ನೀರಿನ ಮೂಲ ನಿರಂತರ ಪರೀಕ್ಷಿಸಿ; ಎಚ್ಚರ ವಹಿಸಿ

KannadaprabhaNewsNetwork | Published : May 23, 2024 1:09 AM

ಸಾರಾಂಶ

ನೀರಿನ ಮೂಲಗಳು, ಆಹಾರದ ತಯಾರಿಕೆಯ ಸ್ಥಳ ಮುಂತಾದವುಗಳನ್ನು ಪರಿಶೀಲಿಸಿ ನಿಗಾ ವಹಿಸುವ ಮೂಲಕ ವಾಂತಿ-ಭೇದಿ ಪ್ರಕರಣಗಳು ಉಂಟಾಗದಂತೆ ಕ್ರಮ ವಹಿಸಲಾಗಿದೆ.

ಬಳ್ಳಾರಿ: ಮಳೆಗಾಲ ಆರಂಭದ ಹಿನ್ನೆಲೆಯಲ್ಲಿ ಕುಡಿಯುವ ನೀರು ಕಲುಷಿತಗೊಳ್ಳುವ ಸಂಭವವಿದೆ. ಇದರಿಂದ ಉಂಟಾಗಬಹುದಾದ ವಾಂತಿ-ಭೇದಿ ಪ್ರಕರಣ ನಿಯಂತ್ರಣಕ್ಕಾಗಿ ನೀರಿನ ಮೂಲಗಳನ್ನು ನಿರಂತರವಾಗಿ ಪರೀಕ್ಷೆಗೊಳಪಡಿಸುವ ಮೂಲಕ ಯಾವುದೇ ರೀತಿಯ ಗಂಭೀರ ಪ್ರಕರಣಗಳು ಸಂಭವಿಸದಂತೆ ಎಚ್ಚರ ವಹಿಸಬೇಕು ಎಂದು ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಸೂಚಿಸಿದರು.

ನಗರದ ಜಿಪಂ ನಜೀರ್ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವಿವಿಧ ಇಲಾಖೆಗಳ ಜಂಟಿಯಾಗಿ ಏರ್ಪಡಿಸಿದ್ದ ಜಿಲ್ಲಾ ಆರೋಗ್ಯ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯೂ ಸೇರಿದಂತೆ ವಿವಿಧೆಡೆ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ನೀರಿನ ಎಲ್ಲ ಮೂಲಗಳನ್ನು ಸಕಾಲದಲ್ಲಿ ಗ್ರಾಮ ಪಂಚಾಯತ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಸಕಾಲದಲ್ಲಿ ನಿಯಮಾನುಸಾರ ಕ್ಲೋರಿನೇಷನ್ ಮಾಡಿಸಿ ನಿರಂತರವಾಗಿ ಪರೀಕ್ಷೆಗಳನ್ನು ಕೈಗೊಂಡು ಯಾವುದೇ ವಾಂತಿ-ಭೇದಿ ಪ್ರಕರಣಗಳು ಉಂಟಾಗದಂತೆ ಗ್ರಾಮ ಪಂಚಾಯತ್ ಒಳಗೊಂಡಂತೆ ಎಲ್ಲ ಸ್ಥಳೀಯ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ಕ್ರಮ ವಹಿಸಿ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೈ.ರಮೇಶ್ ಬಾಬು ಮಾತನಾಡಿ, ಜಿಲ್ಲೆಯಲ್ಲಿ ಇಲ್ಲಿಯವರೆಗೆ ಪ್ರಮುಖ ಜಾತ್ರೆಗಳು, ಉತ್ಸವಗಳಲ್ಲಿ ಜಿಲ್ಲಾ ಕಾಲರಾ ನಿಯಂತ್ರಣ ತಂಡವು ಸಕಾಲದಲ್ಲಿ ಉಪಸ್ಥಿತರಿದ್ದು, ನೀರಿನ ಮೂಲಗಳು, ಆಹಾರದ ತಯಾರಿಕೆಯ ಸ್ಥಳ ಮುಂತಾದವುಗಳನ್ನು ಪರಿಶೀಲಿಸಿ ನಿಗಾ ವಹಿಸುವ ಮೂಲಕ ವಾಂತಿ-ಭೇದಿ ಪ್ರಕರಣಗಳು ಉಂಟಾಗದಂತೆ ಕ್ರಮ ವಹಿಸಲಾಗಿದೆ ಎಂದು ಸಭೆಗೆ ತಿಳಿಸಿದರು.

ಇಲ್ಲಿಯವರೆಗೆ 4027 ನೀರಿನ ಮೂಲಗಳನ್ನು ಪರೀಕ್ಷಿಸಿದ್ದು, ಅಶುದ್ಧವೆಂದು ಕಂಡು ಬಂದ ನೀರಿನ ಮೂಲಗಳನ್ನು ಸಕಾಲದಲ್ಲಿ ಪರೀಕ್ಷೆಗೊಳಪಡಿಸಿ ನೀರು ಪೂರೈಕೆಗೆ ಸ್ಥಳೀಯ ಸಂಸ್ಥೆಗಳೊಂದಿಗೆ ಕೈಜೋಡಿಸಲಾಗಿದೆ ಎಂದು ತಿಳಿಸಿದರು.

