ಚೆಲುವನಾರಾಯಣಸ್ವಾಮಿ ದೇಗುಲದ ಜಮೀನು ವಾರದೊಳಗೆ ಖಾತೆಯಾಗಬೇಕು

KannadaprabhaNewsNetwork |  
Published : Jan 12, 2025, 01:18 AM IST
11ಕೆಎಂಎನ್ ಡಿ12 | Kannada Prabha

ಸಾರಾಂಶ

ಸರ್ಕಾರದ ತೀರ್ಮಾನದಂತೆ ಪರಭಾರೆಯಾಗಿದ್ದ ದೇಗುಲಗಳ ಜಮೀನುಗಳನ್ನು ಆಯಾ ದೇವಾಲಯದ ಹೆಸರಿಗೆ ಇಂದೀಕರಿಸುವ ಆಂದೋಲನವನ್ನು ರಾಜ್ಯಾದ್ಯಂತ ಕಟ್ಟುನಿಟ್ಟಾಗಿ ಮಾಡಲಾಗುತ್ತಿದೆ. ಮುಜರಾಯಿ ಇಲಾಖೆ ಮಹತ್ವಾಕಾಂಕ್ಷಿಯ ಕಾರ್ಯಕ್ರಮ ಇದಾಗಿದೆ. ಇದಕ್ಕಾಗಿಯೇ ಇಲಾಖೆಯಲ್ಲಿ ಕಾನೂನು ವಿಭಾಗ ಆರಂಭಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಚೆಲುವನಾರಾಯಣಸ್ವಾಮಿ ದೇವಾಲಯದ ಸರ್ವೇ ನಂಬರಿನ ಎಲ್ಲಾ ಜಮೀನುಗಳು ದೇವಾಲಯದ ಹೆಸರಿಗೆ ಒಂದು ವಾರದೊಳಗೆ ಖಾತೆಯಾಗಬೇಕು ಎಂದು ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಡಾ.ವೆಂಕಟೇಶ್ ಕಂದಾಯ ಇಲಾಖೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಮೇಲುಕೋಟೆಯಲ್ಲಿ ದೇವಾಲಯಕ್ಕೆ ಸೇರಿದ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿದ ಆಯುಕ್ತರು, ಎಡಿಸಿ, ಎಸಿ ತಹಸೀಲ್ದಾರ್ ಸೇರಿದಂತೆ ಕಂದಾಯ ಇಲಾಖೆ ವಿವಿಧ ಹಂತದ ಅಧಿಕಾರಿಗಳಿಂದ ಮೇಲುಕೋಟೆ ದೇವಾಲಯಕ್ಕೆ ಸೇರಿ ಪರಭಾರೆಯಾಗಿದ್ದ ಜಮೀನುಗಳ ಬಗ್ಗೆ ಮಾಹಿತಿ ಪಡೆದರು.

ಸರ್ಕಾರದ ತೀರ್ಮಾನದಂತೆ ಪರಭಾರೆಯಾಗಿದ್ದ ದೇಗುಲಗಳ ಜಮೀನುಗಳನ್ನು ಆಯಾ ದೇವಾಲಯದ ಹೆಸರಿಗೆ ಇಂದೀಕರಿಸುವ ಆಂದೋಲನವನ್ನು ರಾಜ್ಯಾದ್ಯಂತ ಕಟ್ಟುನಿಟ್ಟಾಗಿ ಮಾಡಲಾಗುತ್ತಿದೆ. ಮುಜರಾಯಿ ಇಲಾಖೆ ಮಹತ್ವಾಕಾಂಕ್ಷಿಯ ಕಾರ್ಯಕ್ರಮ ಇದಾಗಿದೆ. ಇದಕ್ಕಾಗಿಯೇ ಇಲಾಖೆಯಲ್ಲಿ ಕಾನೂನು ವಿಭಾಗ ಆರಂಭಿಸಲಾಗಿದೆ ಎಂದರು.

ಈವರೆಗೆ 12 ಸಾವಿರ ಎಕರೆ ಭೂಮಿಯನ್ನು ವಿವಿಧ ದೇಗುಲಗಳ ಹೆಸರಿಗೆ ಇಂದೀಕರಿಸುವ ಕಾರ್ಯ ಮಾಡಲಾಗಿದೆ. ಮೇಲುಕೋಟೆ ದೇಗುಲಕ್ಕೆ ಸೇರಿದ ಜಮೀನುಗಳು ಕರ್ನಾಟಕದ ಯಾವುದೇ ಸ್ಥಳದಲ್ಲಿದ್ದರೂ ಮಾಹಿತಿ ನೀಡಬಹುದು. ಮೇಲುಕೋಟೆ, ಕೆ.ಆರ್.ಪೇಟೆ ತಾಲೂಕು ಮೈಲನಹಳ್ಳಿ ಹಾಗೂ ಮೈಸೂರು ಕೆಸರೆ ಬಳಿ ತಿಳಿದು ಬಂದಿದೆ. ದೇವಾಲಯದ ಹೆಸರಿಗೆ ಇಂದೀಕರಿಸುವ ಕಾರ್ಯ ನಡೆಯುತ್ತಿದೆ ಎಂದರು.

