ಇಂದಿನಿಂದ ಚೆಲುವನಾರಾಯಣನ ಆಷಾಢ ಜಾತ್ರಾ ಮಹೋತ್ಸವ

KannadaprabhaNewsNetwork | Published : Jul 21, 2024 1:20 AM

ಸಾರಾಂಶ

ಶ್ರೀಚೆಲುವನಾರಾಯಣಸ್ವಾಮಿಗೆ ಜುಲೈ 26 ರಂದು ರಾತ್ರಿ 7 ಗಂಟೆಗೆ ಶ್ರೀಕೃಷ್ಣರಾಜಮುಡಿ ಉತ್ಸವ ನಡೆಯಲಿದೆ. ಜುಲೈ 21ರಂದು ಅಂಕುರಾರ್ಪಣೆಯೊಂದಿಗೆ ಆರಂಭವಾಗಿ ಆಗಸ್ಟ್ 1ರಂದು ನಡೆಯುವ ಪುಷ್ಪಯಾಗದೊಂದಿಗೆ ಮುಕ್ತಾಯವಾಗಲಿದೆ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಶ್ರೀ ಚೆಲುವನಾರಾಯಣಸ್ವಾಮಿಯವರ ಐತಿಹಾಸಿಕ ಮಹತ್ವದ ಶ್ರೀಕೃಷ್ಣರಾಜಮುಡಿ ಉತ್ಸವ ಅಂಗವಾಗಿ ಜುಲೈ 21ರಿಂದ ಆಷಾಢ ಮಾಸದ ಜಾತ್ರಾ ಮಹೋತ್ಸವದೊಂದಿಗೆ ವಿವಿಧ ಪೂಜಾ ಕೈಂಕರ್ಯಗಳು ಆರಂಭವಾಗಲಿವೆ.

ಶ್ರೀಚೆಲುವನಾರಾಯಣಸ್ವಾಮಿಗೆ ಜುಲೈ 26 ರಂದು ರಾತ್ರಿ 7 ಗಂಟೆಗೆ ಶ್ರೀಕೃಷ್ಣರಾಜಮುಡಿ ಉತ್ಸವ ನಡೆಯಲಿದೆ. ಜುಲೈ 21ರಂದು ಅಂಕುರಾರ್ಪಣೆಯೊಂದಿಗೆ ಆರಂಭವಾಗಿ ಆಗಸ್ಟ್ 1ರಂದು ನಡೆಯುವ ಪುಷ್ಪಯಾಗದೊಂದಿಗೆ ಮುಕ್ತಾಯವಾಗಲಿದೆ.

ಮೈಸೂರು ದೊರೆ ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್ ಆಷಾಢ ಮಾಸದಲ್ಲಿ ತಮ್ಮ ಕುಲದೈವ ಚೆಲುವನಾರಾಯಣಸ್ವಾಮಿಗೆ ಬ್ರಹ್ಮೋತ್ಸವ ಆರಂಭಿಸಿ ಉತ್ಸವದ 4ನೇ ದಿನವಾದ ಗರುಡೋತ್ಸವಕ್ಕೆ ಅಮೂಲ್ಯ ಕೆಂಪು, ಬಿಳಿವಜ್ರಗಳಿಂದ ಕೂಡಿದ ವಜ್ರಖಚಿತ ಕೃಷ್ಣರಾಜಮುಡಿ ಕಿರೀಟ ಮತ್ತು ಮೈಸೂರು ರಾಜಲಾಂಛನ ಗಂಡುಭೇರುಂಡ ಪದಕವನ್ನು ಕೊಡುಗೆಯಾಗಿ ನೀಡಿದ್ದರು.

ಬ್ರಹ್ಮೋತ್ಸವ ನೆನಪಿಗಾಗಿ ಕಲ್ಯಾಣಿ ಸಮುಚ್ಚಯದಲ್ಲಿ ಅತ್ಯಾಕರ್ಷಕ 16 ಕಂಬಗಳ ಭುವನೇಶ್ವರಿ ಮಂಟಪವನ್ನೂ ನಿರ್ಮಿಸಿ ತೀರ್ಥಸ್ನಾನದ ದಿನ ಅಲ್ಲಿಯೇ ಚೆಲುವನಾರಾಯಣಸ್ವಾಮಿಗೆ ಪೂಜೆ ನಡೆಯಬೇಕೆಂಬ ವ್ಯವಸ್ಥೆ ಮಾಡಿದ್ದರು.

ಈ ಐತಿಹಾಸಿಕ ಮಹೋತ್ಸವದಲ್ಲಿ ಪ್ರಮುಖ ದಿನವಾದ 4ನೇ ತಿರುನಾಳ್ ದಿನವಾದ ಕೃಷ್ಣರಾಜಮುಡಿ ಉತ್ಸವದಂದು ರಾತ್ರಿ 7 ಗಂಟೆಗೆ ಶ್ರೀದೇವಿಭೂದೇವಿ ಸಮೇತನಾಗಿ ಅರ್ಧಚಂದ್ರ ಪ್ರಭಾವಳಿಯಲ್ಲಿ ಗರುಡಾರೂಢನಾದ ಚೆಲುವನಾರಾಯಣಸ್ವಾಮಿಗೆ ಕೃಷ್ಣರಾಜಮುಡಿ ಧರಿಸಿ ದಿವ್ಯಪ್ರಬಂಧಪಾರಾಯಣ ಮತ್ತು ಮಂಗಳವಾದ್ಯದೊಂದಿಗೆ ಉತ್ಸವ ನೆರವೇರಿಸಲಾಗುತ್ತದೆ.

