ಮಲೆಮಹದೇಶ್ವರ ಬೆಟ್ಟದಲ್ಲಿ ಪಾದಯಾತ್ರೆ ವೇಳೆ ಚಿರತೆ ದಾಳಿಯಿಂದ ಮೃತಪಟ್ಟ ಬೆಂಗಳೂರಿನ ಹರ್ಷಿತ್ (10) ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ 20 ಲಕ್ಷ ರು. ಪರಿಹಾರ ಘೋಷಿಸಲಾಗಿದ್ದು, ಈಗಾಗಲೇ 5 ಲಕ್ಷ ರು.ಗಳನ್ನು ಕುಟುಂಬದವರಿಗೆ ನೀಡಲಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮಲೆಮಹದೇಶ್ವರ ಬೆಟ್ಟದಲ್ಲಿ ಪಾದಯಾತ್ರೆ ವೇಳೆ ಚಿರತೆ ದಾಳಿಯಿಂದ ಮೃತಪಟ್ಟ ಬೆಂಗಳೂರಿನ ಹರ್ಷಿತ್ (10) ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ 20 ಲಕ್ಷ ರು. ಪರಿಹಾರ ಘೋಷಿಸಲಾಗಿದ್ದು, ಈಗಾಗಲೇ 5 ಲಕ್ಷ ರು.ಗಳನ್ನು ಕುಟುಂಬದವರಿಗೆ ನೀಡಲಾಗಿದೆ.ಮೇ 10ರಂದು ಮಲೆಮಹದೇಶ್ವರ ಬೆಟ್ಟಕ್ಕೆ ನಾಗಮಲೈ ಬೆಟ್ಟದ ಮೂಲಕ ಪಾದಯಾತ್ರೆಯಲ್ಲಿ ತೆರಳಿದ್ದ ಭಕ್ತರಲ್ಲಿ ಹರ್ಷಿತ್ ಎಂಬ ಬಾಲಕನನ್ನು ಚಿರತೆ ಹೊತ್ತೊಯ್ದು ಕೊಂದಿತ್ತು. ಮೃತ ಬಾಲಕನ ಕುಟುಂಬದವರಿಗೆ ನಿಯಮದಂತೆ ಅರಣ್ಯ ಇಲಾಖೆಯಿಂದ 20 ಲಕ್ಷ ರು. ಪರಿಹಾರ ನೀಡುವುದಾಗಿ ಘೋಷಿಸಲಾಗಿದೆ. ಅದರಲ್ಲಿ ಇಲಾಖೆಯಿಂದ ಈಗಾಗಲೇ 5 ಲಕ್ಷ ರು.ಗಳನ್ನು ಕುಟುಂಬದವರಿಗೆ ನೀಡಲಾಗಿದ್ದು, ಉಳಿದ 15 ಲಕ್ಷ ರು.ಗಳನ್ನು ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ನೀಡಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಹರ್ಷಿತ್ ಪೋಷಕರ ಆಕ್ರಂದನ:ಮೃತ ಹರ್ಷಿತ್ ಅಂತ್ಯಕ್ರಿಯೆಯನ್ನು ಸೋಮವಾರ ಬೆಳಗ್ಗೆ 9.30ಕ್ಕೆ ಸುಮನಹಳ್ಳಿ ಚಿತಾಗಾರದಲ್ಲಿ ನಡೆಸಲಾಯಿತು. ಈ ವೇಳೆ ಹರ್ಷಿತ್ ತಂದೆ ಮತ್ತು ತಾಯಿ ಸೇರಿದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ವೇಳೆ ಮಾತನಾಡಿದ ಹರ್ಷಿತ್ ತಂದೆ ಸುರೇಶ್, ಪ್ರತಿವರ್ಷ ದೇವಸ್ಥಾನಕ್ಕೆ ಹೋಗುತ್ತಿದ್ದೆವು. ಈ ಬಾರಿ ಮಲೆಮಹದೇಶ್ವರ ಬೆಟ್ಟಕ್ಕೆ ಹೋಗಿದ್ದೆವು. ಮಹದೇಶ್ವರ ದರ್ಶನ ಪಡೆದು ನಂತರ ನಾಗಮಲೆಗೆ ಹೋಗುತ್ತಿದ್ದೆವು. ಆಗ ಏಕಾಏಕಿ ಚಿರತೆ ದಾಳಿ ಮಾಡಿ ಮಗನನ್ನು ಹೊತ್ತೊಯ್ದಿದೆ. ಇಬ್ಬರು ಮಕ್ಕಳಲ್ಲಿ ಈಗ ಒಬ್ಬ ಇಲ್ಲ ಎಂದು ಕಣ್ಣೀರು ಹಾಕಿದರು. ಮಹಾಲಕ್ಷ್ಮೀ ಲೇಔಟ್‌ನ ಹರ್ಷಿನ್ ನಿವಾಸಕ್ಕೆ ಆಗಮಿಸಿದ ಶಾಸಕ ಗೋಪಾಲಯ್ಯ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
