ಧಾರವಾಡ: ನಾಡೋಜ ಚನ್ನವೀರ ಕಣವಿ ಅವರಿಗೆ ಕಾವ್ಯವೇ ಜೀವಾಳವಾಗಿತ್ತು. ಮೃದು ಸ್ವಭಾವದ ಕಣವಿ ಕಾವ್ಯಲೋಕದ ಧ್ರುವತಾರೆ ಎಂದು ವಿಮರ್ಶಕ ಡಾ. ರೆಹಮತ್ ತರೀಕೆರೆ ಹೇಳಿದರು.
ರಾಜ್ಯದ ಸಾಹಿತ್ಯ ಕ್ಷೇತ್ರದಲ್ಲಿ ಸಾಹಿತ್ಯ ದಂಪತಿ ಅಪರೂಪ. ಡಾ. ಚೆನ್ನವೀರ ಕಣವಿ ಕಾವ್ಯ ಲೋಕದಲ್ಲಿ ಮಿನುಗುತಾರೆಯಂತಿದ್ದರೆ, ಶಾಂತಾದೇವಿ ಕಣವಿ ಒಬ್ಬ ಶ್ರೇಷ್ಠ ಕಥೆಗಾರರಾಗಿದ್ದರು. ಆದರೆ ಚೆನ್ನವೀರ ಕಣವಿ ಅವರಿಗೆ ಸಿಕ್ಕಷ್ಟು ಮನ್ನಣೆ ಶಾಂತಾದೇವಿ ಕಣವಿ ಅವರ ಕಥೆಗಳಿಗೆ ಸಿಗದೇ ಇರುವುದು ಬೇಸರ ಎಂದರು.
ಕಾವ್ಯ ಮತ್ತು ಕಥೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದ ಡಾ. ಜಿ.ಎಂ. ಹೆಗಡೆ, ಬೇಂದ್ರೆ ಶ್ರಾವಣದ ಕವಿ, ಕುವೆಂಪು ಸೂರ್ಯೋದಯದ ಕವಿ ಹಾಗೂ ಡಾ. ಚೆನ್ನವೀರ ಕಣವಿ ಮಳೆಗಾಲದ ಕವಿ ಎಂದು ಗುರುತಿಸಿಕೊಂಡಿದ್ದು ವಿಶೇಷ. ಶಾಂತಾದೇವಿ ಕಣವಿ ಅವರೂ ಓರ್ವ ಶ್ರೇಷ್ಠ ಕಥೆಗಾರರಾಗಿದ್ದರು. 100ಕ್ಕೂ ಹೆಚ್ಚು ಕಥೆಗಳನ್ನು ಬರೆದಿರುವ ಅವರ ಕಥೆಗಳನ್ನು ಯುವಕವಿಗಳು ಓದಬೇಕು ಎಂದರು.ಡಾ. ಪ್ರಜ್ಞಾ ಮತ್ತಿಹಳ್ಳಿ ನಿರ್ಣಾಯಕರ ಪರವಾಗಿ ಮಾತನಾಡಿದರು. ಸಂಘದ ಉಪಾಧ್ಯಕ್ಷ ಡಾ. ಸಂಜೀವ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಶಿವಾನಂದ ಕಣವಿ ಇದ್ದರು. ಚೆನ್ನವೀರ ಕಣವಿ ಕಾವ್ಯ ಸ್ಪರ್ಧೆಯಲ್ಲಿ ಬ್ಯಾಡಗಿಯ ಕೆರವಡಿಯ ಮಧು ಕಾರಗಿ ಅವರ ‘ಮಿತಿ’ ಕಾವ್ಯ ಪ್ರಥಮ, ಬಂಟ್ವಾಳದ ಜಯಶ್ರೀ ಇಡ್ಕಿದು ಅವರ ‘ಅಮ್ಮ ಮತ್ತು ಚೂಡಿದಾರ’ ಕಾವ್ಯ ದ್ವಿತೀಯ ಹಾಗೂ ಮಾನ್ವಿಯ ಸಂಜೀವ ಜಗ್ಲಿಯ ‘ಸೂಳೆ ಯಾರು’ ಮತ್ತು ಶಿರಸಿಯ ಚಂದನ ಡಿ. ನಾಯ್ಕ ಅವರ ‘ಯಾಕಿಷ್ಟೊಂದು ನೆನಪಾಗುತ್ತಿಯೇ’ ಕಾವ್ಯಕ್ಕೆ ತೃತೀಯ ಬಹುಮಾನ ಪಡೆದುಕೊಂಡರು.
ಶಾಂತಾದೇವಿ ಕಣವಿ ಕಥಾ ಸ್ಪರ್ಧೆಯಲ್ಲಿ ಸಾಗರದ ದಿವ್ಯಶ್ರೀ ಅದರಂತೆಯ ‘ಪುಟ್ಟಿ’ ಕಥೆ ಪ್ರಥಮ, ಬೆಳಗಾವಿಯ ರಂಜಿತಾ ವಿಕ್ರಮ ಮಹಾಜನ ‘ಭಿಕ್ಷೆ’ ಕಥೆ ದ್ವಿತೀಯ ಹಾಗೂ ಕಾರಟಗಿಯ ವಿದ್ಯಾಶ್ರೀ ಹಡಪದ ‘ಪಶ್ಚಾತ್ತಾಪ’ ಕಥೆ ಮತ್ತು ಸವಣೂರ ಕುರುಬರ ಮಲ್ಲೂರಿನ ಡಾ. ಕಾವ್ಯಾ ಕೆ.ಎಸ್. ‘ಬೆಂಕಿ ಹಿಂದಿನ ಆ ನೆರಳು...!’ ಕಥೆಗೆ ತೃತೀಯ ಬಹುಮಾನ ಪಡೆದುಕೊಂಡರು. ಎರಡು ಸ್ಪರ್ಧೆಯ ವಿಜೇತರಿಗೆ ನಗದು ಬಹುಮಾನ ಮತ್ತು ಫಲಕದೊಂದಿಗೆ ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.