ಕ್ಷಯರೋಗ ನಿಯಂತ್ರಣ ಕುರಿತು ಮಾತನಾಡಿ, ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಕ್ಷಯರೋಗ ಪರೀಕ್ಷೆ ಕೈಗೊಂಡ ನಂತರ ಶೇ.20ರಷ್ಟು ನೂತನ ಪ್ರಕರಣಗಳಲ್ಲಿ ಇಳಿಕೆಯಾಗಿರುವುದು ಆಶಾದಾಯಕವಾಗಿದೆ ಎಂದರು.

ಬಾಲ್ಯದಲ್ಲಿ ಕಾಡುವ ಮಾರಕ ರೋಗಗಳ ತಡೆಗೆ ಲಸಿಕೆಯನ್ನು ಮಕ್ಕಳಿಗೆ ಸಕಾಲದಲ್ಲಿ ಹಾಕಿಸಲಾಗುತ್ತಿದೆ. ಬಿಟ್ಟು ಹೋದ ಮಕ್ಕಳು ಲಸಿಕೆ ವಂಚಿತ ಮಕ್ಕಳನ್ನು ಗುರುತಿಸಿ ಲಸಿಕೆ ಹಾಕಲು ಮುತುವರ್ಜಿ ವಹಿಸಲಾಗಿದೆ. ಅದರಲ್ಲೂ ದಡಾರ-ರೂಬೆಲ್ಲ ಪ್ರಕರಣ ಕಂಡುಬರದಂತೆ ಆದ್ಯತೆ ನೀಡಬೇಕು. ಯಾವುದೇ ಮಗು ಲಸಿಕೆ ವಂಚಿತವಾಗದಂತೆ ಕ್ಷೇತ್ರ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಕ್ರಿಯಾ ಯೋಜನೆ ಹಮ್ಮಿಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಮಳೆಯ ಆರಂಭದ ಹಿನ್ನೆಲೆಯಲ್ಲಿ ಸೊಳ್ಳೆಯಿಂದ ಹರಡುವ ಕಾಯಿಲೆಗಳ ನಿಯಂತ್ರಣಕ್ಕೆ ಯಾವುದೇ ನ್ಯೂನತೆ ಉಂಟಾಗದಂತೆ ನೀರಿನ ಸಂಗ್ರಹಗಾರಗಳನ್ನು ಪ್ರತಿ ವಾರಕ್ಕೊಮ್ಮೆ ಸ್ವಚ್ಛಗೊಳಿಸಬೇಕು. ಸೊಳ್ಳೆ ಉತ್ಪತ್ತಿ ನಿಯಂತ್ರಣಕ್ಕೆ ಅಗತ್ಯವಿದ್ದಲ್ಲಿ ಸ್ಥಳೀಯ ಪಂಚಾಯತಿಗಳೊಂದಿಗೆ ಚರ್ಚಿಸಿ ವ್ಯಾಪಕ ಪ್ರಚಾರ ಕೈಗೊಳ್ಳಲು ಸೂಚಿಸಿದರು.

ಸಭೆಯಲ್ಲಿ ಕುಟುಂಬ ಕಲ್ಯಾಣ ಕಾರ್ಯಕ್ರಮ ಅಂಧತ್ವ ನಿಯಂತ್ರಣ ಕಾರ್ಯಕ್ರಮ, ನವಜಾತ ಶಿಶುಗಳ ಆರೈಕೆ ಕಾರ್ಯಕ್ರಮದ ಕುರಿತು ಚರ್ಚಿಸಲಾಯಿತು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ, ವಿಮ್ಸ್ ಅಧೀಕ್ಷಕ ಡಾ.ಚಿದಂಬರಂ, ವಿಶ್ವ ಆರೋಗ್ಯ ಸಂಸ್ಥೆಯ ಬಳ್ಳಾರಿ ಪ್ರತಿನಿಧಿ ಡಾ.ಆರ್.ಎಸ್. ಶ್ರೀಧರ್, ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಅಬ್ದುಲ್ಲಾ, ಡಾ.ಪೂರ್ಣಿಮಾ ಕಟ್ಟಿಮನಿ, ಡಾ.ಮರಿಯಂಬಿ, ಡಾ.ಇಂದ್ರಾಣಿ, ಡಾ.ವೀರೇಂದ್ರ ಕುಮಾರ, ಡಾ.ಹನುಮಂತಪ್ಪ, ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಈರಣ್ಣ, ಡಾ.ಭರತ್, ಡಾ.ಅರುಣ್, ಡಾ.ಮಂಜುನಾಥ ಜವಳಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಡಾ.ಜಬೀನ್ ತಾಜ್, ಡಿಎನ್‍ಒ ಗಿರೀಶ್, ವೆಂಕೋಬ್ ನಾಯ್ಕ್ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

Share this article