ಮಲ್ಲಿಕಾರ್ಜುನ ಶಿವಾಚಾರ್ಯರ ಜನ್ಮದಿನದ ಅಂಗವಾಗಿ ಧಾರ್ಮಿಕ ಸಭೆ ಆಯೋಜನೆಕನ್ನಡಪ್ರಭ ವಾರ್ತೆ ಯಾದಗಿರಿ
ಹರ ಮುನಿದರೆ ಗುರು ಕಾಯುವನು ಎಂಬ ವಾಣಿಯಂತೆ, ಸಮಾಜದಲ್ಲಿ ಇಂದು ಮಠಾಧೀಶರು ನೊಂದು ಬರುವ ಜನರಿಗೆ ಸಂತೈಸಿ, ಮಾರ್ಗದರ್ಶನ ಮಾಡುತ್ತಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ರಾಚನಗೌಡ ಮುದ್ನಾಳ ಹೇಳಿದರು.ತಾಲೂಕಿನ ಹೆಡಗಿಮದ್ರಾ ಗ್ರಾಮದ ಶ್ರೀಶಾಂತ ಶಿವಯೋಗಿಗಳ ಮಠದಲ್ಲಿ ಪೀಠಾಧಿಪತಿ ಶಾಂತ ಮಲ್ಲಿಕಾರ್ಜುನ ಶಿವಾಚಾರ್ಯರ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜ ಕಲುಷಿತಗೊಂಡ ಸಂದರ್ಭದಲ್ಲಿ ನಾಡಿನ ಮಠ-ಮಾನ್ಯಗಳು ಉತ್ತಮ ಸದ್ವಿಚಾರಗಳಿಂದ ಉದ್ಧರಿಸುತ್ತಿವೆ ಎಂದು ತಿಳಿಸಿದರು.
ಕನ್ನಡ ನಾಡಿನಲ್ಲಿ ಪ್ರಾಚೀನ ಪರಂಪರೆ ಮತ್ತು ಇತಿಹಾಸ ಇರುವ ನೂರಾರು ಮಠಗಳಲ್ಲಿ ಹೆಡಗಿಮದ್ರಾ ಸಹ ಒಂದಾಗಿದೆ. ಇಲ್ಲಿನ ಶಿವಯೋಗಿಗಳು ತಮ್ಮ ಅಚಲ ಭಕ್ತಿಯಿಂದ ಪರಶಿವನನ್ನು ಸಾಕ್ಷಾತ್ಕರಿಸಿಕೊಂಡು ಹಲವು ಪವಾಡಗಳ ಮೂಲಕ ಭಕ್ತರಿಗೆ ಇಷ್ಟಾರ್ಥ ಕಲ್ಪಿಸಿದ್ದಾರೆ. ಶ್ರೀ ಮಠದ ಪೀಠಾಧಿಪತಿಗಳು ಧಾರ್ಮಿಕ ಸಂಸ್ಕಾರದ ಜತೆಗೆ ಈ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡುತ್ತಿದ್ದಾರೆ ಎಂದು ಹೇಳಿದರು.ಬಿಜೆಪಿ ಯುವ ನಾಯಕ ಮಹೇಶರೆಡ್ಡಿ ಮುದ್ನಾಳ ಮಾತನಾಡಿ, ಶ್ರೀಮಠದ ಪೀಠಾಧಿಪತಿಗಳು ವಯಸ್ಸಿನಲ್ಲಿ ಚಿಕ್ಕವರಿದ್ದರೂ ಸಾಮಾಜಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದರು.
ಪೀಠಾಧಿಪತಿ ಪೀಠಾಧಿಪತಿ ಶ್ರೀಶಾಂತ ಮಲ್ಲಿಕಾರ್ಜುನ ಶಿವಾಚಾರ್ಯರು ಆಶಿರ್ವಚನ ನೀಡಿ, ನಮ್ಮ ಜನ್ಮದಿನ ಆಚರಣೆ ನಿಮಿತ್ತ ಶ್ರೀಮಠದ ಸದ್ಭಕ್ತರು ರಕ್ತದಾನ ಶಿಬಿರ ಆಯೋಜನೆ ಮಾಡುವ ಮೂಲಕ ಮಾದರಿ ಕಾರ್ಯ ಕೈಗೊಂಡಿದ್ದಾರೆ. ನಮ್ಮ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂತ ತೀರಾ ಕಮ್ಮಿ ಬಂದಿರುವುದು ಆತಂಕ ಮೂಡಿಸಿದೆ. ಸರ್ಕಾರ ಇಷ್ಟೆಲ್ಲ ಸೌಲಭ್ಯ ನೀಡಿದರೂ ನಮ್ಮ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯುತ್ತಿರುವ ಬಗ್ಗೆ ಪಾಲಕರು ಗಂಭೀರ ವಿಚಾರ ಮಾಡಬೇಕಿದೆ ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಶ್ರೀಮಠದಿಂದ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ವೇಳೆ ಪ್ರಮುಖರಾದ ರಾಮರೆಡ್ಡಿಗೌಡ ತಂಗಡಗಿ, ಮಹಾಂತಯ್ಯ ಸ್ವಾಮಿ ಹೀರೇಮಠ, ಭೀಮನಗೌಡ ಕ್ಯಾತ್ನಾಳ, ಬಸ್ಸುಗೌಡ ಬಿಳ್ಹಾರ, ವೆಂಕಟರಡ್ಡಿ ಮಾಲಿ ಪಾಟೀಲ್ ಅಬ್ಬೆತುಮಕೂರು, ಮಲ್ಲನಗೌಡ ಹಳಿಮನಿ ಕೌಳೂರು, ಬಸನಗೌಡ ಮರಡಗಿ, ರಮೇಶ ದೊಡ್ಡಮನಿ, ಸಿ.ಎಸ್. ಮಾಲಿ ಪಾಟೀಲ್, ಮಾಲೀ ಗಿರೀಶ ಮಾಲಿ ಪಾಟೀಲ್ ಇದ್ದರು.