ಈಶ್ವರ ಶೆಟ್ಟರ
ಬೇಸಿಗೆ ರಜೆ ಬಂತೆಂದರೆ ಮಕ್ಕಳಿಗೆ ಹೆಚ್ಚು ಉತ್ಸಾಹ, ಸಂತೋಷ. ಪಾಠದಿಂದ ಮುಕ್ತಿ ದೊರೆತು ಹಾಯಾಗಿ ಆಟದ ಜತೆಗೆ ಇನ್ನಿತರೆ ಚಟುವಟಿಕೆಗಳಲ್ಲಿ ತೊಡಗಲು ಅನುಕೂಲ ಎನ್ನುವ ಆಲೋಚನೆ ಮಕ್ಕಳದ್ದು. ಇನ್ನು ಪೋಷಕರಿಗೆ ಬೇಸಿಗೆ ರಜೆ ವೇಳೆ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸಕ್ಕಿಂತ ಕ್ರೀಡೆ, ಮೆಂಟಲ್ ಆಬಿಲಿಟಿ, ಯೋಗ, ಬೇಸಿಗೆ ಶಿಬಿರ ಸೇರಿದಂತೆ ಇನ್ನಿತರೆ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡುವ ಆತುರ.
ಸಾಮಾನ್ಯವಾಗಿ ನಗರ ಪ್ರದೇಶದಲ್ಲಿರುವ ಪೋಷಕರಿಗೆ ತಮ್ಮ ಮಕ್ಕಳು ಬೇಸಿಗೆ ರಜೆ ವೇಳೆಯೇ ಹೆಚ್ಚು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಲಿ ಎಂದು ಆಲೋಚಿಸುತ್ತಾರೆ. ಆದರೆ, ಬಹುತೇಕ ಹೋಬಳಿ, ಪಟ್ಟಣ, ಗ್ರಾಮಗಳಲ್ಲಿರುವ ಪೋಷಕರು ಮಕ್ಕಳನ್ನು ಅವರ ಗ್ರಾಮಗಳಿಗೆ ಬಿಟ್ಟು ಬರುತ್ತಾರೆ. ಹಳ್ಳಿಯ ಜೀವನ ಮಕ್ಕಳಿಗೆ ಪರಿಚಯವಾಗಲಿ, ಸಂಬಂಧಗಳು ಗಟ್ಟಿಯಾಗಲಿ ಎಂದು ಮಕ್ಕಳನ್ನು ಬಿಟ್ಟು ಬರುತ್ತಾರೆ. ಆದರೆ, ಬಹುತೇಕ ಮಕ್ಕಳು ಅಪಾಯ ತಂದುಕೊಳ್ಳುತ್ತಿರುವುದು ಇತ್ತೀಚೆಗೆ ವ್ಯಾಪಕವಾಗಿ ವರದಿಯಾಗುತ್ತಿದೆ.ಈಜಾಡಲು ಹೋಗಿ ಜೀವ ತೆತ್ತುತ್ತಿದ್ದಾರೆ:
ಮೇ 20 ರಂದು ರಬಕವಿ-ಬನಹಟ್ಟಿ ತಾಲೂಕಿನ ಹೊಸೂರ ಗ್ರಾಮದ ಕೆರೆಯಲ್ಲಿ 13 ಮತ್ತು 10 ವರ್ಷದ ಇಬ್ಬರು ಮಕ್ಕಳು ಈಜಾಡಲು ಹೋಗಿ ಮೃತಪಟ್ಟಿದ್ದಾರೆ. ಅಲ್ಲದೆ, ಅದೇ ತಾಲೂಕಿನ ಹಳಿಂಗಳಿ ಗ್ರಾಮದ ಜಾಕ್‌ವೆಲ್‌ನಲ್ಲಿ 23 ವರ್ಷದ ಯುವಕ ಕೂಡ ಈಜಲು ಹೋಗಿ ಮೃತಪಟ್ಟಿರುವ ಘಟನೆ ನಡೆದಿದೆ. ಅದರಂತೆಯೇ ವಿಜಯಪುರ ನಗರದಲ್ಲಿ ಇಂಡಿ ರಸ್ತೆಯಲ್ಲಿರುವ ಬಿಜ್ಜರಗಿ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಮೂರು ಮಕ್ಕಳು ಒಂಟೆಯ ಹಿಂದೆ ಹೋಗಿ, ಮರುದಿನ ಇದೆ ತ್ಯಾಜ್ಯ ಘಟಕದಲ್ಲಿ ಶವವಾಗಿ ಪತ್ತೆಯಾಗಿದ್ದರು.
ಈಜಾಡಲೆಂದು ಮಕ್ಕಳು ಕೆರೆಯತ್ತ ಸ್ನೇಹಿತರೊಟ್ಟಿಗೆ ಹೋಗುತ್ತಾರೆ. ಸ್ನೇಹಿತರ ಒತ್ತಾಯಕ್ಕೆ ಮಣಿದು ನೀರಿಗೆ ಇಳಿಯುತ್ತಾರೆ. ಆದರೆ, ಈಜು ಬಾರದೇ ನೀರಲ್ಲಿಯೇ ಅಸುನೀಗುತ್ತಿದ್ದಾರೆ. ಹೀಗಾಗಿ ಪೋಷಕರು ಮಕ್ಕಳು ಎಲ್ಲಿಗೆ ಹೊರಟಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಂಡ ಮೇಲೆ ಮಕ್ಕಳನ್ನು ಹೊರಗೆ ಬಿಡುವುದು ಒಳಿತು. ಜತೆಗೆ ನಿಗಾ ವಹಿಸುವುದು ಕೂಡ ಉತ್ತಮ. ಇದರ ಜತೆಗೆ ಈಗೀಗ ಮಳೆಯಾಗುತ್ತಿರುವುದರಿಂದ ನದಿ, ಕೆರೆ, ಹಳ್ಳ, ಕೊಳ್ಳಗಳಿಗೆ ನೀರು ಬರುತ್ತಿದೆ. ಹೀಗಾಗಿ ಪೋಷಕರು ಮಕ್ಕಳ ಆ ಕಡೆಗೆ ಹೋಗದಂತೆ ನೋಡಿಕೊಳ್ಳುವುದು ಉತ್ತಮ.
--------------
ಮಕ್ಕಳ ಮೇಲೆ ನಿಗಾ ವಹಿಸಲು ಡಿಸಿ ಕೋರಿಕೆ
ಆದ್ದರಿಂದ ಪಾಲಕರು ತಮ್ಮ ಮಕ್ಕಳನ್ನು ಕೆರೆ, ನದಿ, ನದಿ, ಜಾಕ್‌ವೆಲ್ ಹಾಗೂ ಇತರೆ ನೀರಿನ ಮೂಲಗಳ ಕಡೆಗೆ ಈಜಲು ಬಿಡದೇ ಮನೆಯಲ್ಲಿಯೇ ರಜಾ ಅವಧಿಗಳನ್ನು ಸಂತೋಷದಿಂದ ಕಳೆಯುವಂತೆ ನೋಡಿಕೊಳ್ಳಲು ಹಾಗೂ ಅವರ ಮೇಲೆ ಸೂಕ್ತ ನಿಗಾವಹಿಸುವಂತೆ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ಕೋರಿದ್ದಾರೆ.