ಚೆಲುವನಾರಾಯಣನಿಗೆ ಮುತ್ತುಮುಡಿ ಕಿರೀಟದ ಅಲಂಕಾರ ಉತ್ಸವ; ಶೇಷ ವಾಹನೋತ್ಸವ

KannadaprabhaNewsNetwork | Updated : Mar 20 2024, 01:17 AM IST

ಸಾರಾಂಶ

ವಿಶ್ವ ವಿಖ್ಯಾತ ವೈರಮುಡಿ ಉತ್ಸವಕ್ಕೆ ಮೇಲುಕೋಟೆ ಸಜ್ಜುಗೊಂಡಿದೆ. ಮಾ.21ರಂದು ನಡೆಯುವ ಕಿರೀಟಧಾರಣ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ವೈರಮುಡಿ ಉತ್ಸವ ಕಣ್ತುಂಬಿಕೊಳ್ಳಲು ತಮಿಳುನಾಡು ಆಂಧ್ರ, ತೆಲಂಗಾಣ, ಗುಜರಾಜ್ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ದ ತಂಡೋಪತಂಡವಾಗಿ ಭಕ್ತರು ಮೇಲುಕೋಟೆಗೆ ಆಗಮಿಸುತ್ತಿದ್ದು ಎಲ್ಲಾ ಛತ್ರಗಳು, ರಾಮಾನುಜಕೂಟಂಗಳು ವಸತಿಗೃಹಗಳು ಭಕ್ತರಿಂದ ತುಂಬಿ ತುಳುಕುತ್ತಿದೆ.

ಕನ್ನಡಪ್ರಭ ವಾರ್ತೆ ಮೇಲುಕೋಟೆಶ್ರೀಚೆಲುವನಾರಾಯಣಸ್ವಾಮಿಯ ವಿವಿಧ ಉತ್ಸವಗಳ ದಿವ್ಯಮಂಗಳರೂಪ ಭಕ್ತರನ್ನು ದೈವಿಲೋಕಕ್ಕೆ ಸೆಳೆದೊಯ್ಯುತ್ತಿದೆ. ಎರಡನೇ ತಿರುನಾಳ್ ಅಂಗವಾಗಿ ಮಂಗಳವಾರ ಚೆಲುವನಾರಾಯಣನಿಗೆ ಮುತ್ತುಮುಡಿ ಕಿರೀಟದ ಅಲಂಕಾರದಲ್ಲಿ ಉತ್ಸವ ನಡೆಯಿತು.

ರಾತ್ರಿ ಶೇಷವಾಹನೋತ್ಸವ ಅದ್ಧೂರಿಯಾಗಿ ನೆರವೇರಿತು. ಬುಧವಾರ 3ನೇ ತಿರುನಾಳ್ ಅಂಗವಾಗಿ ಮಧ್ಯಾಹ್ನ 2 ಗಂಟೆಯಿಂದ ನಾಗವಲ್ಲೀ ಮಹೋತ್ಸವ ಆರಂಭವಾಗಲಿದೆ. ರಾತ್ರಿ ಚಿನ್ನದ ಪಲ್ಲಕ್ಕಿಯಲ್ಲಿ ವಿರಾಜಮಾನನಾದ ಸ್ವಾಮಿ ಹಾಗೂ ಕಲ್ಯಾಣನಾಯಕಿಯವರ ಭವ್ಯಮೆರವಣಿಗೆ ನಡೆಯಲಿದೆ. ಇದಾದ ನಂತರ ಚಂದ್ರಮಂಡಲ ವಾಹನೋತ್ಸವ ನಡೆಯಲಿದೆ.

ವೈರಮುಡಿ ಉತ್ಸವಕ್ಕೆ ಸಜ್ಜು:

ವಿಶ್ವವಿಖ್ಯಾತ ವೈರಮುಡಿ ಉತ್ಸವಕ್ಕೆ ಮೇಲುಕೋಟೆ ಸಜ್ಜುಗೊಂಡಿದೆ. ಮಾ.21ರಂದು ನಡೆಯುವ ಕಿರೀಟಧಾರಣ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ವೈರಮುಡಿ ಉತ್ಸವ ಕಣ್ತುಂಬಿಕೊಳ್ಳಲು ತಮಿಳುನಾಡು ಆಂಧ್ರ, ತೆಲಂಗಾಣ, ಗುಜರಾಜ್ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ದ ತಂಡೋಪತಂಡವಾಗಿ ಭಕ್ತರು ಮೇಲುಕೋಟೆಗೆ ಆಗಮಿಸುತ್ತಿದ್ದು ಎಲ್ಲಾ ಛತ್ರಗಳು, ರಾಮಾನುಜಕೂಟಂಗಳು ವಸತಿಗೃಹಗಳು ಭಕ್ತರಿಂದ ತುಂಬಿ ತುಳುಕುತ್ತಿದೆ.

