ಗುಣಮಟ್ಟ ಪರಿಶೀಲಿಸಿ ವಸ್ತು ಖರೀದಿಸಿ

KannadaprabhaNewsNetwork | Published : Dec 29, 2023 1:31 AM

ಸಾರಾಂಶ

ಒಳ್ಳೆಯ ಗುಣಮಟ್ಟದ ವಸ್ತುಗಳನ್ನು ಖರೀದಿಸಬೇಕು; ಜಿಲ್ಲಾಧಿಕಾರಿ

ಕನ್ನಡಪ್ರಭ ವಾರ್ತೆ ಬಾಗಲಕೋಟೆಇಂದಿನ ಡಿಜಿಟಲೀಕರಣ ವ್ಯವಸ್ಥೆಯಲ್ಲಿ ಬಣ್ಣ, ರುಚಿಗಳಿಗೆ ಮರುಳಾಗದೇ ಒಳ್ಳೆಯ ಗುಣಮಟ್ಟದ ವಸ್ತುಗಳನ್ನು ಖರೀದಿಸಬೇಕೆಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಕರೆ ನೀಡಿದರು.

ಜಿಪಂ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಪಂ, ಆಹಾರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಾರ್ತಾ ಇಲಾಖೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನೋಡಲು ಒಳ್ಳೆಯ ಗುಣಮಟ್ಟದ ವಸ್ತುವಿನ ಹಾಗೆ ಕಂಡರೂ ನಮ್ಮ ನಿರೀಕ್ಷೆಗೆ ಅಜಗಜಾಂತರವಾಗಿ ಕಂಡುಬರುತ್ತದೆ ಎಂದರು.

ಗ್ರಾಹಕರಿಲ್ಲದೇ ವರ್ತಕರು ವ್ಯವಹಾರ ಮಾಡಲು ಸಾಧ್ಯವಿಲ್ಲ. ಆದರೆ ವರ್ತಕರು ಒಂದಲ್ಲ ಒಂದು ರೀತಿಯಲ್ಲಿ ಗ್ರಾಹಕರಿಗೆ ಅನ್ಯಾಯ ಮಾಡುತ್ತಿದ್ದು, ವ್ಯವಹರಿಸುವಾಗ ಎಚ್ಚರಿಕೆಯಿಂದ ಇರಬೇಕು. ನಾವು ಕೊಡುವ ಮೌಲ್ಯಕ್ಕೆ ತಕ್ಕ ವಸ್ತು ಆಗಿರಬೇಕು. ಬಣ್ಣ, ರುಚಿಗೆ ಮರುಳಾಗದೇ ಗುಣಮಟ್ಟದ ವಸ್ತು ಖರೀದಿಗೆ ಮುಂದಾಗಬೇಕು. ಮೋಸ ಹೋದಲ್ಲಿ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಬೇಕು. ಈ ಬಗ್ಗೆ ಜನರಲ್ಲಿ ಜಾಗ್ರತಿ ಮೂಡಿಸುವುದು ಅಗತ್ಯವಾಗಿದೆ ಎಂದರು.

ಜಿಪಂ ಸಿಇಒ ಶಶಿಧರ ಕುರೇರ ಮಾತನಾಡಿ, ಆನ್‌ಲೈನ್‌ ವ್ಯವಸ್ಥೆಯಲ್ಲಿ ಜನ ಸಾಕಷ್ಟು ಮೋಸ ಹೋಗುತ್ತಿದ್ದಾರೆ. ಮೊಬೈಲ್‌ನಲ್ಲಿ ವೈಯಕ್ತಿಕ ಮಾಹಿತಿ ನೀಡುವಂತೆ ಕರೆ ಬರುವುದು, ಹೆಚ್ಚಿನ ಬೆಲೆ ಇರುವ ವಸ್ತುಗಳನ್ನು ಅತ್ಯಂತ ಕಡಿಮೆ ಬೆಲೆಗೆ ನೀಡುತ್ತೇವೆ ಎಂದು ಮೋಸ ಮಾಡುತ್ತಿದ್ದು, ಈ ಬಗ್ಗೆ ಜನರು ಜಾಗೃತರಾಗಿರಬೇಕು. ನೀವು ಎಲ್ಲಿಯವರೆಗೆ ಜಾಗೃತರಾಗುವುದಿಲ್ಲವೋ ಅಲ್ಲಿಯವರೆಗೆ ಮೋಸ ಮಾಡುತ್ತಾ ಬರುತ್ತಾರೆ. ಈ ಬಗ್ಗೆ ಹೆಚ್ಚಿನ ಜಾಗೃತಿಯಿಂದಿರುವುದು ಅಗತ್ಯವಾಗಿದೆ ಎಂದರು.

ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಹಿರಿಯ ನ್ಯಾಯವಾದಿ ಎಸ್.ಎನ್.ಕರ್ಜಗಿ ಮಾತನಾಡಿ, ವಸ್ತುಗಳನ್ನು ಖರೀದಿಸುವ, ಸೇವೆಯನ್ನು ಪಡೆಯುವವರು ಗ್ರಾಹಕರಾಗುತ್ತಾರೆ. ಖರೀದಿ ಹಾಗೂ ಸೇವೆ ಪಡೆಯುವಲ್ಲಿ ದೋಷ ಕಂಡುಬಂದಲ್ಲಿ ಅವರ ವಿರುದ್ಧ ದೂರು ದಾಖಲಿಸಲು ಮುಂದಾಗಬೇಕು. ಈ ಹಿಂದೆ ವಸ್ತುವನ್ನು ಕೊಳ್ಳುವಲ್ಲಿ ಮೋಸ ಹೋದಲ್ಲಿ ಪ್ರತಿಪಾದಿಸಲು ಕಾನೂನು ಇರಲಿಲ್ಲ. ಆದರೆ, ಈಗ ಹಾಗಿಲ್ಲ. ಗ್ರಾಹಕರ ವೇದಿಕೆ ದೂರು ಸಲ್ಲಿಸಿ ಪರಿಹಾರ ಪಡೆಯಬಹುದಾಗಿದೆ ಎಂದರು.

ಇನ್ನೋರ್ವ ಉಪನ್ಯಾಸಕ ಪೊಲೀಸ್ ಇನ್ಸ್‌ಪೆಕ್ಟರ್‌ ನಿತೀನ್ ಕುಮಾರ ಮಾತನಾಡಿ, ಇಂದಿನ ಆಧುನಿಕ ವ್ಯವಸ್ಥೆಯಲ್ಲಿ ಒಬ್ಬರನ್ನು ಒಬ್ಬರು ನೋಡದೇ ವ್ಯವಹರಿಸುತ್ತಿದ್ದಾರೆ. ಅವರು ಮಾಡುವ ಮೋಸ, ವಂಚನೆ ಗೊತ್ತಾಗುವುದಿಲ್ಲ. ಇದರಿಂದ ಅನೇಕ ಫೇಕ್ ಕಂಪನಿಗಳು ಗ್ರಾಹಕರಿಗೆ ಮೋಸ ಮಾಡುತ್ತಾ ಇವೆ. ಈ ವ್ಯವಸ್ಥೆಯಿಂದ ಕೆಲವೊಂದು ಅನುಕೂಲವಾಗಿದ್ದರೆ, ಇನ್ನು ಕೆಲವು ದೋಷಪೂರಿತದಿಂದ ಕೂಡಿರುತ್ತವೆ. ದಿನದ 24 ಗಂಟೆಯಲ್ಲಿಯೂ ಸೇವೆ ಪಡೆಯುವ ಅವಕಾಶವಿದ್ದರೂ ವೈಯಕ್ತಿಕ ಮಾಹಿತಿ ಸೋರಿಕೆಯಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು. ಜಾಗೃತಿ ಕುರಿತು ಶಾಲಾ ಮಕ್ಕಳು ಕಿರು ನಾಟಕ ಪ್ರದರ್ಶಿಸಿದರು. ಪ್ರಾರಂಭದಲ್ಲಿ ಆಹಾರ ಇಲಾಖೆ ಜಂಟಿ ನಿರ್ದೇಶಕ ಚನಬಸಪ್ಪ ಕೊಡ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯ ಕಮಲಕಿಶೋರ ಜೋಶಿ, ಡಿಡಿಪಿಐ ಬಿ.ಕೆ.ನಂದನೂರ, ಡಿಡಿಪಿಯು ರಾಜಶೇಖರ ಪಟ್ಟಣಶೆಟ್ಟಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಪೂಜಾರ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಜಿಲ್ಲಾ ಅಂಕಿತ ಅಧಿಕಾರಿ ಎಸ್.ಕೆ.ಬಿರಾದರ, ತಾಲೂಕು ಅಧಿಕಾರಿ ಆರ್.ಎಂ.ಸಾಳಗುಂದಿ, ಆಹಾರ ಇಲಾಖೆಯ ಲೆಕ್ಕಾಧಿಕಾರಿ ಚೌದರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

