ಮೇಲುಕೋಟೆ: ಚೆಲುವನಾರಾಯಣಸ್ವಾಮಿಯವರ ತೊಟ್ಟಿಲಮಡು ಜಾತ್ರಾ ಮಹೋತ್ಸವ ಶುಕ್ರವಾರ ರಾತ್ರಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆದರೆ ಶನಿವಾರ ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಮೇಲುಕೋಟೆ ದೇವಾಲಯಕ್ಕೆ ಭೇಟಿ ನೀಡಿ ದೈವದರ್ಶನ ಪಡೆದರು.
ಬೆಳಗ್ಗೆಯಿಂದಲೇ ಆಗಮಿಸುತ್ತಿದ್ದ ಭಕ್ತರ ಸಂಖ್ಯೆ ಮಧ್ಯಾಹ್ನದ ವೇಳೆಗೆ ಹೆಚ್ಚಾಗಿ ಚೆಲುವನಾರಾಯಣಸ್ವಾಮಿ ದೇವಾಲಯದ ಮುಂಭಾಗ ದಟ್ಟನೆ ಉಂಟಾಗಿ ಪರದಾಡುವಂತಾಯಿತು.ಶನಿವಾರ ಮೇಲುಕೋಟೆಯಲ್ಲಿ ವಾಹನ ದಟ್ಟಣೆಯಿಂದ ಉತ್ಸವ ಬೀದಿಗಳಲ್ಲಿ ಭಕ್ತರು ಅಡ್ಡಾದಿಡ್ಡಿಯಾಗಿ ವಾಹನ ನಿಲುಗಡೆ ಮಾಡಿದ್ದರಿಂದ ಉತ್ಸವಕ್ಕೆ ಅಡಚಣೆ ಉಂಟಾಯಿತು.
ಚೆಲುವನಾರಾಯಣಸ್ವಾಮಿಯ ಉತ್ಸವ 12 ಗಂಟೆಗೆ ನಡೆಯಬೇಕಿತ್ತಾದರೂ ಭಕ್ತರ ದಟ್ಟಣೆಯಿಂದಾಗಿ 1.30ಕ್ಕೆ ನೆರವೇರಿತು. ಬ್ಯಾರಿಕೇಡ್ ಹಾಕಿ ಭಕ್ತರನ್ನು ನಿಯಂತ್ರಿಸಿದ ನಂತರವೇ ಉತ್ಸವ ನಡೆಸುವಂತಾಯಿತು. ದೇವರ ಉತ್ಸವ ಹೊರ ಬರಲು ಮತ್ತು ದೇವಾಲಯಕ್ಕೆ ಮರಳುವ ವೇಳೆ ಭಕ್ತರ ನಿಯಂತ್ರಣಕ್ಕೆ ಹರಸಾಹಸಪಡುವಂತಾಯಿತು.ಈ ವೇಳೆ ತಳ್ಳಾಟ, ನೂಕಾಟವೂ ನಡೆಯಿತು, ಮಹಿಳಾ ಭಕ್ತರು ಮತ್ತು ಶನಿವಾರದ ಜೊತೆಗೆ ರಾಜ್ಯೋತ್ಸವದ ರಜೆಯೂ ಬಂದ ಕಾರಣ ಮೇಲುಕೋಟೆಗೆ ಭಕ್ತಸಾಗರವೇ ಹರಿದು ಬಂದಿತ್ತು. ರಾಜಮುಡಿ ಉತ್ಸವ:
ರಾತ್ರಿ 2 ಗಂಟೆಗೆ ಚೆಲುವನಾರಾಯಣಸ್ವಾಮಿಗೆ ರಾಜಾ ಒಡೆಯರ್ ಅರ್ಪಿಸಿದ ವಜ್ರ ಖಚಿತ ರಾಜಮುಡಿ ಗಂಡುಭೇರುಂಡ ಪದಕ ಹಾಗೂ 16 ಬಗೆಯ ತಿರುವಾಭರಣಗಳನ್ನು ಧರಿಸಿ, ರಾತ್ರಿ ಕಣಿವೆಯ ಬಳಿ ವೈಕುಂಠ ಗಂಗೆಯ ಬಳಿ ತೊಟ್ಟಿಲಮಡು ಜಾತ್ರೆ ನಡೆದ ವೇಳೆ 25 ಸಾವಿರಕ್ಕೂ ಅಧಿಕ ಭಕ್ತಾಧಿಗಳಿಗೆ ವಿವಿಧ ಜನಾಂಗಗಳ ವತಿಯಿಂದ ಕದಂಬ ಮತ್ತು ದದಿಯೋದ ಪ್ರಸಾದ ವಿತರಿಸಲಾಯಿತು. ಗ್ರಾಪಂ ವತಿಯಿಂದ ವ್ಯವಸ್ಥಿತವಾದ ರೀತಿಯಲ್ಲಿ ಕುಡಿಯುವ ನೀರು ಮತ್ತು ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಲಾಯಿತು. ರಾತ್ರಿ 10ಗಂಟೆವರೆಗೆ ಭಕ್ತರು ಹರಿಯುವ ನೀರಿನ ಪಕ್ಕವಿರುವ ವೈಕುಂಠನಾಥನಿಗೆ ಪೂಜೆ ನೆರವೇರಿಸಿದರು.