ಮೇಲುಕೋಟೆ ಗ್ರಾಪಂ ದೇವಾಲಯದ ಜಮೀನಿನಲ್ಲಿ ಬೇರೆ ಯಾರಿಗಾದರೂ ಖಾತೆ ಮಾಡಿಕೊಟ್ಟಿದ್ದರೆ ತಕ್ಷಣ ರದ್ದು ಮಾಡಿ ವರದಿ ಮಾಡಬೇಕು, ಈ ಬಗ್ಗೆ ತಕ್ಷಣವೇ ಪತ್ರ ಬರೆದು ಜಮೀನುಗಳನ್ನು ಇಂದೀಕರಿಸಿದ ಮಾಹಿತಿಯನ್ನೂ ತಕ್ಷಣ ನೀಡಬೇಕು ಎಂದು ದೇಗುಲದ ಇಒ ಶೀಲಾಗೆ ಸೂಚನೆ ನೀಡಿದರು.

ದೇವಾಲಯಕ್ಕೆ ಸೇರಿದ ಜಮೀನನ್ನು ಉಳುವವವನಿಗೆ ಭೂಮಿ ಯೋಜನೆಯಲ್ಲಿ ಭೂ ನ್ಯಾಯ ಮಂಡಳಿಯಲ್ಲಿ ತೀರ್ಮಾನಿಸಿ ಖಾತೆ ಮಾಡಿಕೊಂಡಿದ್ದಾರೆ. ಇದು ಕಾನೂನು ವಿರೋಧಿ ಕ್ರಮ. ಸುಪ್ರೀಂ ಕೋರ್ಟ್ ಆದೇಶದಂತೆ ಇಂತಹ ಜಮೀನುಗಳನ್ನು ದೇವಾಲಯದ ವಶಕ್ಕೆ ಮರಳಿ ಪಡೆಯಬೇಕಾಗಿದ್ದು, ಇಂತಹ ಖಾತೆಗಳನ್ನು ರದ್ದುಮಾಡಿ ಜಮೀನುಗಳನ್ನು ಚೆಲುವನಾರಾಯಣನ ಆಸ್ತಿಯಾಗಿ ಉಳಿಸಿಕೊಳ್ಳಲು ಸಿಎಟಿಯಲ್ಲಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕರಣ ದಾಖಲಿಸಬೇಕು ಎಂದು ಸೂಚಿಸಿದರು.

ದೇವಾಲಯದ ಜಮೀನುಗಳನ್ನು ಅನ್ಯಕ್ರಾಂತ ಉದ್ದೇಶಗಳಿಗೆ ಖಾತೆ ಮಾಡಿಕೊಟ್ಟಿದ್ದರೆ ಅಂತಹ ಕಂದಾಯ ಇಲಾಖಾ ಸಿಬ್ಬಂದಿ ಹಾಗೂ ಗ್ರಾಪಂ ಅಧಿಕಾರಿಗಳು ಅಧ್ಯಕ್ಷರ ವಿರುದ್ಧ ಕ್ರಿಮಿನಲ್ ಮೊಖದ್ದಮೆ ದಾಖಲಿಸಲಾಗುತ್ತದೆ. ಇಂತಹ ಜಮೀನುಗಳಿದ್ದರೆ ಹಾಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಖಾತೆ ರದ್ದುಮಾಡಿ ಉಪವಿಭಾಗಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಇದು ಸರ್ಕಾರದ ಕಟ್ಟುನಿಟ್ಟಿನ ತೀರ್ಮಾನವಾಗಿದೆ ಎಂದರು.

ಈ ವೇಳೆ ಎಡೀಸಿ ಶಿವಾನಂದಮೂರ್ತಿ, ಪಾಂಡವಪುರ ಎಸಿ ಶ್ರೀನಿವಾಸ್, ತಹಸೀಲ್ದಾರ್ ಸಂತೋಷ್, ಉಪತಹಸೀಲ್ದಾರ್ ರಾಜೇಶ್, ಗ್ರಾಮಾಧಿಕಾರಿ ರಮೇಶ್, ಮೇಲುಕೋಟೆ ದೇಗುಲದ ಇಒ ಶೀಲಾ, ಕಂದಾಯ ಇಲಾಖೆ ಸಿಬ್ಬಂದಿವರ್ಗ ಹಾಜರಿದ್ದರು.

ಚೆಲುವನಿಗೆ ಬೆಳ್ಳಿ ರಥ

ಶ್ರೀಚೆಲುವನಾರಾಯಣಸ್ವಾಮಿಗೆ ಬೆಳ್ಳಿ ರಥ ಸಮರ್ಪಿಸಬೇಕೆಂಬ ಬಹುದಿನಗಳ ಬೇಡಿಕೆ ಇದ್ದು, ಈ ಬಗ್ಗೆ ಚರ್ಚಿಸಿದ ಆಯುಕ್ತ ಡಾ.ವೆಂಕಟೇಶ್, ಧಾರ್ಮಿಕ ದತ್ತಿ ಇಲಾಖೆಗೆ ಪ್ರತ್ಯೇಕ ಖಾತೆ ತೆರೆಯಲು ಪಸ್ತಾವನೆ ಸಲ್ಲಿಸಿದರೆ ಅನುಮತಿ ನೀಡಲಾಗುತ್ತದೆ. ಭಕ್ತರು, ದಾನಿಗಳೂ ಸಹ ಈ ಮಹಾ ಕಾರ್ಯದಲ್ಲಿ ಭಾಗಿಯಾಗುವ ಅವಕಾಶ ಕಲ್ಪಿಸಿ ಶೀಘ್ರ ರಥ ನಿರ್ಮಾಣಕ್ಕೆ ಚಾಲನೆ ನೀಡಬಹುದು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ಹಾಗೂ ದೇಗುಲದ ಆಡಳಿತಾಧಿಕಾರಿಗಳೂ ಎಸಿ ಶ್ರೀನಿವಾಸ್‌ಗೆ ಸೂಚನೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