--ಕೋಟ್‌

1986ರಲ್ಲಿ ಗ್ರಾಹಕರ ಹಿತರಕ್ಷಣಾ ಕಾಯ್ದೆ ಜಾರಿಗೆ ತಂದಾಗ ಆನ್ಲೈನ್ ಮಾರುಕಟ್ಟೆ ಇರಲಿಲ್ಲ. ಆಗ ನೇರ ಮಾರುಕಟ್ಟೆ ಇತ್ತು. ಇತ್ತೀಚಿನ ವರ್ಷಗಳಲ್ಲಿ ಆನ್ಲೈನ್ ಮಾರುಕಟ್ಟೆ ಬಂದಿರುವುದರಿಂದ ಕಾಯ್ದೆಯ ನೂನ್ಯತೆಯನ್ನು ಸರಿಪಡಿಸಿ 2019ರಲ್ಲಿ ಗ್ರಾಹರಕ ಸಂರಕ್ಷಣಾ ಕಾಯ್ದೆ ಜಾರಿಗೆ ತರಲಾಗಿದೆ. ಗ್ರಾಹಕರ ಮೋಸ ಹೋದಲ್ಲಿ ಖುದ್ದಾಗಿ ಆಯೋಗಕ್ಕೆ ದೂರು ಸಲ್ಲಿಸಬಹುದಾಗಿದೆ.

-ಡಿ.ವೈ.ಬಸಾಪೂರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ

--

ಬಾಕ್ಸ್

ಗ್ರಾಹಕರ ಜಾಗೃತಿ ಪ್ರಾತ್ಯಕ್ಷಿಕೆ

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಿಂದ ಆಹಾರ ಕಲಬರಕೆ ಕುರಿತು, ಕಾನೂನು ಮಾಪನ ಶಾಸ್ತ್ರ ಇಲಾಖೆಯಿಂದ ತೂಕ ಮತ್ತು ಅಳತೆ ಹಾಗೂ ಪೊಟ್ಟಣ ಸಾಮಗ್ರಿಗಳ ಪ್ರದರ್ಶನ, ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಲೈಸನ್ಸ್, ರಸ್ತೆ ನಿಯಮ, ಪೂನಂ ಗ್ಯಾಸ್ ಸೆಂಟರ್‌ ಅವರಿಂದ ಎಲ್.ಪಿ.ಜಿ ಸುರಕ್ಷತೆ ಬಗ್ಗೆ, ಲೀಡ್ ಬ್ಯಾಂಕ್‌ನಿಂದ ಬ್ಯಾಂಕ್ ಸೌಲಭ್ಯ, ಭಾರತೀಯ ಸಂಚಾರಿ ನಿಗಮದಿಂದ ದೂರ ಸಂಪರ್ಕ ಸೌಲಭ್ಯ ಹಾಗೂ ಕೆ.ಎಸ್.ಆರ್.ಟಿಸಿ ಅವರಿಂದ ಸಾರಿಗೆ ಸೌಲಭ್ಯಗಳ ಬಗ್ಗೆ ಜಾಗೃತಿಯ ಪ್ರಾತ್ಯಕ್ಷಿಕೆ ನಡೆಯಿತು.

Share this article