಿರಂಗ ಹೇಳಿಕೆ ನೀಡುವುದನ್ನು ನಿಲ್ಲಿಸಲಿ ಎಂದು ಷೇರು ಸದಸ್ಯ ಶ್ರೀಪಾದ ಹೆಗಡೆ ಕಡವೆ ಆಗ್ರಹಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಎಸ್‌ಎಸ್ ಮೇಲೆ ಹಲವು ಆರೋಪ, ಪ್ರತ್ಯಾರೋಪ ಕೇಳಿಬರುತ್ತಿದೆ. ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಕಡವೆ ಶ್ರೀಪಾದ ಹೆಗಡೆ ಕುರಿತ ಇತಿಹಾಸ ತಿರುಚಿತ ಹೇಳಿಕೆ ಹೊರಬೀಳುತ್ತಿದೆ. ಕಳೆದ ೯ ತಿಂಗಳಿನಿಂದ ಅಧಿಕಾರದಲ್ಲಿರುವ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ನೇತೃತ್ವದ ಆಡಳಿತ ಮಂಡಳಿಯ ಮೇಲೆ ಷೇರು ಸದಸ್ಯರ ಬಹಳಷ್ಟು ನಿರೀಕ್ಷೆಯಿತ್ತು. ಹಿಂದೆ ಪಾರದರ್ಶಕ ಆಡಳಿತಕ್ಕೆ ಮೋಸ ಮಾಡಿ ವೈಯಕ್ತಿಕ ಹಿತ ಸಾಧನೆಗಾಗಿ ಸಂಸ್ಥೆಯಲ್ಲಿ ಗುರುತರ ಹಗರಣವಾಗಿದೆ ಎಂದು ಬಿಂಬಿಸುತ್ತಿದ್ದಾರೆ. ಸರ್ವಸಾಧಾರಣ ಸಭೆಯಲ್ಲಿ ಲೆಕ್ಕಪರಿಶೋಧನೆಯನ್ನು ಇಲಾಖೆ ವಹಿಸಿ ಎಂದು ಸದಸ್ಯರು ಒತ್ತಾಯ ಮಾಡಿದ್ದರು. ಆಗ ಸಂಸ್ಥೆಗೆ ಆರ್ಥಿಕ ನಷ್ಟ ಉಂಟಾಗುತ್ತದೆ ಎಂದು ಉತ್ತರ ನೀಡಿದ್ದರು. ಸಂಸ್ಥೆಗೆ ಮೋಸ ಮಾಡಿದವರ ವಿರುದ್ಧ ಕಠಿಣ ಶಿಕ್ಷೆಯಾಗಲಿ. ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದರೆ ಸಂಸ್ಥೆಯಲ್ಲಿ ನಡೆದ ಹಗರಣ ಬೆಳಕಿಗೆ ಬರುವುದಿಲ್ಲ. ಸಹಕಾರ ಇಲಾಖೆಯ ಮೂಲಕ ತನಿಖೆಗೆ ವಹಿಸಲಿ ಎಂದು ಒತ್ತಾಯಿಸಿದರು.

ತೋಟಗಾರ್ಸ್ ಸೇಲ್ ಸೊಸೈಟಿಯಲ್ಲಿ ನೂರಾರು ಕೋಟಿ ರೂ ಹಗರಣವಿದೆ ಎಂಬ ಬಹಿರಂಗ ಹೇಳಿಕೆಯನ್ನು ಆಧರಿಸಿ, ಕ್ರಮಕ್ಕೆ ಆಗ್ರಹಿಸುತ್ತೇವೆ. ಚುನಾವಣಾ ಪೂರ್ವದಿಂದಲೂ ಆರೋಪ ಮಾಡುತ್ತಿದ್ದು, ನಂತರದಲ್ಲಿ ಅಧ್ಯಕ್ಷರಾಗಿರುವ ಗೋಪಾಲಕೃಷ್ಣ ವೈದ್ಯರ ಹೇಳಿಕೆಯನ್ನು ಪ್ರಮುಖ ಸಾಕ್ಷಿಯಾಗಿ ಪರಿಗಣಿಸಿ, ಸಹಕಾರ ಕಾಯ್ದೆ ಅನುಸಾರ ಕಾನೂನು ಕ್ರಮ ಕೈಗೊಂಡು ನ್ಯಾಯ ದೊರಕಿಸಬೇಕು. ಒಂದೊಮ್ಮೆ ದೋಷಪೂರ್ಣ ಅಂಶಗಳು ಕಂಡುಬರದೇ ಇದ್ದಲ್ಲಿ ಗೋಪಾಲಕೃಷ್ಣ ವೈದ್ಯರ ಬಹಿರಂಗ ಹೇಳಿಕೆಯಿಂದ ಸಂಸ್ಥೆಗೆ ಆಗಿರುವ ಮಾನನಷ್ಟ ಪರಿಹಾರವಾಗಿ ₹೬೦೦ ಕೋಟಿ ಹಣವನ್ನು ಸಂಸ್ಥೆಗೆ ಭರಣ ಮಾಡಿಕೊಡಬೇಕಾಗಿ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಳ್ಳುತ್ತಿದ್ದೇವೆ. ಪ್ರತಿ ಷೇರು ಸದಸ್ಯರಿಂದ ಸಹಿ ಪಡೆದು ಸಹಾಯಕ ಆಯುಕ್ತರ ಮೂಲಕ ಕರ್ನಾಟಕ ರಾಜ್ಯ ಸಹಕಾರ ಸಂಘಗಳ ನಿಬಂಧಕರಿಗೆ ಕಳುಹಿಸುತ್ತೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ವಿನಾಯಕ ಭಟ್ಟ ಮತ್ತಿತರರು ಇದ್ದರು.

Share this article