ಜಿಲ್ಲಾ ಉಸ್ತುವಾರಿ ಸಚಿವ ಎನ್. ಚೆಲುವರಾಯಸ್ವಾಮಿ ಮಾರ್ಗದರ್ಶನದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ವಿಶೇಷ ಕಾಳಜಿಯಿಂದಾಗಿ ಜಿಲ್ಲಾಧಿಕಾರಿ ಡಾ.ಕುಮಾರ್ , ಅಪರಜಿಲ್ಲಾಧಿಕಾರಿ ಡಾ.ಎಚ್.ಎಲ್ ನಾಗರಾಜ್ ಜಿಲ್ಲಾ ಎಸ್ಪಿ ಯತೀಶ್ ವೈರಮುಡಿ ಬ್ರಹ್ಮೋತ್ಸವಕ್ಕೆ ಸಿದ್ಧತೆ ಮಾಡಿದ್ದಾರೆ.

ಗಮನ ಸೆಳೆಯುತ್ತಿರುವ ವಿದ್ಯುತ್ ದೀಪಾಲಂಕಾರ:

ವೈರಮುಡಿ ಬ್ರಹ್ಮೋತ್ಸವದ ವಿಶೇಷ ಹಿನ್ನೆಲೆಯಲ್ಲಿ ಮೇಲುಕೋಟೆಯ ಗುಡಿಗೋಪುರಗಳು, ರಾಜಬೀದಿಗಳು ಕಲ್ಯಾಣಿಗಳು ಯೋಗನರಸಿಂಹಸ್ವಾಮಿ ಬೆಟ್ಟ ನಯನ ಮನೋಹರ ದೀಪಾಲಂಕಾರದಿಂದ ಕಣ್ಮನ ಸೆಳೆಯುತ್ತಿದೆ. ಮಾ.17 ರಿಂದ 28ರವರೆಗೆ ದೀಪಾಲಂಕಾರ ಇರಲಿದೆ.

ವೈವಿಧ್ಯಮಯ ದೀಪಾಲಂಕಾರದಿಂದ ರಾಜಬೀದಿ, ಕಲ್ಯಾಣಿ, ಯೋಗನರಸಿಂಹಸ್ವಾಮಿ ಬೆಟ್ಟ, ರಾಯಗೋಪುರ ಅಕ್ಕತಂಗಿಕೊಳ ಉತ್ಸವಬೀದಿಗಳು ನಯನಮನೋಹರವಾಗಿ ಕಂಗೊಳಿಸುತ್ತಿವೆ. ದೇವಾಲಯದಲ್ಲಿ ವೇದಮಂತ್ರಪಾರಾಯಣ ಮಂಗಳವಾದ್ಯದ ನೀನಾದ ಕೇಳಿಬರುತ್ತಿದೆ. ಇದರಿಂದ ಸಾಕ್ಷಾತ್ ಭೂ ವೈಕುಂಠದಂತೆ ಭಾಸವಾಗುತ್ತಿದೆ.

ಈ ಬಾರಿ ವಿದ್ಯುತ್ ದೀಪಾಲಂಕಾರಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ವೈರಮುಡಿ ಕಿರೀಟಧಾರಣ ಮಹೋತ್ಸವದ ನಂತರ ಮಾ.24ರಂದು ರಥೋತ್ಸವ, ಮಾ.25 ತೆಪ್ಪೋತ್ಸವ, ಮಾ.26 ರಂದು ತೀರ್ಥಸ್ನಾನ , ಮಾ.27 ರಂದು ಮಹಾಭಿಷೇಕ , ಮಾ28 ರಂದು ಶೇರ್ತಿಸೇವೆ ಇರುವ ಕಾರಣ ದೀಪಾಲಂಕಾರವನ್ನು ಭಕ್ತರು ಕಣ್ತುಂಬಿಕೊಳ್ಳಲು ಅವಕಾಶವಿದೆ.

ದೀಪಾಲಂಕಾರ ಭಕ್ತರಿಗೆ ಮುದನೀಡುತ್ತಿದೆ. ಕಣಿವೆಯಿಂದ ಮೇಲುಕೋಟೆ ದೇವಾಲಯಕ್ಕೆ ಸಂಪರ್ಕಿಸುವ ರಸ್ತೆಗಳು, ಕಲ್ಯಾಣಿ ಸಮುಚ್ಚಯ, ಬಸ್ ನಿಲ್ದಾಣದಿಂದ ಬೆಟ್ಟದವರೆಗಿನ ರಸ್ತೆ ಹಾಗೂ ಯೋಗಾನರಸಿಂಹಸ್ವಾಮಿ ಬೆಟ್ಟಕ್ಕೆ ಸಂಪರ್ಕಿಸುವ ರಸ್ತೆಗಳಿಗೆ ನಯನ ಮನೋಹರ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.

ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದ ಆವರಣ ಹಾಗೂ ಯೋಗನರಸಿಂಹಸ್ವಾಮಿ ಬೆಟ್ಟಕ್ಕೆ ವರ್ಣಮಯ ದೀಪಾಲಂಕಾರ ಮಾಡಲಾಗಿದೆ. ಮೈಸೂರಿನ ಹನಿ ಎಲೆಕ್ಟ್ರಿಕಲ್ ಇರ್ಪಾನ್ ದೀಪಾಲಂಕಾರ ಮಾಡುತ್ತಿದ್ದು ಭಕ್ತರ ಮನಸೂರೆಗೊಳ್ಳುತ್ತಿದೆ. ಚೆಲುವನಾರಾಯಣಸ್ವಾಮಿ ರಾಜಗೋಪುರಕ್ಕೆ ಪಾರ್ಕರ್ ಲೈಟ್ ಅಳವಡಿಸಿದ್ದು ಪ್ರತಿ 15 ಸೆಕೆಂಡಿಗೊಮ್ಮೆ ಬಣ್ಣ ಬದಲಗಾಗುತ್ತಿದೆ.

ವೈರಮುಡಿ ಉತ್ಸವದಂದು ಚೆಲುವನಾರಾಯಣಸ್ವಾಮಿ ದೇವಾಲಯದ ಆವರಣವನ್ನು ವಿಶೇಷವಾಗಿ ಪುಷ್ಪಾಲಂಕಾರ ಮಾಡಲು ಸಿದ್ಧತೆ ಮಾಡಲಾಗಿದೆ. ಉತ್ಸವ ಆರಂಭವಾಗುವ ರಾಮಾನುಜರ ಸನ್ನಿಧಿ ಆವರಣ ಪಾತಾಳಾಂಕಣ ನವರಂಗ ಹಾಗೂ ರಾಜಗೋಪುರದ ಬಾಗಿಲಬಳಿ ಪುಷ್ಪಾಲಂಕಾರ ಮಾಡಲಾಗುತ್ತಿದೆ.

ಬೆಂಗಳೂರಿನ ನಂದೀಶ್ ಮತ್ತು ತಂಡ ಸ್ವಾಮಿಗೆ ತೋಮಾಲೆಕಟ್ಟುವ ಹಾಗೂ ಪುಷ್ಪಾಲಂಕಾರಮಾಡುವ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಕಲ್ಯಾಣೋತ್ಸವದಂದು ಮಾಡಿದ ಪುಷ್ಪಾಲಂಕಾರ ವಿಭಿನ್ನವಾಗಿದ್ದು ಭಕ್ತರ ಮನಸೂರೆಗೊಂಡಿದೆ.

ಮೇಲುಕೋಟೆ ಮತ್ತು ಆದಿಚುಂಚನಗಿರಿಗೆ ಹೆಚ್ಚುವರಿ 140 ಬಸ್ಸುಗಳ ಕಾರ್ಯಾಚರಣೆ

ಮಂಡ್ಯ:ಮೇಲುಕೋಟೆ ಶ್ರೀ ಚಲುವನಾರಾಯಣಸ್ವಾಮಿ, ವೈರಮುಡಿ ಬ್ರಹ್ಮೋತ್ಸವವು ಮಾ.21ರಂದು ಹಾಗೂ ಶ್ರೀ ಆದಿಚುಂಚನಗಿರಿ ಜಾತ್ರಾ ಮಹಾರಥೋತ್ಸವವು ಮಾ.25ರಂದು ನಡೆಯಲಿದೆ.ಎರಡು ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ಮಂಡ್ಯ ವಿಭಾಗದ ವತಿಯಿಂದ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಜಿಲ್ಲಾ ವ್ಯಾಪ್ತಿಯ ಮಂಡ್ಯ, ನಾಗಮಂಗಲ, ಕೆಆರ್ ಪೇಟೆ, ಶ್ರೀರಂಗಪಟ್ಟಣ, ಪಾಂಡವಪುರ ಬಸ್ ನಿಲ್ದಾಣಗಳಿಂದ ಹಾಗೂ ಮೈಸೂರು, ಹಾಸನ, ತುಮಕೂರು ಮತ್ತು ಬೆಂಗಳೂರು ಬಸ್ ನಿಲ್ದಾಣಗಳಿಂದ ಹೆಚ್ಚುವರಿಯಾಗಿ ಮೇಲುಕೋಟೆ ಮತ್ತು ಆದಿಚುಂಚನಗಿರಿಗೆ 140 ಬಸ್ಸುಗಳ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಂಡ್ಯ ವಿಭಾಗದ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗಿಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.

Share this article