ವೈರಮುಡಿ ಜಾತ್ರಾ ಮಹೋತ್ಸವ ಕಲ್ಯಾಣೋತ್ಸವದಿಂದ ಆರಂಭವಾಗಿ ಮಹಾಭಿಷೇಕದೊಂದಿಗೆ ಮುಕ್ತಾಯವಾದರೆ, ಆಷಾಢ ಮಾಸದ ಕೃಷ್ಣರಾಜಮುಡಿ ಜಾತ್ರಾ ಮಹೋತ್ಸವ ಮೈಸೂರು ದೊರೆಯಾಗಿದ್ದ ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್ ಜನ್ಮನಕ್ಷತ್ರದಂದು ಮಹಾಭಿಷೇಕ- ಕಲ್ಯಾಣೋತ್ಸವದೊಂದಿಗೆ ಆರಂಭವಾಗಿ ಪುಷ್ಪಯಾಗದೊಂದಿಗೆ ಸಂಪನ್ನವಾಗಲಿದೆ. ಹತ್ತು ದಿನಗಳ ಕಾಲ ನಡೆಯುವ ಕರ್ನಾಟಕದ ಏಕೈಕ ಜಾತ್ರಾ ಮಹೋತ್ಸವವಾಗಿದೆ.

ಮಹಾರಾಜರ ವರ್ಧಂತಿ ಮಹಾಭಿಷೇಕ ಕಲ್ಯಾಣೋತ್ಸವ:

ಜುಲೈ 23ರಂದು ಆಷಾಢ ದ್ವಿತೀಯ ಶ್ರವಣನಕ್ಷತ್ರ ಕೂಡಿದ ಶುಭದಿನದಂದು ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್ ವರ್ಧಂತಿಯ ನಿಮಿತ್ತ ಮೂಲಮೂರ್ತಿ ಚೆಲ್ವ ತಿರುನಾರಾಯಣಸ್ವಾಮಿ ಮತ್ತು ಯೋಗನರಸಿಂಹಸ್ವಾಮಿಗೆ ಮಹಾಭಿಷೇಕ ಸಂಜೆ ಅಮ್ಮನವರ ಸನ್ನಿಧಿಯ ಸಭಾಂಗಣದಲ್ಲಿ ಉತ್ಸವ ಮೂರ್ತಿ ಚೆಲುವನಾರಾಯಣಸ್ವಾಮಿ ಮತ್ತು ಕಲ್ಯಾಣನಾಯಕಿ ಅಮ್ಮನವರಿಗೆ ಕಲ್ಯಾಣೋತ್ಸವ ನೆರವೇರಲಿದೆ. ಇದೇ ದಿನ ಅಧಿವಾಸರ -ರಕ್ಷಾಬಂಧನ ಮತ್ತು ದ್ವಜಪ್ರತೀಷ್ಠೆ ನಡೆಯಲಿದೆ. ಮಹಾರಾಜರ ಭಕ್ತ ವಿಗ್ರಹಕ್ಕೆ ವಿಶೇಷ ಪೂಜಾನುಷ್ಠಾನ ನೆರವೇರಿಸಲಾಗುತ್ತದೆ.

ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು:

ಬ್ರಹ್ಮೋತ್ಸವದಲ್ಲಿ ಜುಲೈ 23 ಬೆಳಗ್ಗೆ ದ್ವಜಾರೋಹಣ, ಜು.24 ರಂದು ಸಂಜೆ ಶೇಷವಾಹನೋತ್ಸವ, ಜು.25ರಂದು ಸಂಜೆ ಚಂದ್ರಮಂಡಲವಾಹನ, ಜು.26 ರಂದು ಸಂಜೆ ನಾಗವಲ್ಲಿ ಮಹೋತ್ಸವ ನರಂದಾಳಿಕಾರೋಹಣ, ರಾತ್ರಿ 7ಕ್ಕೆ ಕೃಷ್ಣರಾಜಮುಡಿ ಉತ್ಸವ 27 ಸಂಜೆ ಪ್ರಹ್ಲಾದ ಪರಿಪಾಲನೋತ್ಸವ ನಂತರ ಗರುಡವಾಹನ ನಡೆಯಲಿದೆ.

ಜುಲೈ 28 ರಂದು ಸಂಜೆ ಗಜೇಂದ್ರಮೋಕ್ಷ ಗಜವಾಹನೋತ್ಸವ, ಜು.29 ರಂದು ಬೆಳಗ್ಗೆ ರಥೋತ್ಸವ, ಜು.30ರಂದು ತೆಪ್ಪೋತ್ಸವ ಮತ್ತು ಡೋಲೋತ್ಸವ, ಜು.31 ಬೆಳಗ್ಗೆ ಅವಭೃತ, ತೀರ್ಥಸ್ನಾನ ಸಂಜೆ ಪಟ್ಟಾಭಿಷೇಕ, ಪಡಿಮಾಲೆ ಸಮರಭೂಪಾಲವಾಹನ ಆಗಸ್ಟ್ 1 ರಂದು ದ್ವಾದಶಾರಾಧನೆ ಪುಷ್ಪಯಾಗ, ಹನುಮಂತವಾಹನೋತ್ಸವ ನೆರವೇರಲಿದೆ.

Share this article