ದೇಶ ನಿರ್ಮಾಣಕ್ಕೆ ಕಾಂಗ್ರೆಸ್ ಕೊಡುಗೆ ಅಪಾರ- ಶಾಸಕ ರಾಘವೇಂದ್ರ ಹಿಟ್ನಾಳ

KannadaprabhaNewsNetwork | Updated : Dec 29 2023, 01:32 AM IST

ಸಾರಾಂಶ

ದೇಶಕ್ಕೆ ಕಾಂಗ್ರೆಸ್ ಅಪಾರ ಕೊಡುಗೆ ನೀಡಿದೆ. ಸ್ವಾತಂತ್ರ್ಯ ಸಂಗ್ರಾಮದಿಂದ ಹಿಡಿದು ರಾಜೀವ ಗಾಂಧಿ ಅವರ ವರೆಗೂ ದೇಶದ ಸಮಗ್ರ ವಿಕಾಸಕ್ಕಾಗಿ ಕಾಲಕ್ಕೆ ತಕ್ಕಂತೆ ಶ್ರಮಿಸಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಹುತೇಕ ಕಾಂಗ್ರೆಸಿಗರು ದೇಶಕ್ಕಾಗಿ ಪ್ರಾಣ ಕೊಟ್ಟಿದ್ದಾರೆ.

ಕೊಪ್ಪಳ: ಸ್ವಾತಂತ್ರ್ಯ ನಂತರ ದೇಶದ ನಿರ್ಮಾಣದಲ್ಲಿ ಕಾಂಗ್ರೆಸ್ ಕೊಡುಗೆ ಅಪಾರವಾಗಿದೆ. ಅತ್ಯಂತ ಕಡುಬಡತನದಲ್ಲಿ ಇದ್ದ ದೇಶವನ್ನು ಸಮೃದ್ಧವಾಗುವಂತೆ ಮಾಡಿದ ಹಿರಿಮೆ ನಮ್ಮ ಕಾಂಗ್ರೆಸ್‌ನದ್ದು ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ.

ನಗರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಕಾಂಗ್ರೆಸ್ 138ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದೇಶದ ಇತಿಹಾಸ ಕಂಡ ಪ್ರಮುಖ ರಾಜಕೀಯ ಪಕ್ಷ ಹಾಗೂ ಜನಪರತೆಯ ಆಧಾರದ ಮೇಲೆ ಎಲ್ಲ ವರ್ಗಗಳ ಏಳಿಗೆಗಾಗಿ ಶ್ರಮಿಸುತ್ತಾ ಸಮಾನ ಅವಕಾಶಗಳನ್ನು ಸೃಷ್ಟಿಸಿದ ಕಾಂಗ್ರೆಸ್ 138ನೇ ಸಂಸ್ಥಾಪನಾ ದಿನ ಆಚರಿಸಿಕೊಳ್ಳತ್ತಿರುವುದು ಹೆಮ್ಮೆಯ ಸಂಗತಿ. ಸ್ವಾತಂತ್ರ್ಯದ ನಂತರದಲ್ಲಿ ಅತ್ಯಂತ ಆರೋಗ್ಯಪೂರ್ಣವಾಗಿ ದೇಶವನ್ನು ಮುನ್ನಡೆಸಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲಬೇಕು ಎಂದು ಹೇಳಿದರು.

ದೇಶಕ್ಕೆ ಕಾಂಗ್ರೆಸ್ ಅಪಾರ ಕೊಡುಗೆ ನೀಡಿದೆ. ಸ್ವಾತಂತ್ರ್ಯ ಸಂಗ್ರಾಮದಿಂದ ಹಿಡಿದು ರಾಜೀವ ಗಾಂಧಿ ಅವರ ವರೆಗೂ ದೇಶದ ಸಮಗ್ರ ವಿಕಾಸಕ್ಕಾಗಿ ಕಾಲಕ್ಕೆ ತಕ್ಕಂತೆ ಶ್ರಮಿಸಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಹುತೇಕ ಕಾಂಗ್ರೆಸಿಗರು ದೇಶಕ್ಕಾಗಿ ಪ್ರಾಣ ಕೊಟ್ಟಿದ್ದಾರೆ. ಆಯಾ ಕಾಲಕ್ಕೆ ತಕ್ಕ ಬೇಡಿಕೆಯಂತೆ ಹೋರಾಟಗಳನ್ನು ಮಾಡಿ ರಾಜಕೀಯ ಮತ್ತು ಆರ್ಥಿಕ, ಸಾಮಾಜಿಕ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ. ಇದು ಕೆಲವೇ ಜನರ ಪಕ್ಷವಲ್ಲ. ಇದೊಂದು ದೇಶದ ಜನರೇ ನಡೆಸುತ್ತಿರುವ ಪಕ್ಷವಾಗಿದೆ. 70 ವರ್ಷಗಳ ತನ್ನ ಅಧಿಕಾರದ ಅವಧಿಯಲ್ಲಿ ಜನ ಸಮುದಾಯಗಳ ಸಮಾನ ಏಳಿಗೆಗಾಗಿ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿದ ಕಾಯ್ದೆಗಳು ಮತ್ತು ಯೋಜನೆಗಳು ಅಪಾರವಾಗಿತ್ತು. ಇನ್ನು 70 ವರ್ಷಗಳಲ್ಲಿ ಕಾಂಗ್ರೆಸ್ ಮಾಡಿದ ಕೆಲಸಗಳು ಬೆಟ್ಟದಷ್ಟು. ಸಮಾಜದಲ್ಲಿ ದ್ವೇಷ ಹರಡುವುದನ್ನು ತಡೆಯಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಸಮಾಜದಲ್ಲಿನ ದ್ವೇಷವನ್ನು ಕೊನೆಗಾಣಿಸಲು ನಾವು ಸಿದ್ಧರಿದ್ದೇವೆ. ದೇಶವು ಒಗ್ಗೂಡಿದಾಗ ಮಾತ್ರ ಅದು ಅಭಿವೃದ್ಧಿ ಹೊಂದುತ್ತದೆ, ಇಲ್ಲದಿದ್ದರೆ ಯಾವುದೇ ದೇಶವು ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದರು.

ಕೃಷ್ಣ ಇಟ್ಟಂಗಿ, ಕಾಟಾನ್ ಪಾಷಾ, ಕೃಷ್ಣ ರೆಡ್ಡಿ ಗಲಬಿ, ಹಿರಿಯ, ಗಾಳೆಪ್ಪ ಪೂಜಾರ, ಅಶೋಕ ಗೋರಂಟ್ಲಿ, ಸೈಯದ್ ಜುಲ್ಲು ಖಾದರಿ, ಶಿವರೆಡ್ಡಿ ಭೂಮಕ್ಕನವರ, ಕಿಶೋರಿ ಬೂದನೂರು, ಜ್ಯೋತಿ ಗೊಂಡಬಾಳ, ಸವಿತಾ ಗೋರಂಟ್ಲಿ, ಸೌಭಾಗ್ಯ ರೇಣುಕಾ ಪೂಜಾರ, ಸಲೀಂ ಅಳವಂಡಿ, ಮುತ್ತುರಾಜ ಕುಷ್ಟಗಿ, ಗುರುರಾಜ ಹಲಿಗೇರಿ, ಚಾಂದ್ ಪಾಶಾ, ಗಾಳೆಪ್ಪ ಪೂಜಾರ, ಮಲ್ಲು ಪೂಜಾರ ಇದ್ದರು.

Share this article